ADVERTISEMENT

ಕತ್ತಲ ಪದರದಲ್ಲಿ ಅನಾದಿ ಕಾಲದತ್ತ ಬೆಳಕು

‘ಚಂದ್ರಯಾನ–2’ ಬಗೆದು ತರಲಿದೆ ಆದಿ ಕಾಲದ ಮಾಹಿತಿ

ಪಿಟಿಐ
Published 25 ಜುಲೈ 2019, 19:51 IST
Last Updated 25 ಜುಲೈ 2019, 19:51 IST
chandrayana 2
chandrayana 2   

ನವದೆಹಲಿ : ಚಂದ್ರನತ್ತ ಸಾಗುತ್ತಿರುವ ಚಂದ್ರಯಾನ–2 ನೌಕೆ, ಈವರೆಗೆ ಯಾರೂ ಶೋಧಿಸಿಲ್ಲದ ದಕ್ಷಿಣ ಧ್ರುವದಲ್ಲಿ ಇಳಿದ ಬಳಿಕ ಹತ್ತು ಹಲವು ಅಚ್ಚರಿಯ ವಿಚಾರಗಳನ್ನು ತಿಳಿಸ ಬಹುದು ಎಂಬ ನಿರೀಕ್ಷೆ ಈಗ ಇನ್ನಷ್ಟು ಬಲಗೊಂಡಿದೆ. ಚಂದ್ರನ ದಕ್ಷಿಣ ಧ್ರುವದಲ್ಲಿ ನೀರಿನ ಕಣಗಳು ಇವೆಯೇ ಎಂಬುದರ ಪರಿಶೀಲನೆ ಚಂದ್ರಯಾನ–2ರ ಉದ್ದೇಶಗಳಲ್ಲಿ ಒಂದು. ಇತ್ತೀಚಿನ ಸಂಶೋಧನೆಗಳು ಹೇಳುವಂತೆ, ಈ ಹಿಂದೆ ಅಂದಾಜಿಸಿದ್ದಕ್ಕಿಂತ ಬಹಳ ಹೆಚ್ಚು ಮಂಜುಗಡ್ಡೆ ಅಲ್ಲಿ ಇದೆ.

ಸೌರಮಂಡಲದ ಅತ್ಯಂತ ತೀವ್ರವಾದ ವಾತಾವರಣಗಳು ಈ ಪ್ರದೇ ಶದಲ್ಲಿ ಇವೆ: ನಾವು ಊಹಿಸಲು ಕೂಡ ಸಾಧ್ಯವಾಗದಷ್ಟು ಶೀತ ಪ್ರದೇಶ ಇಲ್ಲಿದೆ. ಹಾಗೆಯೇ ನಿರಂತರವಾಗಿ ಸೂರ್ಯನ ಬೆಳಕು ಬೀಳುವ ಮತ್ತು ಸದಾ ನೆರಳಿನಲ್ಲಿಯೇ ಇರುವ ಪ್ರದೇಶಗಳೂ ಇವೆ. ಜತೆಗೆ, ಈ ಪ್ರದೇಶವು ಅಸಂಖ್ಯ ಕುಳಿಗಳಿಂದಲೂ ಕೂಡಿದೆ.

ಹಾಗಾಗಿಯೇ ‘ನಾಸಾ’ವು 2024 ರಲ್ಲಿ ಈ ಪ್ರದೇಶಕ್ಕೆ ಗಗನಯಾನಿಗಳನ್ನು ಕಳುಹಿಸುವ ಗುರಿ ಇಟ್ಟುಕೊಂಡಿದೆ.

ADVERTISEMENT

ಇದೇ 22ರಂದು ಇಸ್ರೊ ಉಡ್ಡಯನ ಮಾಡಿದ ‘ಚಂದ್ರಯಾನ–2’ 48 ದಿನಗಳ ಐತಿಹಾಸಿಕ ಪಯಣದ ಬಳಿಕ ಚಂದ್ರನ ದಕ್ಷಿಣ ಧ್ರುವವನ್ನು ಸ್ಪರ್ಶಿ ಸಲಿದೆ. ಅಲ್ಲಿ ನೀರಿನ ಶೋಧ ನಡೆಸಲಿದೆ.

