ADVERTISEMENT

ಮಕ್ಕಳ ಮೇಲೆ ಕೋವಿಡ್ 3ನೇ ಅಲೆಯ ಪರಿಣಾಮದ ಬಗ್ಗೆ ಪುರಾವೆಗಳಿಲ್ಲ: ಏಮ್ಸ್ ನಿರ್ದೇಶಕ

ಪಿಟಿಐ
Published 25 ಮೇ 2021, 17:02 IST
Last Updated 25 ಮೇ 2021, 17:02 IST
ಗೊಂಬೆಯನ್ನು ಅಪ್ಪಿರುವ ಹುಡುಗಿ–ಸಾಂದರ್ಭಿಕ ಚಿತ್ರ
ಗೊಂಬೆಯನ್ನು ಅಪ್ಪಿರುವ ಹುಡುಗಿ–ಸಾಂದರ್ಭಿಕ ಚಿತ್ರ   

ನವದೆಹಲಿ:ಕೋವಿಡ್‌ ಮುಂದಿನ ಅಲೆಯು ಮಕ್ಕಳ ಮೇಲೆ ಹೆಚ್ಚಿನ ಪರಿಣಾಮ ಬೀರಲಿದೆ ಎಂಬುದಕ್ಕೆ ಯಾವುದೇ ಆಧಾರಗಳಿಲ್ಲ ಎಂದು ಸರ್ಕಾರದ ಪ್ರಮುಖ ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.

ಭಾರತದಲ್ಲಿ ಕೋವಿಡ್‌–19 ಮೂರನೇ ಅಲೆಯು ಮಕ್ಕಳ ಮೇಲೆ ಬೀರಬಹುದಾದ ಪರಿಣಾಮಗಳ ಕುರಿತು ಕೇಳಲಾದ ಪ್ರಶ್ನೆಗೆ ಪ್ರತಿಕ್ರಿಯಿಸಿರುವ ಏಮ್ಸ್‌ ನಿರ್ದೇಶಕ ರಣದೀಪ್‌ ಗುಲೇರಿಯಾ, ಮಕ್ಕಳ ಮೇಲೆ ಕೊರೊನಾ ವೈರಸ್‌ ಸೋಂಕು ತೀವ್ರವಾಗಿ ಪರಿಣಾಮ ಬೀರುವುದು ಅಥವಾ ಕೋವಿಡ್‌–19 ಮುಂದಿನ ಅಲೆಯಲ್ಲಿ ಮಕ್ಕಳಲ್ಲಿ ಸೋಂಕು ಪ್ರಕರಣಗಳು ಏರಿಕೆಯಾಗಲಿವೆ ಎಂಬುದಕ್ಕೆ ಯಾವುದೇ ಪುರಾವೆಗಳಲ್ಲಿ ಎಂದಿದ್ದಾರೆ.

‘ಕೋವಿಡ್‌ ಮೊದಲ ಮತ್ತು ಎರಡನೇ ಅಲೆಗಳ ದತ್ತಾಂಶಗಳ ಪ್ರಕಾರ, ಸಾಮಾನ್ಯವಾಗಿ ಮಕ್ಕಳು ಕೊರೊನಾ ವೈರಸ್‌ ಸೋಂಕು ತಗುಲುವುದರಿಂದ ರಕ್ಷಣೆ ಪಡೆದಿದ್ದಾರೆ. ಅಕಸ್ಮಾತ್‌ ಮಕ್ಕಳಿಗೆ ಕೋವಿಡ್‌ ದೃಢಪಟ್ಟರೂ ಅವರಲ್ಲಿ ಅಲ್ಪ ಪ್ರಮಾಣದ ಸೋಂಕು ಮಾತ್ರ ಇರುವುದನ್ನು ಗಮನಿಸಲಾಗಿದೆ’ ಎಂದು ಗುಲೇರಿಯಾ ಹೇಳಿದ್ದಾರೆ.

