ADVERTISEMENT

ಲಸಿಕೆ ನೀಡಿಕೆ ಹಿನ್ನಡೆಗೆ ರಾಜ್ಯಗಳೇ ಹೊಣೆ – ಕೇಂದ್ರ ಸಚಿವ ಮಾಂಡವಿಯ ಆರೋಪ

ರಾಜ್ಯಗಳು ಸರಿಯಾಗಿ ಯೋಜನೆ ರೂಪಿಸಿಲ್ಲ ಎಂದ ಕೇಂದ್ರ ಆರೋಗ್ಯ ಸಚಿವ

​ಪ್ರಜಾವಾಣಿ ವಾರ್ತೆ
Published 14 ಜುಲೈ 2021, 20:37 IST
Last Updated 14 ಜುಲೈ 2021, 20:37 IST
ಮನಸುಖ್‌ ಮಾಂಡವಿಯ
ಮನಸುಖ್‌ ಮಾಂಡವಿಯ   

ನವದೆಹಲಿ: ಕೋವಿಡ್‌–19 ಲಸಿಕೆ ಅಭಿಯಾನವು ಯೋಜಿಸಿದಂತೆ ನಡೆಯದಿರಲು ಮತ್ತು ಲಸಿಕೆ ಕೇಂದ್ರಗಳ ಮುಂದೆ ಜನರು ಸಾಲುಗಟ್ಟಲುರಾಜ್ಯಗಳೇ ಕಾರಣ ಎಂದು ಕೇಂದ್ರ ಆರೋಗ್ಯ ಸಚಿವ ಮನಸುಖ್‌ ಮಾಂಡವಿಯ ಬುಧವಾರ ಆರೋಪಿಸಿದ್ದಾರೆ. ಆದರೆ, ಪದೇ ಪದೇ ವಿನಂತಿ ಮಾಡಿದರೂ ಅಗತ್ಯ ಪ್ರಮಾಣದ ಲಸಿಕೆಯನ್ನು ರಾಜ್ಯಗಳಿಗೆ ಏಕೆ ಪೂರೈಸಿಲ್ಲ ಎಂಬುದಕ್ಕೆ ಅವರು ವಿವರಣೆ ಕೊಟ್ಟಿಲ್ಲ.

ಜುಲೈ ತಿಂಗಳಲ್ಲಿ ಎಷ್ಟು ಡೋಸ್‌ ಲಸಿಕೆ ದೊರೆಯಲಿದೆ ಎಂಬುದನ್ನು ರಾಜ್ಯಗಳಿಗೆ ಮೂರು ಬಾರಿ ತಿಳಿಸಲಾಗಿತ್ತು. ಅದಕ್ಕೆ ಅನುಗುಣವಾಗಿ ಲಸಿಕೆ ಅಭಿಯಾನವನ್ನು ರಾಜ್ಯಗಳು ಯೋಜಿಸಬೇಕಿತ್ತು. ಆದರೆ, ರಾಜ್ಯಗಳಲ್ಲಿ ಲಸಿಕೆಗಳ ಕೊರತೆಗೆ ಕಾರಣವೇನು ಎಂಬ ಬಗ್ಗೆ ಅಧಿಕೃತ ಮಾಹಿತಿಯೇನೂ ಬಂದಿಲ್ಲ.

ಲಸಿಕೆಯ ಕೊರತೆ ಇದೆ ಎಂಬ ವರದಿಗಳನ್ನು ಮಾಂಡವಿಯ ಅವರು ಅಲ್ಲಗಳೆದಿದ್ದಾರೆ. ಲಸಿಕೆ ಲಭ್ಯವಿಲ್ಲ ಎಂಬ ಅಪ್ರಯೋಜಕ ಹೇಳಿಕೆಗಳ ಮೂಲಕ ರಾಜ್ಯಗಳು ಜನರಲ್ಲಿ ಭೀತಿ ಮೂಡಿಸುತ್ತಿವೆ ಎಂಬ ಗಂಭೀರ ಆರೋಪವನ್ನೂ ಅವರು ಮಾಡಿದ್ದಾರೆ. ಆದರೆ, ರಾಜ್ಯಗಳಲ್ಲಿ ಅಗತ್ಯ ಪ್ರಮಾಣದ ಲಸಿಕೆ ಡೋಸ್‌ಗಳು ಲಭ್ಯ ಇವೆ ಎಂಬುದನ್ನು ಪ್ರತಿಪಾದಿಸಲು ಬೇಕಾದ ಯಾವುದೇ ಅಂಕಿಅಂಶವನ್ನು ಅವರು ನೀಡಿಲ್ಲ.

ತಮಿಳುನಾಡು, ರಾಜಸ್ಥಾನ, ಉತ್ತರ ಪ್ರದೇಶ, ಮಹಾರಾಷ್ಟ್ರ, ದೆಹಲಿ ಮತ್ತು ಪಶ್ಚಿಮ ಬಂಗಾಳ ರಾಜ್ಯಗಳಲ್ಲಿಲಸಿಕೆ ಕೊರತೆಯಿಂದಾಗಿ ಹಲವು ಲಸಿಕಾ ಕೇಂದ್ರಗಳನ್ನು ಸ್ಥಗಿತಗೊಳಿಸಲಾಗಿದೆ. ಹರಿಯಾಣ, ಆಂಧ್ರ ಪ್ರದೇಶ, ಕರ್ನಾಟಕ, ಗುಜರಾತ್‌ ಮತ್ತು ಛತ್ತೀಸಗಡ ರಾಜ್ಯಗಳಲ್ಲಿ ಜೂನ್‌ 21–26ರ ಅವಧಿಯಲ್ಲಿ ಗರಿಷ್ಠ ಪ್ರಮಾಣದಲ್ಲಿ ಲಸಿಕೆ ಹಾಕಲಾಗಿತ್ತು. ನಂತರದ ದಿನಗಳಲ್ಲಿ ಈ ಪ್ರಮಾಣ ಕುಸಿಯುತ್ತಲೇ ಇದೆ.

