ಜಮ್ಮು: ಜಮ್ಮುವಿನ ರತ್ನುಚಕ್-ಕಾಲೂಚಕ್ ಸೇನಾಠಾಣೆಯ ಮೇಲೆ ಭಾನುವಾರ ತಡರಾತ್ರಿ ನಡೆಯಬಹುದಾಗಿದ್ದ ಸಂಭಾವ್ಯ ಡ್ರೋನ್ ದಾಳಿಯನ್ನು ಸೈನಿಕರು ತಪ್ಪಿಸಿದ್ದಾರೆ. ಜಮ್ಮು ವಿಮಾನ ನಿಲ್ದಾಣದಲ್ಲಿನ ವಾಯುನೆಲೆಯ ಮೇಲೆ ಡ್ರೋನ್ ದಾಳಿ ನಡೆಯುವ ಮೊದಲು ಮತ್ತು ನಂತರ, ಕೆಲವೇ ಗಂಟೆಗಳ ಅಂತರದಲ್ಲಿ ಮತ್ತೆ ಡ್ರೋನ್ ದಾಳಿಯ ಯತ್ನ ನಡೆದಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಭಾನುವಾರ ರಾತ್ರಿ 11.45ರ ವೇಳೆಗೆ ಸೇನಾಠಾಣೆಯ ಆವರಣದಲ್ಲಿ ಮೊದಲ ಡ್ರೋನ್ ಕಾಣಿಸಿಕೊಂಡಿದೆ. ಆ ಡ್ರೋನ್ ಅನ್ನು ಹೊಡೆದುರುಳಿಸಲು ಸೈನಿಕರು 24 ಸುತ್ತು ಗುಂಡು ಹಾರಿಸಿದ್ದಾರೆ. ಆದರೆ, ಡ್ರೋನ್ ಅಲ್ಲಿಂದ ತಪ್ಪಿಸಿಕೊಂಡಿದೆ. ಅದೇ ಸೇನಾಠಾಣೆಯ ಆವರಣದ ಬೇರೆಡೆ ಭಾನುವಾರ ಬೆಳಿಗ್ಗೆ 2.40ರಲ್ಲಿ ಇನ್ನೊಂದು ಡ್ರೋನ್ ಕಾಣಿಸಿಕೊಂಡಿದೆ. ಎರಡೂ ಡ್ರೋನ್‌ಗಳನ್ನು ಯಶಸ್ವಿಯಾಗಿ ಹಿಮ್ಮೆಟ್ಟಿಸಲಾಗಿದೆ ಎಂದುಸೇನೆಯ ಸಾರ್ವಜನಿಕ ಸಂಪರ್ಕಾಧಿಕಾರಿ ಲೆಫ್ಟಿನೆಂಟ್ ಕರ್ನಲ್ ದೇವೇಂದರ್ ಆನಂದ್ ಮಾಹಿತಿ ನೀಡಿದ್ದಾರೆ.
300ಕ್ಕೂ ಹೆಚ್ಚು ಡ್ರೋನ್:2019ರಲ್ಲಿ ಜಮ್ಮು–ಕಾಶ್ಮೀರದ ವಿಶೇಷಾಧಿಕಾರ ರದ್ದತಿ ಬಳಿಕ ಭಾರತ–ಪಾಕಿಸ್ತಾನ ಗಡಿಯಲ್ಲಿ 300ಕ್ಕೂ ಹೆಚ್ಚು ಡ್ರೋನ್‌ಗಳ ಹಾರಾಟವನ್ನು ಗುರುತಿಸಲಾಗಿದೆ ಎಂದು ಭದ್ರತಾ ಸಂಸ್ಥೆಗಳು ಹೇಳಿವೆ. ಡ್ರೋನ್‌ಗಳನ್ನು ಗುರುತಿಸಿ ತಡೆಯಲು ಸಾಧ್ಯವಾಗುವಂತಹ ತಂತ್ರಜ್ಞಾನವೂ ಸೇನೆಯ ಬಳಿ ಇಲ್ಲ ಎನ್ನಲಾಗಿದೆ. ದೇಶೀಯವಾಗಿ ಅಭಿವೃದ್ಧಿಪಡಿಸಲಾಗಿರುವ ಡ್ರೋನ್ ತಡೆ ತಂತ್ರಜ್ಞಾನವನ್ನು ಕಾಡು, ಮರುಭೂಮಿ ಮತ್ತು ಜೌಗು ಪ್ರದೇಶಗಳಲ್ಲಿ ಪರೀಕ್ಷೆ ನಡೆಸಲಾಗುತ್ತಿದೆ.