ADVERTISEMENT

‘ಆದರೆ, ಸಾಂಕ್ರಾಮಿಕ ಸಂದರ್ಭದಲ್ಲಿ ಮಕ್ಕಳು ಬೇರೆ ರೀತಿಯ ಪರಿಣಾಮಗಳಿಗೆ ಒಳಗಾಗಿದ್ದಾರೆ. ಅಧಿಕ ಒತ್ತಡ ಮತ್ತು ಮಾನಸಿಕ ಸಮಸ್ಯೆಗಳು, ಸ್ಮಾರ್ಟ್‌ಫೋನ್‌ಗಳ ಮೇಲೆ ಅತಿಯಾದ ಅವಲಂಬನೆ, ಶಿಕ್ಷಣ ಮತ್ತು ಕಲಿಕೆಯ ಅವಕಾಶಗಳ ಕೊರತೆ ಎದುರಾಗಿದೆ. ಗ್ರಾಮೀಣ ಭಾಗಗಳಲ್ಲಿ ಶಾಲಾ ಮಕ್ಕಳ ಶಿಕ್ಷಣಕ್ಕೆತೀವ್ರ ಹೊಡೆತ ಬಿದ್ದಿದೆ’ ಎಂದು ವಿವರಿಸಿದ್ದಾರೆ.

‘ಕೊರೊನಾ ವೈರಸ್‌ ಸೋಂಕು ದೇಹದೊಳಗೆ ಎಸಿಇ ಎನ್‌ಜೈಮ್‌ಗಳ (ಕಿಣ್ವ) ಸಹಕಾರದಿಂದ ಹರಡುತ್ತಿರುವುದಾಗಿ ಊಹಿಸಲಾಗಿದೆ. ಆದರೆ, ವೈರಸ್‌ ವೃದ್ಧಿಸಲು ಸಹಕಾರ ನೀಡುವ ಎಸಿಇ ಎನ್‌ಜೈಮ್‌ಗಳು ವಯಸ್ಕರಿಗಿಂತ ಮಕ್ಕಳಲ್ಲಿ ಕಡಿಮೆ ಪ್ರಮಾಣದಲ್ಲಿರುತ್ತವೆ. ಹಾಗಾಗಿ, ಮಕ್ಕಳಲ್ಲಿ ಸೋಂಕು ತಗುಲುವ ಸಾಧ್ಯತೆಗಳು ಕಡಿಮೆ ಎಂದು ಕಲ್ಪಿಸಿಕೊಳ್ಳಲಾಗಿದೆ’ ಎಂದು ಗುಲೇರಿಯಾ ತಿಳಿಸಿದ್ದಾರೆ.

‘ಈ ಸಿದ್ಧಾಂತವನ್ನು ಹರಿಯಬಿಟ್ಟಿರುವವರ ಪ್ರಕಾರ, ಈವರೆಗೂ ಮಕ್ಕಳ ಮೇಲೆ ಹೆಚ್ಚಿನ ಪರಿಣಾಮಗಳು ಆಗಿಲ್ಲ. ಹಾಗಾಗಿ, ಮೂರನೇ ಅಲೆಯಲ್ಲಿ ಮಕ್ಕಳಿಗೆ ಹೆಚ್ಚು ಸೋಂಕು ತಗುಲುವ ಸಾಧ್ಯತೆ ಇದೆ. ಆದರೆ, ಮಕ್ಕಳಲ್ಲಿ ಸೋಂಕು ತೀವ್ರವಾಗಲಿದೆ ಎಂಬುದಕ್ಕೆ ಯಾವುದೇ ಪುರಾವೆಗಳು ಈವರೆಗೂ ಕಂಡು ಬಂದಿಲ್ಲ’ ಎಂದಿದ್ದಾರೆ.

ಕೋವಿಡ್‌–19 ಮೂರನೇ ಅಲೆಯು ದೇಶದಲ್ಲಿ ಅಪ್ಪಳಿಸಬಹುದು ಎಂದು ಅಂದಾಜಿಸಿರುವುದನ್ನು ಪ್ರಸ್ತಾಪಿಸಿರುವ ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ, ಕೇಂದ್ರ ಹಾಗೂ ರಾಜ್ಯಗಳು ಮಕ್ಕಳು ಮತ್ತು ಶಿಶುಗಳ ರಕ್ಷಣೆಗೆ ಅಗತ್ಯವಿರುವ ಸಿದ್ಧತೆಗಳನ್ನು ಕೈಗೊಳ್ಳುವಂತೆಸಲಹೆ ನೀಡಿದೆ. ಈ ಸಂಬಂಧ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಮುಖ್ಯಸ್ಥರಾದ ಪ್ರಿಯಾಂಕ್‌ ಕಾನೂಂಗೊ ಕೇಂದ್ರ ಆರೋಗ್ಯ ಕಾರ್ಯದರ್ಶಿಗಳಿಗೆ ಪತ್ರ ಬರೆದಿದ್ದಾರೆ.

