ADVERTISEMENT

ಹಲವೆಡೆ ನಿರ್ಬಂಧ: ದೆಹಲಿಯಲ್ಲಿ ವಾರಾಂತ್ಯ, ಪಂಜಾಬ್‌ನಲ್ಲಿ ರಾತ್ರಿ ಕರ್ಫ್ಯೂ

ಛತ್ತೀಸಗಡದಲ್ಲಿ ಸಾರ್ವಜನಿಕ ಸಮಾರಂಭಗಳಿಗೆ ನಿಷೇಧ

ಪಿಟಿಐ
Published 4 ಜನವರಿ 2022, 19:05 IST
Last Updated 4 ಜನವರಿ 2022, 19:05 IST
ಕೋವಿಡ್‌ ಮೂರನೇ ಅಲೆ ಸನ್ನಿಹಿತವಾಗಿರುವ ಕಾರಣ ಕೊಯಮತ್ತೂರಿನಲ್ಲಿ ಕೋವಿಡ್‌ ಆರೈಕೆ ಕೇಂದ್ರವನ್ನು ಸಜ್ಜುಗೊಳಿಸಲಾಗಿದೆ ಪಿಟಿಐ ಚಿತ್ರ
ಕೋವಿಡ್‌ ಮೂರನೇ ಅಲೆ ಸನ್ನಿಹಿತವಾಗಿರುವ ಕಾರಣ ಕೊಯಮತ್ತೂರಿನಲ್ಲಿ ಕೋವಿಡ್‌ ಆರೈಕೆ ಕೇಂದ್ರವನ್ನು ಸಜ್ಜುಗೊಳಿಸಲಾಗಿದೆ ಪಿಟಿಐ ಚಿತ್ರ   

ನವದೆಹಲಿ: ಕೊರೊನಾ ವೈರಾಣುವಿನ ಹೊಸ ರೂಪಾಂತರ ತಳಿ ಓಮೈಕ್ರಾನ್‌ ಸೋಂಕು ಮತ್ತು ಡೆಲ್ಟಾ ತಳಿಯ ಸೋಂಕು ಪ್ರಕರಣಗಳ ಸಂಖ್ಯೆ ತೀವ್ರವಾಗಿ ಏರುತ್ತಿದ್ದಂತೆಯೇ ದೇಶದ ಹಲವು ರಾಜ್ಯಗಳಲ್ಲಿ ವಿವಿಧ ರೀತಿಯ ನಿರ್ಬಂಧಗಳನ್ನು ಹೇರಲಾಗಿದೆ.ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ವಾರಾಂತ್ಯದ ಕರ್ಫ್ಯೂ ಮತ್ತೆ ಬಂದಿದೆ.

ಅಗತ್ಯ ಸೇವೆಯಲ್ಲಿ ತೊಡಗಿರುವವರನ್ನು ಬಿಟ್ಟು ಉಳಿದ ಸರ್ಕಾರಿ ನೌಕರರನ್ನು ಮನೆಯಿಂದಲೇ ಕೆಲಸ ಮಾಡಲು ಸೂಚಿಸಲಾಗುವುದು. ಖಾಸಗಿ ಕಚೇರಿಗಳಲ್ಲಿ ಸಿಬ್ಬಂದಿ ಸಾಮರ್ಥ್ಯದ ಶೇ 50ರಷ್ಟು ಮಂದಿಗೆ ಮಾತ್ರ ಅವಕಾಶ ನೀಡಲಾಗುವುದು ಎಂದು ದೆಹಲಿ ಉಪ ಮುಖ್ಯಮಂತ್ರಿ ಮನೀಶ್‌ ಸಿಸೋಡಿಯಾ ಆನ್‌ಲೈನ್‌ ಮಾಧ್ಯಮಗೋಷ್ಠಿಯಲ್ಲಿ ಪ್ರಕಟಿಸಿದ್ದಾರೆ. ದೆಹಲಿ ವಿಪತ್ತು ನಿರ್ವಹಣಾ ಪ್ರಾಧಿಕಾರದ (ಡಿಡಿಎಂಎ) ಸಭೆಯಲ್ಲಿ ಈ ನಿರ್ಧಾರಗಳನ್ನು ಕೈಗೊಳ್ಳಲಾಗಿದೆ.

