ಯಾರಾ (ಗುಜರಾತ್): ಸಗಣಿಯಿಂದ ಮಾಡಿದ ಮನೆ ಅಣು ವಿಕಿರಣ ಪ್ರಭಾವಿತವಾಗುವುದಿಲ್ಲ ಎನ್ನುವುದು ವೈಜ್ಞಾನಿಕವಾಗಿ ಸಾಬೀತಾಗಿದೆ ಎಂದು ಗುಜರಾತ್‌ನ ತಾಪಿ ಜಿಲ್ಲೆಯಲ್ಲಿರುವ ಸೆಷನ್ಸ್ ಕೋರ್ಟ್ ಅಭಿಪ್ರಾಯಪಟ್ಟಿದೆ.
ನಿಯಮ ಉಲ್ಲಂಘಿಸಿ ಗುಜರಾತ್‌ನಿಂದ ಮಹಾರಾಷ್ಟ್ರಕ್ಕೆ ಗೋಸಾಗಾಟ ಮಾಡಿದ ಪ್ರಕರಣ ಆರೋಪಿಗೆ ಜೀವಾವಧಿ ಶಿಕ್ಷೆ ವಿಧಿಸಿದ ನ್ಯಾಯಮೂರ್ತಿ ಸಮೀರ್ ವ್ಯಾಸ್, ತೀರ್ಪು ಪ್ರಕಟಣೆ ವೇಳೆ ಈ ರೀತಿಯಾಗಿ ಹೇಳಿದ್ದಾರೆ.
ಗುಣಪಡಿಸಲಾಗದ ಹಲವು ರೋಗಕ್ಕೆ ಗೋಮೂತ್ರ ಶಮನಕಾರಿ ಎಂದಿರುವ ಅವರು, ಗೋಹತ್ಯೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರಲ್ಲದೇ, ಗೋವು ಕೇವಲ ಪ್ರಾಣಿಯಲ್ಲ ಅದು ನಮ್ಮ ತಾಯಿ ಎಂದು ಅಭಿಪ್ರಾಯಪಟ್ಟರು. ಅಲ್ಲದೇ ಗೋರಕ್ಷಣೆ ಬಗ್ಗೆ ಒತ್ತಿ ಹೇಳಿದರು.
2022ರ ನವೆಂಬರ್‌ನಲ್ಲಿ ಅವರು ನೀಡಿರುವ ತೀರ್ಪಿನ ಪ್ರತಿಗಳು ಇತ್ತೀಚೆಗೆ ಲಭ್ಯವಾಗಿದ್ದು, ಅದರಲ್ಲಿ ಈ ಉಲ್ಲೇಖಗಳಿವೆ.
‘ಯಾವಾಗ ಗೋವಿನ ಒಂದು ಹನಿ ರಕ್ತ ಭೂಮಿಗೆ ಬೀಳುವುದಿಲ್ಲವೋ, ಆಗ ಭೂಮಿ ಮೇಲಿನ ಎಲ್ಲಾ ಸಮಸ್ಯೆಗಳು ಬಗೆಹರಿಯುತ್ತವೆ. ನಾವು ಗೋರಕ್ಷಣೆ ಬಗ್ಗೆ ಮಾತನಾಡುತ್ತೇವೆ. ಆದರೆ ಅದು ಸರಿಯಾಗಿ ಜಾರಿಯಾಗುತ್ತಿಲ್ಲ. ಗೋಹತ್ಯೆ ಹಾಗೂ ಗೋ ಸಾಗಾಟದಂತ ಪ್ರಕರಣಗಳು ನಡೆಯುತ್ತಿವೆ. ಇದು ಸುಸಂಸ್ಕೃತ ಸಮಾಜಕ್ಕೆ ಅವಮಾನ‘ ಎಂದು ಅವರು ಹೇಳಿದ್ದಾರೆ.
ಸ್ವಾತಂತ್ರ್ಯ ಬಂದು 75 ವರ್ಷವಾದರೂ ಗೋಹತ್ಯೆ ಏರಿಕೆಯಾಗುತ್ತಿದೆಯೇ ಹೊರತು, ಕಡಿಮೆಯಾಗುತ್ತಿಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
‘ದನ ಒಂದು ಧಾರ್ಮಿಕ ಚಿಹ್ನೆ. ಗೋವು ಆಧಾರಿತ ಸಾವಯವ ಕೃಷಿಯಿಂದ ಬೆಳೆದ ಆಹಾರ ರೋಗಗಳಿಂದ ನಮ್ಮನ್ನು ಕಾಪಾಡುತ್ತದೆ. ಸಗಣಿಯಿಂದ ಕಟ್ಟಿದ ಮನೆ ಅಣುವಿಕಿರಣಗಳನ್ನು ತಡೆಯುವ ಶಕ್ತಿ ಹೊಂದಿದೆ. ಗೋಮೂತ್ರ ಹಲವು ರೋಗಗಳಿಗೆ ಶಮನಕಾರಿ ಎನ್ನುವುದು ವೈಜ್ಞಾನಿಕವಾಗಿ ಸಾಬೀತಾಗಿದೆ‘ ಎಂದು ಅವರು ಹೇಳಿದ್ದಾರೆ.
ಯಂತ್ರಗಳಿಂದ ವಧೆ ಮಾಡುತ್ತಿರುವುದರಿಂದ ಗೋವುಗಳು ಅಪಾಯದಲ್ಲಿವೆ. ಇಂದು ಮಾಂಸಾಹಾರಿಗಳಿಗೆ ಇತರ ಮಾಂಸಗಳ ಜತೆ ಗೋಮಾಂಸವೂ ನೀಡಲಾಗುತ್ತಿದೆ ಎಂದು ಹೇಳಿದ ಅವರು, ಗೋವಿನ ಮಹತ್ವದ ಬಗ್ಗೆ ಜನರಿಗೆ ತಿಳಿವಳಿಕೆ ನೀಡಬೇಕು ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.