ಪ್ರಚೋದನೆಗೆ ತಕ್ಕ ಉತ್ತರ: ರಾಜನಾಥ್
ನವದೆಹಲಿ: ಭಾರತವು ಶಾಂತಿಪ್ರಿಯ ದೇಶ, ಯಾವುದೇ ರೀತಿಯ ಅತಿಕ್ರಮಣಶೀಲತೆಯನ್ನು ತೋರುವುದಿಲ್ಲ. ಆದರೆ, ಕೆಣಕಿದರೆ ಅಥವಾ ಬೆದರಿಸಿದರೆ ತಕ್ಕ ಪ್ರತ್ಯುತ್ತರ ನೀಡಲು ಸದಾ ಸನ್ನದ್ಧವೂಆಗಿದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಪೂರ್ವ ಲಡಾಖ್‌ನಲ್ಲಿ ಹೇಳಿದ್ದಾರೆ.
ರಾಜನಾಥ್ ಅವರುಈ ಪ್ರದೇಶದ ಭೇಟಿಯ ಎರಡನೇ ದಿನವಾದ ಸೋಮವಾರ, ಮುಂಚೂಣಿ ನೆಲೆಯ ಸೈನಿಕರನ್ನು ಉದ್ದೇಶಿಸಿ ಮಾತನಾಡಿದರು. ನೆರೆಯ ದೇಶಗಳ ಜತೆಗೆ ಇರುವ ವಿವಾದಗಳನ್ನು ಮಾತುಕತೆ ಮೂಲಕ ಪರಿಹರಿಸಲು ಭಾರತ ಸದಾ ಸಿದ್ಧ. ಆದರೆ, ಅದಕ್ಕಾಗಿ ದೇಶದ ಸುರಕ್ಷತೆಯಲ್ಲಿ ಯಾವುದೇ ರಾಜಿ ಇಲ್ಲ ಎಂದರು.
63 ಸೇತುವೆ ಲೋಕಾರ್ಪಣೆ:ಗಡಿ ರಸ್ತೆ ಸಂಘಟನೆಯು (ಬಿಆರ್‌ಒ) ಆರು ರಾಜ್ಯಗಳು ಮತ್ತು ಎರಡು ಕೇಂದ್ರಾಡಳಿತ ಪ್ರದೇಶಗಳಲ್ಲಿ₹240 ಕೋಟಿ ವೆಚ್ಚದಲ್ಲಿ ನಿರ್ಮಿಸಿರುವ 63 ಸೇತುವೆಗಳನ್ನು ರಾಜನಾಥ್ ಅವರು ದೇಶಕ್ಕೆ ಸಮರ್ಪಿಸಿದರು.
ಗಡಿಗೆ 50 ಸಾವಿರ ಯೋಧರು?: ಹೆಚ್ಚುವರಿಯಾಗಿ ಕನಿಷ್ಠ 50 ಸಾವಿರ ಯೋಧರನ್ನು ಚೀನಾ ಗಡಿಗೆ ಭಾರತವು ರವಾನಿಸಿದೆ ಎಂಬ ವರದಿಗಳು ಪ್ರಕಟವಾಗಿವೆ.
ಕಳೆದ ಕೆಲವು ತಿಂಗಳಲ್ಲಿ ಯೋಧರು ಮತ್ತು ಯುದ್ಧ ವಿಮಾನಗಳನ್ನು ಗಡಿಗೆ ಕಳುಹಿಸಲಾಗುತ್ತಿದೆ. ಈಗ ಗಡಿಯಲ್ಲಿ ಭಾರತದ ಸೈನಿಕರ ಸಂಖ್ಯೆಯು ಎರಡು ಲಕ್ಷದಷ್ಟಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಇದು ಶೇ 40ರಷ್ಟು ಹೆಚ್ಚು. ಆದರೆ, ಈ ಬಗ್ಗೆ ಅಧಿಕೃತವಾದ ಯಾವುದೇ ಹೇಳಿಕೆ ಹೊರಬಿದ್ದಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.