ಬಸ್‌ ಮತ್ತು ಮೆಟ್ರೊಗಳಲ್ಲಿ ಪೂರ್ಣ ಸಾಮರ್ಥ್ಯದಷ್ಟು ಜನರು ಸಂಚರಿಸಲು ಅವಕಾಶ ಕೊಡಲಾಗಿದೆ. ಬಸ್‌ ಮತ್ತು ಮೆಟ್ರೊಗಳ ಆಸನ ಸಾಮರ್ಥ್ಯದ ಶೇ 50ರಷ್ಟರಲ್ಲಿ ಮಾತ್ರ ಜನ ಸಂಚರಿಸಬಹುದು ಎಂಬ ನಿಯಮವನ್ನು ಹಿಂದೆ ಮಾಡಲಾಗಿತ್ತು. ಇದರಿಂದಾಗಿ ಬಸ್‌ ಮತ್ತು ಮೆಟ್ರೊ ನಿಲ್ದಾಣಗಳ ಮುಂದೆ ಜನರು ಸಾಲು ನಿಲ್ಲುವ ಸ್ಥಿತಿ ನಿರ್ಮಾಣ ಆಗಿತ್ತು.

ADVERTISEMENT

ವಾರಾಂತ್ಯದ ಕರ್ಫ್ಯೂ ಶುಕ್ರವಾರ ರಾತ್ರಿಯೇ ಆರಂಭವಾಗಲಿದೆ. ಸೋಮವಾರ ಬೆಳಿಗ್ಗೆವರೆಗೆ ಇರುತ್ತದೆ ಎಂದು ಸಿಸೋಡಿಯಾ ತಿಳಿಸಿದ್ದಾರೆ.

ಕೋವಿಡ್‌ ದೃಢಪಡುವಿಕೆ ದರವು ಶೇ 0.5ರಷ್ಟನ್ನು ಮೀರಿದ ಕಾರಣ ಕಳೆದ ವರ್ಷದ ಡಿಸೆಂಬರ್‌ 28ರಂದು ಡಿಡಿಎಂಎ ದೆಹಲಿಯಲ್ಲಿ ‘ಯೆಲ್ಲೋ ಅಲರ್ಟ್‌’ ಘೋಷಿಸಿತ್ತು. ಸಿನಿಮಾ ಮಂದಿರ ಮತ್ತು ಜಿಮ್‌ಗಳನ್ನು ಬಂದ್‌ ಮಾಡಲು ಸೂಚಿಸಲಾಗಿತ್ತು. ಕಳೆದ ಡಿಸೆಂಬರ್‌ 27ರಿಂದಲೇ ದೆಹಲಿಯಲ್ಲಿ ರಾತ್ರಿ ಕರ್ಫ್ಯೂ ಜಾರಿಯಲ್ಲಿದೆ.

ಛತ್ತೀಸಗಡದಲ್ಲಿ ರ್‍ಯಾಲಿ, ಮೆರವಣಿಗೆ ಮತ್ತು ಇತರ ಸಾರ್ವಜನಿಕ ಕಾರ್ಯಕ್ರಮಗಳನ್ನು ನಿಷೇಧಿಸಲಾಗಿದೆ. ಕೋವಿಡ್‌ ದೃಢಪಡುವಿಕೆ ಪ್ರಮಾಣವು ಶೇ 4ಕ್ಕಿಂತ ಹೆಚ್ಚು ಇರುವ ಜಿಲ್ಲೆಗಳಲ್ಲಿ ರಾತ್ರಿ 10ರಿಂದ ಬೆಳಿಗ್ಗೆ 6ರವರೆಗೆ ಕರ್ಫ್ಯೂ ಹೇರಲಾಗಿದೆ.

ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಹಾಸಿಗೆ ಲಭ್ಯತೆಯ ಮಾಹಿತಿಯನ್ನು ಆನ್‌ಲೈನ್‌ನಲ್ಲಿ ಪ್ರಕಟಿಸಲು ಸೂಚಿಸಲಾಗಿದೆ. ಅಗತ್ಯ ಇದ್ದಲ್ಲೆಲ್ಲ ಸೆಕ್ಷನ್‌ 144ರ ಅನ್ವಯ ನಿರ್ಬಂಧಗಳನ್ನು ಹೇರಲು ಜಿಲ್ಲಾಡಳಿತಗಳಿಗೆ ಸೂಚಿಸಲಾಗಿದೆ.

