ADVERTISEMENT

ಡಿಜಿಟಲೀಕರಣಕ್ಕೆ ವೇಗ ನೀಡಿದ ಕೋವಿಡ್‌ ಪಿಡುಗು: ಮಾಂಡವೀಯಾ

​ಪ್ರಜಾವಾಣಿ ವಾರ್ತೆ
Published 13 ಜನವರಿ 2023, 15:45 IST
Last Updated 13 ಜನವರಿ 2023, 15:45 IST
ಕೇಂದ್ರ ಆರೋಗ್ಯ ಸಚಿವ ಮನ್ಸುಖ್‌ ಮಾಂಡವೀಯಾ
ಕೇಂದ್ರ ಆರೋಗ್ಯ ಸಚಿವ ಮನ್ಸುಖ್‌ ಮಾಂಡವೀಯಾ   

ನವದೆಹಲಿ: ಕೋವಿಡ್‌ –19 ಪಿಡುಗು ಹಲವು ಸವಾಲುಗಳ ನಡುವೆಯೂ ಬೆಳವಣಿಗೆಯ ವೇಗ ವರ್ಧಕವಾಗಿದೆ ಮತ್ತು ಡಿಜಿಟಲ್ ಸಾಧನಗಳ (ಟೂಲ್ಸ್‌) ಅಳವಡಿಕೆ ಚುರುಕುಗೊಳಿಸಿದೆ ಎಂದು ಕೇಂದ್ರ ಆರೋಗ್ಯ ಸಚಿವ ಮನ್ಸುಖ್‌ ಮಾಂಡವೀಯಾ ಶುಕ್ರವಾರ ಹೇಳಿದರು.

‘ವಾಯ್ಸ್‌ ಆಫ್‌ ಗ್ಲೋಬಲ್‌ ಸಮ್ಮಿಟ್‌ 2023’ರ ಆರೋಗ್ಯ ಸಚಿವರ ಅಧಿವೇಶನ ಉದ್ದೇಶಿಸಿ ಮಾತನಾಡಿದ ಅವರು, ಭಾರತದ ಅಧ್ಯಕ್ಷತೆಯಲ್ಲಿ ಜಿ– 20 ಜಾಗತಿಕ ಉಪಕ್ರಮವು ಉದ್ದೇಶಿತ ಡಿಜಿಟಲ್ ಆರೋಗ್ಯದ ಬಗ್ಗೆ ಮತ್ತು ಡಿಜಿಟಲ್ ವಿಭಜನೆ ಸಮಸ್ಯೆ ನಿವಾರಿಸಲು ಆದ್ಯತೆ ನೀಡುತ್ತದೆ ಎಂದು ಒತ್ತಿ ಹೇಳಿದರು.

‘ಕಡಿಮೆ ಮಧ್ಯಮ-ಆದಾಯದ ದೇಶಗಳ ಮೇಲೆ ನಿರ್ದಿಷ್ಟ ಗಮನ ಕೇಂದ್ರೀಕರಿಸಿದ ಈ ಉಪಕ್ರಮವು ಆರೋಗ್ಯ ಸೇವಾ ವಿತರಣೆಯಲ್ಲಿ ಡಿಜಿಟಲ್ ಸಾಧನಗಳ ಬಳಕೆಯ ಅನುಷ್ಠಾನ ಮತ್ತು ಸಾಂಸ್ಥಿಕಗೊಳಿಸುವುದು, ವೈಜ್ಞಾನಿಕ ಪರಿಣತಿ, ಸಾರ್ವಜನಿಕ ಆರೋಗ್ಯದ ಡಿಜಿಟಲ್ ಸರಕುಗಳ ಅಭಿವೃದ್ಧಿಯನ್ನು ಒಟ್ಟಿಗೆ ಕೊಂಡೊಯ್ಯುತ್ತದೆ’ ಎಂದು ಪ್ರತಿಪಾದಿಸಿದರು.

ADVERTISEMENT

‘ನಾವು ಪರಸ್ಪರ ಅವಲಂಬಿತ ಜಗತ್ತಿನಲ್ಲಿ ಬದುಕುತ್ತಿದ್ದೇವೆ ಮತ್ತು ಯಾವುದೇ ಸಾರ್ವಜನಿಕ ಆರೋಗ್ಯ ತುರ್ತುಸ್ಥಿತಿ ನಿರ್ವಹಿಸುವಾಗ ನಾವೆಲ್ಲರೂ ಅಸಹಾಯಕರು ಎನ್ನುವ ಪಾಠವನ್ನು ಕೋವಿಡ್‌ ಪಿಡುಗು ಕಲಿಸಿದೆ. ಆರೋಗ್ಯ ವ್ಯವಸ್ಥೆಗಳಲ್ಲಿರುವ ಸವಾಲುಗಳನ್ನು ಎದುರಿಸಲು ಆರೋಗ್ಯ ಸೇವಾ ವಿತರಣೆ, ಮೂಲಸೌಕರ್ಯಗಳಲ್ಲಿ ಸಮಗ್ರ ರೂಪಾಂತರದ ಅಗತ್ಯವನ್ನು ಎತ್ತಿ ತೋರಿಸಿದೆ’ ಎಂದು ಸಚಿವರು ಹೇಳಿದರು.

ಭಾರತವು ಸ್ಥಳೀಯವಾಗಿ ಅಭಿವೃದ್ಧಿಪಡಿಸಿದ ಲಸಿಕೆ ನಿರ್ವಹಣಾ ಕೋವಿನ್‌ ಆ್ಯಪ್‌ ಅನ್ನು ಸಾರ್ವಜನಿಕ ಆರೋಗ್ಯ ಸೇವೆಗಾಗಿ ವಿಶ್ವ ಆರೋಗ್ಯ ಸಂಸ್ಥೆಗೆ ಡಿಜಿಟಲ್ ಕೊಡುಗೆ ನೀಡಿದೆ. 140ಕ್ಕೂ ಹೆಚ್ಚು ಆಸಕ್ತ ದೇಶಗಳಿಗೆ ಈ ತಂತ್ರಾಂಶವನ್ನು ಉಚಿತವಾಗಿ ನೀಡಲಾಗಿದೆ ಎಂದು ಮಾಂಡವೀಯಾ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.