ADVERTISEMENT

ಹಠಾತ್‌ ಸಾವಿಗೆ ಕೋವಿಡ್‌ ಲಸಿಕೆ ಕಾರಣವಲ್ಲ: ಐಸಿಎಂಆರ್‌ ಅಧ್ಯಯನದಿಂದ ದೃಢ

​ಪ್ರಜಾವಾಣಿ ವಾರ್ತೆ
Published 30 ಅಕ್ಟೋಬರ್ 2023, 16:24 IST
Last Updated 30 ಅಕ್ಟೋಬರ್ 2023, 16:24 IST
<div class="paragraphs"><p>ಕೋವಿಡ್‌ ಲಸಿಕೆ– ಸಾಂದರ್ಭಿಕ ಚಿತ್ರ</p></div>

ಕೋವಿಡ್‌ ಲಸಿಕೆ– ಸಾಂದರ್ಭಿಕ ಚಿತ್ರ

   

ನವದೆಹಲಿ: ‘ಕೋವಿಡ್‌ ಲಸಿಕೆಯಿಂದ ದೇಶದಲ್ಲಿ 18 ರಿಂದ 45 ವರ್ಷದ ವಯೋಮಾನದವರಲ್ಲಿ ಹಠಾತ್‌ ಸಾವಿನ ಅಪಾಯದ ಸಾಧ್ಯತೆ ಹೆಚ್ಚಿಲ್ಲ’ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಪರಿಷತ್‌ನ (ಐಸಿಎಂಆರ್‌) ಅಧ್ಯಯನ ಹೇಳಿದೆ.

ಕೊರೊನಾ ಸೋಂಕಿತರು ಆಸ್ಪತ್ರೆಗೆ ದಾಖಲಾಗುವುದಕ್ಕೂ ಮೊದಲು ಅತಿಯಾದ ಕುಡಿತ ಹಾಗೂ ಅತಿಯಾಗಿ ದೈಹಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದೇ ಅವರ ಸಾವಿಗೆ ಮೂಲ ಕಾರಣವಾಗಿದೆ ಎಂದು ಅಧ್ಯಯನ ಹೇಳಿದೆ.

ADVERTISEMENT

‘ಈ ಅಧ್ಯಯನದ ವರದಿಯು ಇನ್ನು ಪರಿಶೀಲನೆಯಲ್ಲಿದ್ದು, ಇನ್ನಷ್ಟೆ ಪ್ರಕಟವಾಗಬೇಕಾಗಿದೆ. ಅಧ್ಯಯನ ಪ್ರಕ್ರಿಯೆಯು ಇದೇ ತಿಂಗಳು ಪೂರ್ಣಗೊಂಡಿದೆ’ ಎಂದು ಐಸಿಎಂಆರ್‌ನ ಮೂಲಗಳು ತಿಳಿಸಿವೆ.

ಐಸಿಎಂಆರ್ ಅಧ್ಯಯನ ಉಲ್ಲೇಖಿಸಿ ಗುಜರಾತ್‌ನ ಭಾವ್‌ನಗರದಲ್ಲಿ ಭಾನುವಾರ ಪ್ರತಿಕ್ರಿಯಿಸಿದ್ದ ಕೇಂದ್ರ ಆರೋಗ್ಯ ಸಚಿವ ಮನ್‌ಸುಖ್‌ ಮಾಂಡವೀಯ, ‘ಕೋವಿಡ್‌ನಿಂದ ಬಾಧಿತರಾಗಿದ್ದವರು ಕನಿಷ್ಠ ಒಂದೆರಡು ವರ್ಷ ಅತಿಯಾದ ದೈಹಿಕ ಚಟುವಟಿಕೆಯಲ್ಲಿ ತೊಡಗಿಕೊಳ್ಳಬಾರದಿತ್ತು. ಇದರಿಂದ ಹಠಾತ್ ಹೃದಯಾಘಾತ ಹಾಗೂ ಹೃದಯಸ್ತಂಭನ ತಪ್ಪಿಸಬಹುದಿತ್ತು’ ಎಂದು ಹೇಳಿದ್ದರು.