ಕೋವಿಡ್‌ ಪ್ರಕರಣಗಳ ದೈನಂದಿನ ಸಂಖ್ಯೆಯು 20 ಸಾವಿರದ ಗಡಿ ದಾಟಿದರೆ ಮುಂಬೈ ನಗರದಲ್ಲಿ ಲಾಕ್‌ಡೌನ್‌ ಹೇರಬೇಕಾಗಬಹುದು ಎಂದು ನಗರದ ಮೇಯರ್‌ ಕಿಶೋರಿ ಪೆಡೆಂಕರ್‌ ಹೇಳಿದ್ದಾರೆ. ಪುಣೆ ಜಿಲ್ಲೆಯಲ್ಲಿ 1ರಿಂದ 8ನೇ ತರಗತಿವರೆಗಿನ ಶಾಲೆಗಳನ್ನು ಇದೇ 30ರವರೆಗೆ ಮುಚ್ಚಲು ಆದೇಶಿಸಲಾಗಿದೆ.

ಪಂಜಾಬ್‌ನಲ್ಲಿ ರಾತ್ರಿ ಕರ್ಫ್ಯೂ ಹೇರಲು ಮಂಗಳವಾರ ನಿರ್ಧರಿಸಲಾಗಿದೆ. ಶಿಕ್ಷಣ ಸಂಸ್ಥೆಗಳನ್ನು ಮುಚ್ಚಲು ಆದೇಶಿಸಲಾಗಿದೆ. ಸಿನಿಮಾ ಮಂದಿರ, ಸ್ಪಾ, ಮಾಲ್‌ ಮತ್ತು ಹೋಟೆಲುಗಳಲ್ಲಿ ಆಸನ ಸಾಮರ್ಥ್ಯದ ಶೇ 50ರಷ್ಟು ಜನರಿಗೆ ಮಾತ್ರ ಅವಕಾಶ ನೀಡಲಾಗಿದೆ. ಈ ನಿರ್ಬಂಧಗಳು ಇದೇ 15ರವರೆಗೆ ಜಾರಿಯಲ್ಲಿ ಇರಲಿವೆ.

ಮಹಾರಾಷ್ಟ್ರದ 70 ಶಾಸಕರಿಗೆ ಕೋವಿಡ್

ಮಹಾರಾಷ್ಟ್ರದಲ್ಲಿ ಸಚಿವ ಏಕನಾಥ ಶಿಂಧೆ, ಶಿವಸೇನಾ ಸಂಸದ ಅರವಿಂದ ಸಾವಂತ್ ಸೇರಿದಂತೆ 13 ಸಚಿವರು ಹಾಗೂ 70 ಶಾಸಕರಿಗೆ ಕೋವಿಡ್‌ ದೃಢಪಟ್ಟಿದೆ. ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್, ಕಾಂಗ್ರೆಸ್ ಪಕ್ಷದ ಪ್ರಧಾನ ವಕ್ತಾರ ರಣದೀಪ್ ಸುರ್ಜೇವಾಲಾ, ಕೇಂದ್ರದ ಮಾಜಿ ಸಚಿವ ಬಾಬುಲ್ ಸುಪ್ರಿಯೊ, ಬಿಜೆಪಿ ಸಂಸದ ಮನೋಜ್‌ ತಿವಾರಿ, ಬಂಗಾಳ ಕ್ರಿಕೆಟ್ ಅಸೋಸಿಯೇಷನ್ ಅಧ್ಯಕ್ಷ ಅವಿಶೇಕ್ ದಾಲ್ಮಿಯಾ, ಮಾಜಿ ಕ್ರಿಕೆಟಿಗ ಲಕ್ಷ್ಮೀ ರತನ್ ಶುಕ್ಲಾ ಅವರಿಗೂ ಸೋಂಕು ದೃಢಪಟ್ಟಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.