ADVERTISEMENT

ಮುಂಬೈನಲ್ಲಿ ಕೋವಿಡ್‌ 'ಎಕ್ಸ್‌.ಇ' ತಳಿ; ವರದಿಗಳನ್ನು ಅಲ್ಲಗಳೆದ ಕೇಂದ್ರ

​ಪ್ರಜಾವಾಣಿ ವಾರ್ತೆ
Published 7 ಏಪ್ರಿಲ್ 2022, 4:57 IST
Last Updated 7 ಏಪ್ರಿಲ್ 2022, 4:57 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಮುಂಬೈ: ಕೊರೊನಾ ವೈರಸ್‌ನ ಇತರೆ ತಳಿಗಳಿಗಿಂತ ವೇಗವಾಗಿ ಪ್ರಸರಣವಾಗಬಲ್ಲ ನೂತನ 'ಎಕ್ಸ್‌.ಇ' (XE) ತಳಿ ಸೋಂಕಿನ ಮೊದಲ ಪ್ರಕರಣ ನಗರದಲ್ಲಿ ಪತ್ತೆಯಾಗಿದೆ ಎಂದು ಬೃಹನ್‌ ಮುಂಬೈ ಮಹಾನಗರಪಾಲಿಕೆ (ಬಿಎಂಸಿ) ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ. ಆದರೆ, ಕೇಂದ್ರ ಸರ್ಕಾರವು ಅದನ್ನು ಅಲ್ಲಗಳೆದಿದೆ.

ಹಿಂದಿ ಸಿನಿಮಾ ಕ್ಷೇತ್ರದಲ್ಲಿ ವಸ್ತ್ರ ವಿನ್ಯಾಸಕಿಯಾಗಿ ಕಾರ್ಯನಿರ್ವಹಿಸುತ್ತಿರುವ 50 ವರ್ಷ ವಯಸ್ಸಿನ ಮಹಿಳೆಯಲ್ಲಿ 'ಎಕ್ಸ್‌.ಇ' ತಳಿ ಸೋಂಕು ಪತ್ತೆಯಾಗಿರುವುದಾಗಿ ಮಹಾರಾಷ್ಟ್ರ ಸರ್ಕಾರ ಹೇಳಿದೆ. ಸೋಂಕಿನಿಂದ ಗುಣಮುಖರಾಗಿರುವ ಅವರು ಫೆಬ್ರುವರಿಯಲ್ಲಿ ದಕ್ಷಿಣ ಆಫ್ರಿಕಾದಿಂದ ವಾಪಸಾಗಿದ್ದರು.

ಮಹಾರಾಷ್ಟ್ರದ ಸಾರ್ವಜನಿಕ ಆರೋಗ್ಯ ಇಲಾಖೆಯ ಪ್ರಕಟಣೆಯ ಪ್ರಕಾರ, 'ಕಸ್ತೂರಬಾ ಆಸ್ಪತ್ರೆಯ ಪ್ರಯೋಗಾಲಯದಲ್ಲಿ ಜಿನೋಮ್ ಸೀಕ್ವೆನ್ಸಿಂಗ್‌ ವಿಶ್ಲೇಷಣೆಗಾಗಿ ರೋಗಿಯಿಂದ ಸಂಗ್ರಹಿಸಲಾಗಿರುವ ಮಾದರಿಯನ್ನು ಕಳುಹಿಸಲಾಗಿತ್ತು. ಪ್ರಾಥಮಿಕ ವಿಶ್ಲೇಷಣೆಯಲ್ಲಿ 'ಎಕ್ಸ್‌.ಇ' ತಳಿ ಇರುವುದು ಪತ್ತೆಯಾಗಿದೆ'.

ADVERTISEMENT

ಕೇಂದ್ರ ಸರ್ಕಾರದ ಅಧಿಕಾರಿಗಳು 'ಎಕ್ಸ್‌.ಇ' ತಳಿ ಪತ್ತೆಯಾಗಿರುವುದಕ್ಕೆ ವೈಜ್ಞಾನಿಕ ಪುರಾವೆಗಳಿಲ್ಲ ಎಂದಿದ್ದಾರೆ. 'ಭಾರತದ ಸಾರ್ಸ್‌ ಕೋವ್‌–2 ಜೆನೆಟಿಕ್ಸ್ ಕಾನ್ಸೊರ್ಟಿಯಮ್‌ನ (ಐಎನ್‌ಎಸ್‌ಎಸಿಒಜಿ) ಜಿನೋಮ್ ಸೀಕ್ವೆನ್ಸಿಂಗ್‌ ತಜ್ಞರು ವಿವರವಾಗಿ ಪರಿಶೀಲನೆ ನಡೆಸಿದ್ದು, ಮಾದರಿಯಲ್ಲಿ ಪತ್ತೆಯಾಗಿರುವ ತಳಿಯ ಜಿನೋಮ್‌ ರಚನೆಗಳಿಗೂ ಎಕ್ಸ್‌.ಇ ತಳಿಯ ರಚನೆಗಳೂ ಹೋಲಿಕೆಯಾಗಿಲ್ಲ' ಎಂದು ಅಧಿಕೃತ ಮೂಲಗಳಿಂದ ತಿಳಿದು ಬಂದಿದೆ.

