ಮುಂಬೈ: ಮಹಾರಾಷ್ಟ್ರದಲ್ಲಿ ಕೋವಿಡ್ ತಡೆ ಲಸಿಕೆ ಮತ್ತು ಕೋವಿಡ್ ಔಷಧ ರೆಮ್‌ಡಿಸಿವಿರ್ ಕೊರತೆ ತೀವ್ರವಾಗಿದೆ ಎಂದು ವರದಿಯಾಗಿದೆ.
4.8 ಲಕ್ಷ ಸೋಂಕು ಪ್ರಕರಣಗಳು ವರದಿಯಾಗಿರುವ ಮುಂಬೈನ ಹಲವು ಲಸಿಕೆ ಕೇಂದ್ರಗಳಲ್ಲಿ ಲಸಿಕೆಗಳು ಮುಗಿಯುತ್ತಾ ಬಂದಿವೆ. ಮುಂಬೈನ ಲೋಕಮಾನ್ಯ ತಿಲಕ್ ಜನರಲ್ ಆಸ್ಪತ್ರೆಯಲ್ಲಿ ಲಸಿಕೆ ಹಾಕಿಸುವಿಕೆಯನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗಿದೆ. ಧಾರಾವಿ ಕೊಳೆಗೇರಿಯ ಲಸಿಕೆ ಕೇಂದ್ರದಲ್ಲಿಯೂ ಭಾರಿ ಉದ್ದದ ಸಾಲು ಕಾಣಿಸಿದೆ. 440 ಜನರಿಗೆ ನೀಡುವಷ್ಟು ಲಸಿಕೆ ಮಾತ್ರ ಇದೆ ಎಂದು ಈ ಕೇಂದ್ರದ ಉಸ್ತುವಾರಿ ಹೊಣೆ ಹೊತ್ತಿರುವ ಅಫ್ರಿನಾ ಸುಲ್ತಾನಾ ಖಾನ್ ಹೇಳಿದ್ದಾರೆ. ಲಸಿಕೆ ಯಾವಾಗ ಪೂರೈಕೆ ಆಗಬಹುದು ಎಂಬ ಬಗ್ಗೆಯೂ ಹೆಚ್ಚಿನ ಮಾಹಿತಿ ಇಲ್ಲ ಎಂದು ಅವರು ತಿಳಿಸಿದ್ದಾರೆ.
ಆಂಧ್ರದಲ್ಲೂ ಸಮಸ್ಯೆ: ಆಂಧ್ರ ಪ್ರದೇಶದ ಒಂದು ಜಿಲ್ಲೆಯಲ್ಲಿ ಲಸಿಕೆ ಕೊರತೆಯಿಂದಾಗಿ ಲಸಿಕೆ ಹಾಕುವುದನ್ನು ನಿಲ್ಲಿಸಲಾಗಿದೆ. ‘ಮುಂದಿನ ಎರಡು ದಿನಗಳಿಗೆ ಮಾತ್ರ ಲಸಿಕೆ ಸಂಗ್ರಹ ಇದೆ’ ಎಂದು ಒಡಿಶಾದ ಆರೋಗ್ಯ ಸಚಿವರು ಬರೆದ ಪತ್ರದ ಪ್ರತಿಯು ಸುದ್ದಿಸಂಸ್ಥೆ ಎಎಫ್‌ಪಿಗೆ ಲಭ್ಯವಾಗಿದೆ.
ಈಗ ಇರುವ ಲಸಿಕೆ ಸಂಗ್ರಹವು 2–3 ದಿನಗಳಿಗಷ್ಟೇ ಸಾಕು. ತಕ್ಷಣವೇ ಒಂದು ಕೋಟಿ ಡೋಸ್ ಲಸಿಕೆ ಪೂರೈಸುವಂತೆ ಆಂಧ್ರ ಪ್ರದೇಶ ಸರ್ಕಾರವು ಕೇಂದ್ರವನ್ನು ಕೋರಿದೆ. ‘ಮೂರು ಲಕ್ಷ ಡೋಸ್ ಲಸಿಕೆ ಸಂಗ್ರಹ ಇದೆ. ದಿನಕ್ಕೆ 1.4 ಲಕ್ಷ ಜನರಿಗೆ ಲಸಿಕೆ ಹಾಕಲಾಗುತ್ತಿದೆ’ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಅವರಿಗೆ ತಿಳಿಸಿದ್ದಾರೆ.
