ನವದೆಹಲಿ: ಕೋಚಿಂಗ್ ಸೆಂಟರ್‌ಗಳ ದಾರಿತಪ್ಪಿಸುವ ಜಾಹೀರಾತುಗಳಿಗೆ ಮೂಗುದಾರ ಹಾಕಲು ಕೇಂದ್ರ ಗ್ರಾಹಕ ಹಕ್ಕುಗಳ ರಕ್ಷಣಾ ಆಯೋಗ (Central Consumer Protection Authority–CCPA) ಮುಂದಾಗಿದೆ.
ಇದಕ್ಕಾಗಿ ಸಿಸಿಪಿಎ ಇತ್ತೀಚೆಗೆ ಮಾರ್ಗಸೂಚಿಗಳ ಕರಡನ್ನು ಸಿದ್ಧಪಡಿಸಿದ್ದು, ಈ ಬಗ್ಗೆ ದೇಶದಾದ್ಯಂತ ಜನರಿಗೆ ಪ್ರತಿಕ್ರಿಯೆ, ಆಕ್ಷೇಪ ಅಭಿಪ್ರಾಯಗಳನ್ನು ಸಲ್ಲಿಸಲು ಒಂದು ತಿಂಗಳು ಕಾಲಾವಕಾಶ ನೀಡಿದೆ. ಅಂದರೆ ಮಾರ್ಚ್ 16ರವರಗೆ ಸಮಯ ನೀಡಲಾಗಿದೆ.
ಕೋಚಿಂಗ್ ಸೆಂಟರ್‌ಗಳು ವಿದ್ಯಾರ್ಥಿಗಳನ್ನು ತಪ್ಪು ದಾರಿಗೆ ಎಳೆಯುವಂತೆ ನೀಡುವ ಜಾಹೀರಾತುಗಳನ್ನು ಸಂಪೂರ್ಣ ನಿಲ್ಲಿಸಬೇಕಾಗುತ್ತದೆ ಎಂದು ಮಾರ್ಗಸೂಚಿಯಲ್ಲಿ ಉಲ್ಲೇಖಿಸಲಾಗಿದೆ.
ಗ್ರಾಹಕ ಹಕ್ಕು ರಕ್ಷಣಾ ಕಾಯ್ದೆ 2019ರ ಅಡಿ ಈ ಕರಡನ್ನು ಸಿದ್ದಪಡಿಸಲಾಗಿದ್ದು, ಮಾರ್ಗಸೂಚಿಗಳು ಜಾರಿ ಆದ ನಂತರ ದೇಶದಲ್ಲಿನ ಎಲ್ಲ ಕೋಚಿಂಗ್ ಸೆಂಟರ್‌ಗಳು ಈ ಮಾರ್ಗಸೂಚಿಗಳನ್ನು ಪಾಲಿಸಬೇಕಾಗುತ್ತದೆ. ತಪ್ಪಿದರೆ ಕಾನೂನು ಕ್ರಮಕ್ಕೆ ದಾರಿಯಾಗಲಿದೆ ಎಂದು ಸಿಸಿಪಿಎ ಹೇಳಿದೆ.
ಕೋರ್ಸ್‌ಗೆ ಸಂಬಂಧಿಸಿದ ಅಸಲಿ ವಿಚಾರಗಳನ್ನು ಮರೆಮಾಚಿ ವಿದ್ಯಾರ್ಥಿಗಳನ್ನು ತಪ್ಪುದಾರಿಗೆ ಎಳೆಯುವಂತಿಲ್ಲ. ಕೋಚಿಂಗ್ ಸೆಂಟರ್ ದಾಖಲೆಗಳು, ಅಂಕಿ–ಅಂಶ, ಕೋರ್ಸ್ ಅವಧಿ, ರ‍್ಯಾಂಕ್‌ಗಳ ಬಗ್ಗೆ ತಪ್ಪು ಮಾಹಿತಿ ನೀಡುವಂತಿಲ್ಲ ಎಂದು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.
ಕೋರ್ಸ್ ಆಯ್ಕೆ ಮಾಡುವ ವ್ಯಕ್ತಿಯ ಆಯ್ಕೆಯ ನಿರ್ಧಾರ ಹಿಂದೆ ಕೆಲಸ ಮಾಡುವ ಸಂಗತಿಗಳನ್ನು ಮರೆಮಾಚುವಂತಿಲ್ಲ ಎಂದು ವಿವರಿಸಲಾಗಿದೆ.
ಕೋಚಿಂಗ್ ಸೆಂಟರ್‌ಗಳು ತಮ್ಮ ಅಭ್ಯರ್ಥಿಗಳು ಯಾವುದಾದರೂ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ರ‍್ಯಾಂಕ್ ಬಂದಿರುವುದನ್ನು ಸರಿಯಾಗಿ ತಿಳಿಸಬೇಕು. ಗಮನ ಸೆಳೆಯುವ ನಿಟ್ಟಿನಲ್ಲಿ ಸುಳ್ಳು ಜಾಹೀರಾತು ನೀಡುವಂತಿಲ್ಲ ಎಂದು ಸಿಸಿಪಿಎ ವಿವರಿಸಿದೆ.
ರ‍್ಯಾಂಕ್ ಬರುವ ವಿದ್ಯಾರ್ಥಿಗಳ ಯಶಸ್ಸಿನಲ್ಲಿ ಕೋಚಿಂಗ್ ಸೆಂಟರ್‌ಗಳ ಪಾತ್ರ ಎಷ್ಟಿತ್ತು ಎಂಬುದನ್ನೂ ಸ್ಪಷ್ಟವಾಗಿ ಉಲ್ಲೇಖಿಸಬೇಕು ಎಂದು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.
ಕೋಚಿಂಗ್ ಸೆಂಟರ್‌ಗಳಿಂದ ವಿದ್ಯಾರ್ಥಿಗಳಿಗೆ ಅನ್ಯಾಯವಾಗುತ್ತಿದೆ ಎಂದು ಇತ್ತೀಚಿಗೆ ಕೇಂದ್ರ ಸರ್ಕಾರಕ್ಕೆ ಹಲವರು ದೂರು ಸಲ್ಲಿಸಿದ್ದರಿಂದ ಕೇಂದ್ರದ ಉನ್ನತ ಶಿಕ್ಷಣ ಇಲಾಖೆ ಕೆಲ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದ್ದ ಬೆನ್ನಲ್ಲೆ ಸಿಸಿಪಿಎ ಈ ಕ್ರಮಕ್ಕೆ ಮುಂದಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.