ತಳಿಯ ಗುರುತಿಸುವಿಕೆಯಲ್ಲಿ ಬಳಕೆಯಾಗಿರುವ ಸ್ವಯಂ ಚಾಲಿತ ಸಾಫ್ಟ್‌ವೇರ್‌ ವ್ಯವಸ್ಥೆಯಲ್ಲಿನ ಪ್ರಮಾದದಿಂದಾಗಿ ಈ ಗೊಂದಲ ಸೃಷ್ಟಿಯಾಗಿದೆ ಎಂದು ಐಎನ್‌ಎಸ್‌ಎಸಿಒಜಿ ಮೂಲಗಳು ತಿಳಿಸಿವೆ.

'ನಿರ್ದಿಷ್ಟ ಡೆಲ್ಟಾ ಮಾದರಿಗಳ ಜೊತೆಗೆ ಓಮೈಕ್ರಾನ್‌ ತಳಿ ಇದ್ದರೆ, ಸಾಫ್ಟ್‌ವೇರ್‌ ಅದನ್ನು ಎಕ್ಸ್‌.ಇ ಎಂದು ವರ್ಗೀಕರಿಸುತ್ತಿದೆ. ಸ್ವಯಂ ಚಾಲಿತ ವಿಶ್ಲೇಷಣೆಯಲ್ಲಿ ಎದುರಾಗಿರುವ ಈ ದೋಷವನ್ನು ಪರಿಶೀಲಿಸಲು ತಜ್ಞರು ನೇರವಾಗಿ ವಿಶ್ಲೇಷಣೆ ನಡೆಸುವುದು ಅಗತ್ಯವಾಗಿದೆ' ಎಂದು ಮೂಲಗಳು ಹೇಳಿವೆ.

'ಕಳೆದ ತಿಂಗಳು ಸೋಂಕಿಗೆ ಒಳಗಾಗಿದ್ದ ಮಹಿಳೆಯು ಎರಡೇ ದಿನಗಳಲ್ಲಿ ಗುಣಮುಖರಾಗಿದ್ದು, ಆತಂಕಕ್ಕೆ ಒಳಗಾಗುವುದು ಬೇಡ. ಆದರೆ, ನಾವು ಎಚ್ಚರ ವಹಿಸಬೇಕಿದೆ' ಎಂದು ಬಿಎಂಸಿಯ ಕಮಿಷನರ್‌ ಇಕ್ಬಾಲ್‌ ಸಿಂಗ್‌ ಚಹಲ್‌ ಹೇಳಿದ್ದಾರೆ.

ಸೋಂಕಿಗೆ ಒಳಗಾಗಿದ್ದ ಮಹಿಳೆಯು ಫೆಬ್ರುವರಿ 10ರಂದು ಮುಂಬೈಗೆ ಮರಳಿದ್ದರು. ಆರಂಭದಲ್ಲಿ ಅವರಿಗೆ ಕೋವಿಡ್‌–19 ಪರೀಕ್ಷೆಯಲ್ಲಿ ನೆಗೆಟಿವ್‌ ಬಂದಿತ್ತು. ಆದರೆ, ಎರಡನೇ ಸುತ್ತಿನ ಪರೀಕ್ಷೆಯಲ್ಲಿ ಮಾರ್ಚ್‌ 2ರಂದು ಕೋವಿಡ್‌ ಇರುವುದು ದೃಢಪಟ್ಟಿತ್ತು.

ಜನವರಿ 19ರಂದು ಮೊದಲ ಬಾರಿಗೆ ಬ್ರಿಟನ್‌ನಲ್ಲಿ ಎಕ್ಸ್.ಇ ತಳಿ (BA.1-BA.2) ಪತ್ತೆಯಾಗಿತ್ತು. ಈ ತಿಳಿಯು ಇತರೆ ಕೊರೊನಾ ವೈರಸ್‌ ತಳಿಗಳಿಗಿಂತಲು ಶೇಕಡ 10ರಷ್ಟು ವೇಗವಾಗಿ ಹರಡಬಹುದಾಗಿದ್ದು, ಹೆಚ್ಚಿನ ಅಧ್ಯಯನದ ಅವಶ್ಯಕತೆ ಇದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.