ಕೇಂದ್ರ ನಕಾರ: ಲಸಿಕೆ ಕೊರತೆ ಇದೆ ಎಂಬ ವರದಿಗಳನ್ನು ಕೇಂದ್ರ ಸರ್ಕಾರವು ಅಲ್ಲಗಳೆದಿದೆ. ಮಹಾರಾಷ್ಟ್ರದಲ್ಲಿ ಲಸಿಕೆ ಕೊರತೆ ಇದೆ ಎಂಬುದು ಸಂಪೂರ್ಣ ನಿರಾಧಾರ. ಕೆಲವು ರಾಜ್ಯಗಳು ತಮ್ಮ ವೈಫಲ್ಯಗಳಿಂದ ಜನರ ಗಮನ ಬೇರೆಡೆಗೆ ಸೆಳೆಯಲು ಮತ್ತು ಜನರಲ್ಲಿ ಭೀತಿ ಹುಟ್ಟಿಸಲು ಪ್ರಯತ್ನಿಸುತ್ತಿದೆ ಎಂದು ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ಹೇಳಿದ್ದಾರೆ. ಲಸಿಕೆ ಪೂರೈಕೆ ಮೇಲೆ ನಿರಂತರ ನಿಗಾ ಇದೆ. ಪೂರೈಕೆ ವಿಚಾರದಲ್ಲಿ ರಾಜ್ಯಗಳಿಗೆ ಮಾಹಿತಿಯನ್ನೂ ನೀಡಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.
ಸಾಮರ್ಥ್ಯ ಹೆಚ್ಚಿಸಬೇಕಿದೆ:ಲಸಿಕೆ ತಯಾರಿಕಾ ಘಟಕಗಳ ಮೇಲೆ ಭಾರಿ ಒತ್ತಡ ಇದೆ. ತಯಾರಿಕಾ ಸಾಮರ್ಥ್ಯ ಹೆಚ್ಚಿಸಬೇಕಿದ್ದರೆ ಸರ್ಕಾರದಿಂದ ಆರ್ಥಿಕ ನೆರವು ಬೇಕು ಎಂದು ಜಗತ್ತಿನ ಅತ್ಯಂತ ದೊಡ್ಡ ಲಸಿಕೆ ತಯಾರಿಕಾ ಸಂಸ್ಥೆ ಪುಣೆಯ ಸೀರಂ ಇನ್ಸ್‌ಟಿಟ್ಯೂಟ್ ಹೇಳಿದೆ.
ಬಡ ದೇಶಗಳು ಮತ್ತು ಕೆಲವು ಶ್ರೀಮಂತ ದೇಶಗಳು ಲಸಿಕೆಗಾಗಿ ಸೀರಂ ಇನ್ಸ್‌ಟಿಟ್ಯೂಟ್ ಮೇಲೆ ಅವಲಂಬಿತವಾಗಿವೆ. ಆದರೆ, ದೇಶೀಯ ಬಳಕೆಗೆ ಲಸಿಕೆ ಲಭ್ಯವಾಗಬೇಕು ಎಂಬ ಕಾರಣಕ್ಕೆ ಲಸಿಕೆ ರಫ್ತಿನ ಮೇಲೆ ಸರ್ಕಾರವು ಕಳೆದ ತಿಂಗಳು ನಿರ್ಬಂಧ ಹೇರಿದೆ.