ಕೋವಿಡ್‌ ಲಸಿಕೆಯ ಒಂದು ಕೋಟಿ ಡೋಸ್‌ಗಳನ್ನು ತಮಿಳುನಾಡಿಗೆ ಹೆಚ್ಚುವರಿಯಾಗಿ ಒದಗಿಸಬೇಕು ಎಂದು ಅಲ್ಲಿನ ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್‌ ಅವರು ಪ್ರಧಾನಿ ನರೇಂದ್ರ ಮೋದಿಯವರನ್ನು ಮಂಗಳವಾರ ಕೋರಿದ್ದಾರೆ.

ಎಲ್ಲ ಅರ್ಹ ಫಲಾನುಭವಿಗಳಿಗೆ ಅತ್ಯಂತ ವೇಗವಾಗಿ ಲಸಿಕೆ ಹಾಕಿಸಬೇಕಿದ್ದರೆ ತಿಂಗಳಿಗೆ ಮೂರು ಕೋಟಿ ಡೋಸ್‌ ಲಸಿಕೆ ಬೇಕು ಎಂದು ಮಹಾರಾಷ್ಟ್ರದ ಆರೋಗ್ಯ ಸಚಿವ ರಾಜೇಶ್‌ ಟೋಪೆ ಹೇಳಿದ್ದಾರೆ.

ಸಮರ್ಪಕ ಬೇಡಿಕೆ ಸಲ್ಲಿಸದ ಖಾಸಗಿ ಕೇಂದ್ರಗಳು: ಹಲವು ರಾಜ್ಯಗಳಲ್ಲಿನ ‘ಕೋವಿಡ್‌ ಲಸಿಕೆ ನೀಡುವ ಖಾಸಗಿ ಕೇಂದ್ರ’ಗಳು (ಪಿಸಿವಿಸಿ) ಅಗತ್ಯ ಪ್ರಮಾಣದಷ್ಟು ಲಸಿಕೆಯ ಡೋಸ್‌ಗಳನ್ನು ಪೂರೈಸುವಂತೆ ಕಂಪನಿಗಳಿಗೆ ಬೇಡಿಕೆಯನ್ನೇ ಸಲ್ಲಿಸಿಲ್ಲ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಬುಧವಾರ ಆರೋಪಿಸಿದೆ.

ಖಾಸಗಿ ಕೇಂದ್ರಗಳ ಇಂಥ ಧೋರಣೆಯಿಂದಾಗಿ ಲಸಿಕೆ ಕಾರ್ಯಕ್ರಮಕ್ಕೆ ನಿರೀಕ್ಷಿತ ವೇಗ ಸಿಗುತ್ತಿಲ್ಲ. ಖಾಸಗಿ ಕೇಂದ್ರಗಳಿಗೆ ಸುಲಭವಾಗಿ ಲಸಿಕೆ ದೊರೆಯುವಂತಾದರೆ ಈ ಕಾರ್ಯಕ್ರಮಕ್ಕೆ ವೇಗ ಸಿಗಲಿದೆ. ಈ ದಿಸೆಯಲ್ಲಿ ರಾಜ್ಯ ಸರ್ಕಾರಗಳು ಕ್ರಮ ಕೈಗೊಳ್ಳಬೇಕು ಎಂದು ಸಚಿವಾಲಯದ ಕಾರ್ಯದರ್ಶಿ ರಾಜೇಶ್‌ ಭೂಷಣ್‌ ಹೇಳಿದರು.

ಕರ್ನಾಟಕ ಸೇರಿದಂತೆ 15 ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳ ಆರೋಗ್ಯ ಇಲಾಖೆ ಕಾರ್ಯದರ್ಶಿಗಳು ಹಾಗೂ ಲಸಿಕೆ ಕಾರ್ಯಕ್ರಮದ ಹಿರಿಯ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ಒಂದೆಡೆ ಲಸಿಕೆ ಪೂರೈಕೆಗೆ ಸಮರ್ಪಕ ಬೇಡಿಕೆ ಸಲ್ಲಿಸಲಾಗುತ್ತಿಲ್ಲ. ಪೂರೈಕೆಯಾದ ಲಸಿಕೆಯ ಎತ್ತುವಳಿ ಆಗುತ್ತಿಲ್ಲ. ಮತ್ತೊಂದೆಡೆ ಈ ಮೊದಲು ಪಡೆದ ಲಸಿಕೆಗೆ ಸಂಬಂಧಿಸಿದ ಬಿಲ್‌ ಮೊತ್ತವನ್ನು ಪಾವತಿಸದಿರುವುದು ಕಳವಳಕಾರಿ’ ಎಂದು ಹೇಳಿದರು.

‘ಕೆಲವು ರಾಜ್ಯಗಳಲ್ಲಿ ಖಾಸಗಿ ಕೇಂದ್ರಗಳು ತಮಗೆ ಪೂರೈಕೆಯಾದ ಲಸಿಕೆಯನ್ನು ಎತ್ತುವಳಿ ಮಾಡಿವೆ. ಆದರೆ, ತಾವು ಪಡೆದಿರುವುದಕ್ಕಿಂತ ಕಡಿಮೆ ಡೋಸ್‌ಗಳನ್ನು ನೀಡಿರುವುದು ಕಂಡು ಬಂದಿದೆ’ ಎಂದೂ ಅಸಮಾಧಾನ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.