‘ಕೋವಿಡ್‌ ಸೇವೆಯಲ್ಲಿ ಸುಧಾರಣೆ ತನ್ನಿ’
‘ಮುಂದಿನ ಅಲೆ ಅಥವಾ ಮುಂಬರುವ ವಾರಗಳಲ್ಲಿ ಮಕ್ಕಳ ಮೇಲೆ ಕೊರೊನಾ ಹೆಚ್ಚು ಪ್ರಭಾವ ಬೀರಲಿದೆ ಎಂದು ಹೇಳಲು ಯಾವುದೇ ಕಾರಣಗಳಿಲ್ಲ. ಆದರೆ ಮಕ್ಕಳಿಗೆ ಸಂಬಂಧಿಸಿದ ಕೋವಿಡ್‌ ಸೇವೆಗಳಲ್ಲಿ ಸುಧಾರಣೆಗಳನ್ನು ತರಬೇಕಾಗಿದೆ’ ಎಂದು ರಾಷ್ಟ್ರೀಯ ತಾಂತ್ರಿಕ ಸಲಹಾ ಸಮಿತಿಯ (ಎನ್‌ಟಿಎಜಿಐ) ‘ಕೋವಿಡ್‌ ವರ್ಕಿಂಗ್‌ ಗ್ರೂಪ್‌’ನ ಮುಖ್ಯಸ್ಥ ಡಾ.ಎನ್‌.ಕೆ.ಅರೋರಾ ತಿಳಿಸಿದ್ದಾರೆ.

‘ಈಗಿನ ತಳಿಯು ಮಕ್ಕಳು ಮತ್ತು ಯುವಕರ ಮೇಲೆ ಹೆಚ್ಚು ಪರಿಣಾಮ ಬೀರಲಿದೆ ಎಂಬುದರ ಬಗ್ಗೆ ಭಾರತದ ಅಂಕಿಅಂಶಗಳು ಹೇಳುತ್ತಿಲ್ಲ. ಆದರೆ, ಇತ್ತೀಚಿಗೆ ಈ ವಯಸ್ಸಿನ ರೋಗಿಗಳ ಸಂಖ್ಯೆಯಲ್ಲಿ ಹೆಚ್ಚಳವಾಗಿರುವುದನ್ನು ನಾವು ಗಮನಿಸಬಹುದು. ಈ ಸಂದರ್ಭದಲ್ಲಿ ಮೂರನೇ ಅಲೆಯ ಬಗ್ಗೆ ಏನೂ ಹೇಳಲು ಸಾಧ್ಯವಿಲ್ಲ ’ಎಂದು ಅರೋರಾ ಅವರು ಹೇಳಿದ್ದಾರೆ.

ʼಸೋಂಕು ಪೀಡಿತರುಮನೆಯಲ್ಲಿದ್ದಂತೆಯೇ ಚಿಕಿತ್ಸೆʼ
ವಾಷಿಂಗ್ಟನ್‌
: ಕೋವಿಡ್‌–19ನ ಅಲ್ಪ ಅಥವಾ ಸಾಧಾರಣ ಮಟ್ಟದ ಲಕ್ಷಣಗಳು ಕಂಡುಬಂದ ಕೂಡಲೇ ಮನೆಯಲ್ಲಿ ಇರುವಂತೆಯೇ ವರ್ಚುವಲ್‌ ಸ್ವರೂಪದಲ್ಲಿ ಆರೋಗ್ಯ ಸೇವೆಯನ್ನು ನೀಡಲು ಅನುವಾಗುವಂತಹ ಸರಳ ಹಾಗೂ ನವೀನವಾದ ಕಾರ್ಯಕ್ರಮವನ್ನು ಡೆಲಾಯ್ಟ್‌ ಕಂಪನಿ ಅಭಿವೃದ್ಧಿಪಡಿಸಿದೆ.

ಹರಿಯಾಣದ ಕರ್ನಾಲ್‌ ಜಿಲ್ಲೆಯಲ್ಲಿ ಇದನ್ನು ಆಧರಿಸಿದ ‘ಸಂಜೀವಿನಿ ಪರಿಯೋಜನಾ’ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಸಂದರ್ಭದಲ್ಲಿ ಮಾತನಾಡಿದ ಕಂಪನಿ ಸಿಇಒ ಪುನೀತ್‌ ರೆಂಜೆನ್ ಅವರು, ‘ರೋಗಿಗಳಿಗೆ ಅಲ್ಪಾವಧಿಯಲ್ಲಿ ಆರೋಗ್ಯ ಆರೈಕೆ ಸೇವೆಯನ್ನು ಒದಗಿಸಲು ಈ ಕಾರ್ಯಕ್ರಮ ಸಹಕಾರಿ’ ಎಂದು ಹೇಳಿದರು.