ಆರೋಗ್ಯವಂತ ಯುವಜನರ ಅಕಾಲಿಕ ಮರಣದ ವರದಿಗಳಿಂದಾಗಿ ಸಂಶೋಧಕರು ವಸ್ತುಸ್ಥಿತಿ ತನಿಖೆಗೆ ಮುಂದಾಗಿದ್ದರು. ಹಠಾತ್ ಸಾವುಗಳ ಕುರಿತು ಕಳವಳ ಕೇಳಿಬಂದಿದ್ದು, ಕೋವಿಡ್‌ ಲಸಿಕೆಯು ಕಾರಣ ಇರಬಹುದು ಎಂಬ ಶಂಕೆಯೂ ಮೂಡಿತ್ತು. 

ಆರೋಗ್ಯವಂತ ಯುವಜನರ ಹಠಾತ್‌ ಸಾವುಗಳಿಗೆ ಕಾರಣ ತಿಳಿಯಲು ಈ ಅಧ್ಯಯನ ನಡೆಸಲಾಗಿತ್ತು. 2021ರ ಅ.1 ಮತ್ತು 2023ರ ಮಾರ್ಚ್‌ 31ರ ನಡುವೆ ಸಂಭವಿಸಿದ್ದ 18ರಿಂದ 45 ವರ್ಷ ವಯೋಮಾನದ, ಯಾವುದೇ ಆರೋಗ್ಯ ಸಮಸ್ಯೆಗಳಿಲ್ಲದ ವ್ಯಕ್ತಿಗಳ ಅಕಾಲಿಕ ಸಾವಿನ ಪ್ರಕರಣಗಳನ್ನು ಈ ಅಧ್ಯಯನಕ್ಕೆ ಪರಿಗಣಿಸಲಾಗಿತ್ತು.

ವಯಸ್ಸು, ಲಿಂಗ, ಸ್ಥಳ ಕುರಿತ ಅಂಶಗಳ ಆಧಾರದಲ್ಲಿ 729 ಪ್ರಕರಣಗಳಿಗೆ ಸಂಬಂಧಿಸಿದ ಮಾಹಿತಿ ಕಲೆ ಹಾಕಲಾಗಿತ್ತು. ಮೃತರ ವೈದ್ಯಕೀಯ ಹಿನ್ನೆಲೆ, ವರ್ತನೆ (ಧೂಮಪಾನ, ಮದ್ಯಪಾನ, ಅತಿಯಾದ ದೈಹಿಕ ಶ್ರಮ), ಕೋವಿಡ್‌ ಕಾರಣದಿಂದ ಆಸ್ಪತ್ರೆಗೆ ದಾಖಲಾಗಿದ್ದರೆ ಹಾಗೂ ಅವರಿಗೆ ಕೋವಿಡ್‌ ಲಸಿಕೆ ನೀಡಲಾಗಿತ್ತೆ ಎಂಬ ವಿವರಗಳನ್ನು ಕಲೆಹಾಕಲಾಗಿತ್ತು. 

ಅಂತಿಮವಾಗಿ, ಭಾರತದಲ್ಲಿ ಈ ವಯೋಮಾನದವರಲ್ಲಿ ಹಠಾತ್ ಸಾವಿನ ಸಾಧ್ಯತೆ ಹೆಚ್ಚಳಕ್ಕೆ ಕೋವಿಡ್ ಲಸಿಕೆಯು ಕಾರಣವಾಗಿಲ್ಲ. ವಾಸ್ತವವಾಗಿ ಕೋವಿಡ್‌ ಲಸಿಕೆಯು ವಯಸ್ಕರಲ್ಲಿ ಸಾವಿನ ಸಾಧ್ಯತೆಗಳನ್ನು ಕುಗ್ಗಿಸಿದೆ ಎಂದು ಅಧ್ಯಯನ ವರದಿ ಅಭಿಪ್ರಾಯಪಟ್ಟಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.