ADVERTISEMENT

ಭಾರತೀಯ ನೌಕಾಪಡೆಗೂ ಕೊರೊನಾ ಸೋಂಕು: 20 ಮಂದಿ ಸೇಲರ್‌ಗಳು ಮುಂಬೈನಲ್ಲಿ ಕ್ವಾರಂಟೈನ್

ಮುಂಬೈ

ಏಜೆನ್ಸೀಸ್
Published 18 ಏಪ್ರಿಲ್ 2020, 3:09 IST
Last Updated 18 ಏಪ್ರಿಲ್ 2020, 3:09 IST
ನೌಕಾಪಡೆಯ ಸಮರ ನೌಕೆ– ಸಾಂಕೇತಿಕ ಚಿತ್ರ
ನೌಕಾಪಡೆಯ ಸಮರ ನೌಕೆ– ಸಾಂಕೇತಿಕ ಚಿತ್ರ   
""

ಮುಂಬೈ: ಭಾರತೀಯ ನೌಕಾಪಡೆಯ 20ಸೇಲರ್‌ಗಳು ಸೇರಿ ಒಟ್ಟು 21 ಸಿಬ್ಬಂದಿಗೆಕೊರೊನಾ ವೈರಸ್‌ ಸೋಂಕು ತಗುಲಿರುವುದು ದೃಢಪಟ್ಟಿದೆ. ನೌಕಾಪಡೆಯ ಸಿಬ್ಬಂದಿಯನ್ನು ಮುಂಬೈನ ನೌಕಾಪಡೆ ಆಸ್ಪತ್ರೆಯಲ್ಲಿ ಕ್ವಾರಂಟೈನ್‌ ಮಾಡಲಾಗಿದೆ.

ದೇಶದ ನೌಕಾಪಡೆಯಲ್ಲಿ ಮೊದಲ ಬಾರಿಗೆ ಕೋವಿಡ್‌–19 ಪ್ರಕರಣಗಳು ದಾಖಲಾಗಿವೆ. ಸೇಲರ್‌ಗಳೊಂದಿಗೆ ಸಂಪರ್ಕಕ್ಕೆ ಒಳಗಾಗಿರುವ ವ್ಯಕ್ತಿಗಳನ್ನು ಗುರುತಿಸುವ ಕಾರ್ಯ ಚುರುಕುಗೊಂಡಿದೆ ಎಂದು ಎನ್‌ಡಿಟಿವಿ ವರದಿ ಮಾಡಿದೆ.

ಸೇಲರ್‌ಗಳು ಐಎನ್‌ಎಸ್‌ ಆಂಗ್ರೆಯಲ್ಲಿ ನೀಡಲಾಗಿದ್ದ ವಸತಿಗಳಲ್ಲಿ ಇದ್ದರು. ಸರಕು ಸಾಗಣೆ ಮತ್ತು ಆಡಳಿತ ವ್ಯವಹಾರಗಳಲ್ಲಿನ ನೌಕಾ ಕಾರ್ಯಾಚರಣೆಗಳಿಗೆ ಸಂಬಂಧಿಸಿದಂತೆ ಪಶ್ಚಿಮ ನೌಕಾಪಡೆ ಕಮಾಂಡ್‌ಗೆ 'ಐಎನ್‌ಎಸ್‌ ಆಂಗ್ರೆ' ಸಹಕಾರಿಯಾಗಿದೆ.

ADVERTISEMENT

ಮುಂಬೈ ನಗರದಲ್ಲಿ ಲಾಕ್‌ಡೌನ್‌ ಇದ್ದರೂ ಅಗತ್ಯ ಕರ್ತವ್ಯಗಳಿಗಾಗಿ ನೌಕಾಪಡೆ ವಲಯಗಳಲ್ಲಿ ಸಿಬ್ಬಂದಿ ಸಂಚರಿಸಿರುವ ಸಾಧ್ಯತೆ ಇದೆ. ಇಲ್ಲಿನ ನೌಕಾಪಡೆ ಹಡಗುಕಟ್ಟೆಯಲ್ಲಿರುವ ಐಎನ್ಎಸ್‌ ಆಂಗ್ರೆಯಿಂದ ಕೆಲವು ನೂರು ಮೀಟರ್‌ಗಳ ಅಂತರದಲ್ಲಿ ಯುದ್ಧ ನೌಕೆಗಳು ಹಾಗೂ ಜಲಾಂತರ್ಗಾಮಿ ನೌಕೆಗಳೂ ಇವೆ.

ಕೋವಿಡ್‌–19 ದೃಢಪಟ್ಟಿರುವ ಸೇಲರ್‌ಗಳು ಈಗ ಐಎನ್‌ಎಚ್‌ಎಸ್‌ ಅಶ್ವಿನಿ, ನೌಕಾಪಡೆ ಆಸ್ಪತ್ರೆಯಲ್ಲಿ ಕ್ವಾರಂಟೈನ್‌ ಆಗಿದ್ದಾರೆ. ಮಹಾರಾಷ್ಟ್ರ ದೇಶದಲ್ಲಿಯೇ ಅತಿ ಹೆಚ್ಚು ಕೋವಿಡ್‌–19 ಪ್ರಕರಣಗಳನ್ನು ಹೊಂದಿರುವ ರಾಜ್ಯವಾಗಿದೆ. ಒಟ್ಟು 3,205 ಪ್ರಕರಣಗಳು ವರದಿಯಾಗಿವೆ. ದೇಶದಾದ್ಯಂತ 13,835 ಪ್ರಕರಣಗಳ ಪೈಕಿ 452 ಮಂದಿ ಸೋಂಕಿತರು ಸಾವಿಗೀಡಾಗಿದ್ದಾರೆ.

ಐಎನ್‌ಎಸ್‌ ಆಂಗ್ರೆ ಪ್ರವೇಶ ದ್ವಾರ–ಚಿತ್ರ ಕೃಪೆ: ಭಾರತೀಯ ನೌಕಾಪಡೆ ವೆಬ್‌ಸೈಟ್‌

ಭಾರತೀಯ ಸೇನೆಯಲ್ಲಿ ಎಂಟು ಕೊರೊನಾ ವೈರಸ್‌ ಸೋಂಕು ಪ್ರಕರಣಗಳು ದಾಖಲಾಗಿವೆ.

ಫ್ರಾನ್ಸ್‌ನಲ್ಲಿ ಫ್ರೆಂಚ್‌ ನೌಕಾಪಡೆಯ ಪರಮಾಣು ಸಾಮರ್ಥ್ಯ ಹೊಂದಿರುವ ವಿಮಾನಗಳನ್ನು ಹೊತ್ತೊಯ್ಯುವ ಚಾರ್ಲ್ಸ್‌ ಡೆ ಗೌಲೆ ನೌಕೆಯಲ್ಲಿದ್ದ 1,081 ಸಿಬ್ಬಂದಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ. ಅಮೆರಿಕ ನೌಕಾಪಡೆಯ ಥಿಯೊಡೋರ್‌ ರೋಸ್‌ವೆಲ್ಟ್‌ ನೌಕೆಯ 660 ಸಿಬ್ಬಂದಿಯಲ್ಲೂ ಕೋವಿಡ್‌–19 ದೃಢಪಟ್ಟಿದೆ.

ಜಗತ್ತಿನಾದ್ಯಂತ 21.71 ಲಕ್ಷ ಕೊರೊನಾ ಸೋಂಕು ಪ್ರಕರಣಗಳು ದಾಖಲಾಗಿವೆ ಹಾಗೂ 1.46 ಲಕ್ಷ ಮಂದಿ ಮೃತಪಟ್ಟಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.