ಕಾರ್ಯಕ್ರಮದಡಿ ಇಡೀ ನಿರ್ವಹಣೆ ವ್ಯವಸ್ಥೆ ನಡುವೆ ಪರಸ್ಪರ ಸಂಪರ್ಕ ಇರುತ್ತದೆ. ಕೇಂದ್ರೀಕೃತ ನಿರ್ವಹಣಾ ಕೇಂದ್ರದಿಂದ ಟೆಲಿಮೆಡಿಸಿನ್‌ ಹಾಗೂ ವರ್ಚುಯಲ್‌ ಆರೋಗ್ಯ ಸೇವೆಯಿಂದ ಆಶಾ ಕಾರ್ಯಕರ್ತೆಯರವರೆಗೆ. ಸ್ಥಳೀಯ ಆಡಳಿತ, ಜಿಲ್ಲಾಡಳಿತ, ಪೊಲೀಸ್‌ ವರಿಷ್ಠಾಧಿಕಾರಿ ಎಲ್ಲರೂ ಪರಸ್ಪರ ಸಂಪರ್ಕದಲ್ಲಿ ಇರುತ್ತಾರೆ.

‘ಕೋವಿಡ್‌ನಿಂದಾಗಿ ನಾನು ಭಾರತದಲ್ಲಿ 30 ಸಿಬ್ಬಂದಿ ಕಳೆದುಕೊಂಡಿದ್ದೇನೆ. ನನ್ನ ತಾಯಿಗೂ ಕೋವಿಡ್ ಸೋಂಕು ದೃಢಪಟ್ಟಿತ್ತು. ಮನೆಯಲ್ಲಿದ್ದೇ ಅವರು ಆರೈಕೆ ಪಡೆದರು. ಆಕ್ಸಿಮೀಟರ್‌ ರೀಡಿಂಗ್‌ ಮಾಹಿತಿ, ದೇಹದ ತಾಪಮಾನ, ಒಟ್ಟು ಆರೋಗ್ಯ ಸ್ಥಿತಿ ಕುರಿತು ವೈದ್ಯರಿಗೆ ನಿಯಮಿತವಾಗಿ ಸಂದೇಶ ಕಳುಹಿಸಲಾಗುತ್ತಿತ್ತು. ಹಾಗೂ ಚಿಕಿತ್ಸಾ ಸಲಹೆ ಪಡೆಯಲಾಗುತ್ತಿತ್ತು. ತಾಯಿಗೆ ಈ ವ್ಯವಸ್ಥೆಯಡಿ ಚಿಕಿತ್ಸೆ ಆಗಬಹುದಾದರೆ, ಎಲ್ಲರಿಗೂ ಬಳಕೆಯಾಗಲಿ ಎಂಬ ಚಿಂತನೆಯ ಪರಿಣಾಮವಾಗಿ ಈಗ ಕರ್ನಾಲ್‌ ಜಿಲ್ಲೆಯಲ್ಲಿ ಜಾರಿಗೆ ಬಂದಿದೆ‘ ಎಂದರು.

‘19,420 ವಯಲ್ಸ್‌ ಆ್ಯಂಫೊಟೆರಿಸಿನ್‌ ಹಂಚಿಕೆ’
ನವದೆಹಲಿ: ವಿವಿಧ ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳಿಗೆ ಮೇ 24ರಂದು ಹೆಚ್ಚುವರಿಯಾಗಿ 19,420 ವಯಲ್ಸ್‌ ಆ್ಯಂಫೊಟೆರಿಸಿನ್‌ ಲಸಿಕೆ ಹಂಚಿಕೆ ಮಾಡಲಾಗಿದೆ ಎಂದು ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ ಮಂಗಳವಾರ ತಿಳಿಸಿದರು. ಮೂಗು, ಕಣ್ಣು, ಕೆಲವೊಮ್ಮೆ ಮಿದುಳಿಗೆ ಹಾನಿ ಮಾಡುವ ಮ್ಯೂಕರ್‌ಮೈಕೊಸಿಸ್ (ಕಪ್ಪು ಶಿಲೀಂಧ್ರ) ಚಿಕಿತ್ಸೆಗೆ ಆ್ಯಂಫೊಟೆರಿಸಿನ್‌ ಬಳಸಲಾಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.