ಚಂದ್ರ ಮತ್ತು ಬುಧ ಗ್ರಹದ ಮೇಲೆ ಇರುವ ಕುಳಿಗಳಲ್ಲಿ ಸಾಮ್ಯ ಇದೆ ಎಂದು ಅಮೆರಿಕದ ಕ್ಯಾಲಿಫೋರ್ನಿಯಾ ಮತ್ತು ಲಾಸ್‌ ಏಂಜಲೀಸ್‌ ವಿಶ್ವವಿದ್ಯಾಲಯಗಳ ಸಂಶೋಧಕರು ಹೇಳುತ್ತಾರೆ. ಚಂದ್ರನ ಮೇಲೆ ಸದಾ ನೆರಳು ಇರುವ ಪ್ರದೇಶದಲ್ಲಿ ದಪ್ಪ ಮಂಜುಗಡ್ಡೆ ಪದರ ಇದೆ ಎಂಬ ವಾದವನ್ನು ‘ನೇಚರ್‌ ಜಿಯೊಸೈನ್ಸ್‌’ ನಿಯತಕಾಲಿಕದಲ್ಲಿ ಪ್ರಕಟವಾದ ಪ್ರಬಂಧದಲ್ಲಿ ಅವರು ಮುಂದಿಟ್ಟಿದ್ದಾರೆ. ಬುಧಗ್ರಹದ ಉತ್ತರ ಧ್ರುವದಲ್ಲಿರುವ ಸುಮಾರು 2,000 ಕುಳಿಗಳನ್ನು ಮರ್ಕ್ಯುರಿ ಅಲ್ಟಿಮೀಟರ್‌ ದತ್ತಾಂಶ ಬಳಸಿ ಈ ವಿಜ್ಞಾನಿಗಳು ವಿಶ್ಲೇಷಣೆ ನಡೆಸಿದ್ದಾರೆ. ಹೆಚ್ಚಿನ ಅಕ್ಷಾಂಶದತ್ತ ಸಾಗಿದಂತೆ ಈ ಕುಳಿಗಳ ಆಳ ಕಡಿಮೆಯಾಗುತ್ತಾ ಸಾಗುತ್ತದೆ. ಇಲ್ಲಿ ಮಂಜುಗಡ್ಡೆಯ ಪದರಗಳಿವೆ ಎಂದು ಪ್ರಬಂಧದಲ್ಲಿ ಹೇಳಲಾಗಿದೆ.

ಚಂದ್ರನ ಸುಮಾರು 12 ಸಾವಿರ ಕುಳಿಗಳನ್ನು ಇದೇ ರೀತಿಯಲ್ಲಿ ವಿಶ್ಲೇಷಣೆ ನಡೆಸಲಾಗಿದೆ. ಬುಧಗ್ರಹ ಮತ್ತು ಚಂದ್ರನ ದಕ್ಷಿಣ ಧ್ರುವದ ನಡುವಣ ಸಾಮ್ಯ ಇದರಿಂದ ತಿಳಿದು ಬಂದಿದೆ.

ತಾಪ ಮೈನಸ್‌ 233 ಡಿಗ್ರಿ ಸೆಲ್ಸಿಯಸ್‌


ದಕ್ಷಿಣದ ಧ್ರುವದಲ್ಲಿ ಎಂದೂ ಬೆಳಕು ಬೀಳದ ಪ್ರದೇಶಗಳಿವೆ ಎಂಬುದೇ ಅತ್ಯಂತ ಕುತೂಹಲಕರ ವಿಚಾರ. ಇಂತಹ ಪ್ರದೇಶಗಳಲ್ಲಿ ನೀರಿನಂತಹ ವಸ್ತುಗಳು ಅನಾದಿ ಕಾಲದಿಂದ ಸಂಗ್ರಹವಾಗಿ ಉಳಿದಿರಬಹುದು. ಸೌರಮಂಡಲದ ಅತ್ಯಂತ ತಂಪು ಪ್ರದೇಶ ಇದೇ ಆಗಿರಬಹುದು. ಇಲ್ಲಿನ ತಾಪ‍ ಮೈನಸ್‌ 233 ಡಿಗ್ರಿ ಸೆಲ್ಸಿಯಸ್‌ ಇರಬಹುದು ಎಂದು ಅಂದಾಜಿಸಲಾಗಿದೆ.

ಆದಿಮ ಕಾಲದ ನೀರಿನ ಮಾದರಿ ಪತ್ತೆಯಾದರೆ ಅದು ಚಂದ್ರನಲ್ಲಿನ ನೀರಿನ ಮೂಲದ ವಿಚಾರದಲ್ಲಿ ಬಹುದೊಡ್ಡ ಶೋಧಕ್ಕೆ ದಾರಿ ಮಾಡಿಕೊಡಬಹುದು ಎಂದು ಇಸ್ರೊ ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.