ಡೆಹ್ರಾಡೂನ್: ಆಮ್ಲಜನಕವನ್ನು ಉಚ್ವಾಸ- ನಿಶ್ವಾಸ ಮಾಡುವ ಏಕೈಕ ಪ್ರಾಣಿ ಹಸು. ಹಸುಗಳನ್ನು ಮಸಾಜ್ ಮಾಡುವುದರಿಂದಮನುಷ್ಯರಿಗಿರುವ ಉಸಿರಾಟದ ಸಮಸ್ಯೆ ಪರಿಹಾರವಾಗುತ್ತದೆ- ಹೀಗೆಂದು ಹೇಳಿದ್ದು ಉತ್ತರಾಖಂಡ ಮುಖ್ಯಮಂತ್ರಿ ತ್ರಿವೇಂದ್ರ ಸಿಂಗ್ ರಾವತ್.
ಹಸುವಿನ ಹಾಲು, ಗೋಮೂತ್ರದಲ್ಲಿ ಎಷ್ಟೊಂದು ಔಷಧೀಯ ಗುಣಗಳಿವೆ ಎಂದು ರಾವತ್ ವಿವರಿಸುತ್ತಿರುವ ವಿಡಿಯೊವೊಂದು ಗುರುವಾರ ವೈರಲ್ ಆಗಿತ್ತು. ಆ ವಿಡಿಯೊದಲ್ಲಿ ರಾವತ್ ಅವರು, ಹಸು ಆಮ್ಲಜನಕವನ್ನು ಉಚ್ವಾಸ ಮಾಡುವುದು ಮಾತ್ರವಲ್ಲದೆ ಆಮ್ಲಜನಕವನ್ನೇ ನಿಶ್ವಾಸ ಮಾಡುತ್ತದೆ ಎಂದಿದ್ದಾರೆ.
ಹಸುವಿನ ಮೈ ಮಸಾಜ್ ಮಾಡಿದರೆಉಸಿರಾಟ ಸಂಬಂಧಿ ಸಮಸ್ಯೆಗಳು ನಿವಾರಣೆಯಾಗುವುದು ಮಾತ್ರವಲ್ಲದೆ, ಹಸುವಿನ ಜತೆಗಿನ ಒಡನಾಟ ಕ್ಷಯರೋಗವನ್ನೂ ಗುಣಪಡಿಸುತ್ತದೆ ಎಂದಿದ್ದಾರೆ.
2017ರಲ್ಲಿ ರಾಜಸ್ಥಾನದ ಶಿಕ್ಷಣ ಸಚಿವ ವಸುದೇವ್ ದೇವ್‌ನಾನಿ ಕೂಡಾ ಇದೇ ರೀತಿ ಹೇಳಿದ್ದರು.
ಉತ್ತರಾಖಂಡದ ಭಾಗೇಶ್ವರ್ ಜಿಲ್ಲೆಯಲ್ಲಿರುವ ಗರುಡ್ ಗಂಗಾ ನದಿಯ ನೀರನ್ನು ಕುಡಿಯುವ ಮೂಲಕ ಮಹಿಳೆಯರು ಸಿಸೇರಿಯನ್ ಮೂಲಕ ಹೆರಿಗೆಯಾಗುವುದನ್ನು ತಪ್ಪಿಸಬಹುದು ಎಂದು ಉತ್ತರಾಖಂಡದ ಬಿಜೆಪಿ ಅಧ್ಯಕ್ಷ ಮತ್ತು ನೈನಿತಾಲ್ ಸಂಸದ ಅಜಯ್ ಭಟ್ ಅವರು ಇತ್ತೀಚೆಗೆ ಹೇಳಿಕೆ ನೀಡಿದ್ದರು.
ಆದಾಗ್ಯೂ, ರಾವತ್ ಅವರ ಹೇಳಿಕೆಯನ್ನು ಸಮರ್ಥಿಸಿಕೊಂಡ ಮುಖ್ಯಮಂತ್ರಿಯವರ ಕಚೇರಿ ಉತ್ತರಾಖಂಡ ಪರ್ವತ ಪ್ರದೇಶಗಳಲ್ಲಿ ಚಾಲ್ತಿಯಲ್ಲಿರುವ ಕೆಲವು ನಂಬಿಕೆಗಳನ್ನು ಮುಖ್ಯಮಂತ್ರಿಯವರು ಹೇಳಿದ್ದಾರೆ. ಹಸುವಿನ ಹಾಲು ಮತ್ತು ಗೋಮೂತ್ರದಲ್ಲಿ ಔಷಧೀಯ ಗುಣಗಳಿರುವುದರಿಂದ ಇಲ್ಲಿನ ಪರ್ವತ ಪ್ರದೇಶದ ಜನರು ಹಸು ಆಮ್ಲಜನಕವನ್ನೂ ನೀಡುತ್ತದೆ ಎಂದು ನಂಬಿದ್ದಾರೆ ಎಂದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.