ಲಸಿಕೆ ಪೂರೈಕೆ ವಿಳಂಬವನ್ನು ಪ್ರಶ್ನಿಸಿ ಕೋವಿಶೀಲ್ಡ್ ಲಸಿಕೆ ಅಭಿವೃದ್ಧಿಪಡಿಸಿದ ಸಂಸ್ಥೆ ಆಸ್ಟ್ರಾಜೆನೆಕಾವು ತಮಗೆ ನೋಟಿಸ್ ನೀಡಿದೆ ಎಂದು ಸೀರಂನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಆದಾರ್ ಪೂನಾವಾಲಾ ಹೇಳಿದ್ದಾರೆ. ಭಾರತದ ಪರಿಸ್ಥಿತಿ ಸುಧಾರಣೆಯಾದ ಬಳಿಕವೇ ಲಸಿಕೆ ರಫ್ತು ಸಾಧ್ಯ ಎಂದೂ ಅವರು ಹೇಳಿದ್ದಾರೆ.
ರೆಮ್‌ಡಿಸಿವಿರ್‌ಗಾಗಿ ಸರತಿ ಸಾಲು
ಕೋವಿಡ್–19ರ ಚಿಕಿತ್ಸೆಯಲ್ಲಿ ಬಳಕೆಯಾಗುವ ರೆಮ್‌ಡಿಸಿವಿರ್ ಔಷಧದ ದರದ ಮೇಲೆ ನಿಯಂತ್ರಣ ಹೇರಲು ಮಹಾರಾಷ್ಟ್ರ ಸರ್ಕಾರ ಸಜ್ಜಾಗಿದೆ. ಈ ಔಷಧವನ್ನು ಜಾಗರೂಕತೆಯಿಂದ ಬಳಸಿ ಎಂದು ವೈದ್ಯರನ್ನು ಕೋರಲಾಗಿದೆ. ಕಾಳಸಂತೆಯಲ್ಲಿ ಮಾರಾಟ ಆಗುವುದನ್ನು ತಡೆಯುವ ದಿಸೆಯಲ್ಲಿಯೂ ಕೆಲಸ ಮಾಡಲು ಸರ್ಕಾರ ಮುಂದಾಗಿದೆ.
ಮಹಾರಾಷ್ಟ್ರದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆಯು ಸುಮಾರು ಐದು ಲಕ್ಷ ಇದೆ. ಹಾಗಾಗಿ, ರಾಜ್ಯದಲ್ಲಿ ರೆಮ್‌ಡಿಸಿವಿರ್‌ಗೆ ಬೇಡಿಕೆ ಹೆಚ್ಚಿದೆ. ಔಷಧ ಅಂಗಡಿಗಳ ಮುಂದೆ ಭಾರಿ ಉದ್ದದ ಸಾಲುಗಳು ಕಾಣಿಸಿವೆ. ಈ ಸಾಲುಗಳ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.
ಬಿಕ್ಕಟ್ಟು ನಿರ್ವಹಣೆಗಾಗಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ರಾಜೇಶ್ ಟೋಪೆ, ವೈದ್ಯಕೀಯ ಶಿಕ್ಷಣ ಸಚಿವ ಅಮಿತ್ ದೇಶಮುಖ್ ಮತ್ತು ಆಹಾರ ಮತ್ತು ಔಷಧ ನಿರ್ವಹಣೆ ಸಚಿವ ಡಾ.ರಾಜೇಂದ್ರ ಶಿಂಗ್ನೆ ಅವರು ಸಭೆ ನಡೆಸಿದ್ದಾರೆ. ರೆಮ್‌ಡಿಸಿವಿವ್ ಇಂಜೆಕ್ಷನ್‌ಗಳು ಕಾಳಸಂತೆಯಲ್ಲಿ ₹3,000ದಿಂದ ₹5,000ಕ್ಕೆ ಮಾರಾಟ ಆಗುತ್ತಿವೆ ಎಂದು ಶಿಂಗ್ನೆ ಹೇಳಿದ್ದಾರೆ.
ಮೋದಿಗೆ 2ನೇ ಡೋಸ್
ಪ್ರಧಾನಿ ನರೇಂದ್ರ ಮೋದಿ ಅವರು ಕೋವಿಡ್ ತಡೆ ಲಸಿಕೆಯ ಎರಡನೇ ಡೋಸ್ ಅನ್ನು ಗುರುವಾರ ಹಾಕಿಸಿಕೊಂಡಿದ್ದಾರೆ. ‘ವೈರಸ್ ಅನ್ನು ಸೋಲಿಸುವ ಕೆಲವೇ ದಾರಿಗಳಲ್ಲಿ ಲಸಿಕೆ ಹಾಕಿಸಿಕೊಳ್ಳುವುದೂ ಒಂದು’ ಎಂದು ಅವರು ಟ್ವೀಟ್ ಮಾಡಿದ್ದಾರೆ. ಲಸಿಕೆ ಹಾಕಿಸಿಕೊಳ್ಳುವ ಮೂಲಕ ಇತರರು ತಮ್ಮನ್ನು ಅನುಸರಿಸಬೇಕು ಎಂದು ಹೇಳಿದ್ದಾರೆ.
**
5 ಲಕ್ಷ ಡೋಸ್ ಪೋಲು: ಜಾವಡೇಕರ್
ನವದೆಹಲಿ (ಪಿಟಿಐ): ರಾಜ್ಯ ಸರ್ಕಾರವು ಲಸಿಕೆ ಅಭಿಯಾನವನ್ನು ಸರಿಯಾಗಿ ಯೋಜಿಸದ ಕಾರಣ ಐದು ಲಕ್ಷ ಡೋಸ್‌ಗೂ ಅಧಿಕ ಲಸಿಕೆ ಪೋಲಾಗಿದೆ ಎಂದು ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಗುರುವಾರ ಆರೋಪಿಸಿದ್ದಾರೆ.
ಲಸಿಕೆಗೆ ಸಂಬಂಧಿಸಿದ ಮಾಹಿತಿ ಸಂಗ್ರಹಿಸಲಾಗಿದೆ. ಮಹಾರಾಷ್ಟ್ರದಲ್ಲಿ 23 ಲಕ್ಷ ಡೋಸ್ ಲಸಿಕೆ ಇದೆ ಎಂದು ಮಹಾರಾಷ್ಟ್ರದವರೇ ಆದ ಜಾವಡೇಕರ್ ಮಾಧ್ಯಮಗೋಷ್ಠಿಯಲ್ಲಿ ತಿಳಿಸಿದ್ದಾರೆ.ಮಹಾರಾಷ್ಟ್ರದ ಬಳಿ ಈಗ ಇರುವ ಲಸಿಕೆಯು ಐದರಿಂದ ಆರು ದಿನಗಳಿಗೆ ಸಾಕು. ಜಿಲ್ಲೆ ಮತ್ತು ಗ್ರಾಮಗಳಿಗೆ ಲಸಿಕೆ ಹಂಚಿಕೆಯು ರಾಜ್ಯ ಸರ್ಕಾರದ ಹೊಣೆ ಎಂದು ಅವರು ಹೇಳಿದ್ದಾರೆ.
*
ಲಸಿಕೆಯಲ್ಲಿ ಕೇಂದ್ರ ತಾರತಮ್ಯ ಮಾಡುತ್ತಿದೆ ಎಂಬುದು ಬರೇ ಪ್ರಹಸನ. ಅತಿ ಹೆಚ್ಚು ಲಸಿಕೆ ಹಂಚಿಕೆ ಮಾಡಲಾದ ಮೂರು ರಾಜ್ಯಗಳಲ್ಲಿ ಮಹಾರಾಷ್ಟ್ರ ಮತ್ತು ರಾಜಸ್ಥಾನ ಇವೆ.
-ಹರ್ಷವರ್ಧನ್, ಕೇಂದ್ರ ಆರೋಗ್ಯ ಸಚಿವ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.