ADVERTISEMENT

ಸಿಪಿಎಂ ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚೂರಿ ನಿಧನ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 12 ಸೆಪ್ಟೆಂಬರ್ 2024, 10:42 IST
Last Updated 12 ಸೆಪ್ಟೆಂಬರ್ 2024, 10:42 IST
<div class="paragraphs"><p>ಸೀತಾರಾಂ ಯೆಚೂರಿ</p></div>

ಸೀತಾರಾಂ ಯೆಚೂರಿ

   

– ಪಿಟಿಐ ಚಿತ್ರ

ನವದೆಹಲಿ: ತೀವ್ರ ಅನಾರೋಗ್ಯದಿಂದಾಗಿ ದೆಹಲಿಯ ಏಮ್ಸ್ ಆಸ್ಪತ್ರೆಗೆ ದಾಖಲಾಗಿದ್ದ ಭಾರತೀಯ ಕಮ್ಯುನಿಷ್ಟ್ ಪಕ್ಷದ (ಮಾರ್ಕ್ಸ್‌ವಾದ) ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚೂರಿ ಗುರುವಾರ ನಿಧನರಾಗಿದ್ದಾರೆ. ಅವರಿಗೆ 72 ವರ್ಷ ಆಗಿತ್ತು.

ADVERTISEMENT

ಶ್ವಾಸಕೋಶದಿಂದ ಸೋಂಕಿಗೆ ತುತ್ತಾಗಿ ಅವರು ಆಗಸ್ಟ್ 19ರಂದು ಆಸ್ಪತ್ರೆಗೆ ದಾಖಲಾಗಿದ್ದರು. ತೀವ್ರ ನಿಗಾ ಘಟಕದಲ್ಲಿ ಅವರಿಗೆ ಚಿಕಿತ್ಸೆ ನೀಡಲಾಗಿತ್ತು.

ಯೆಚೂರಿ ಅವರ ಇಚ್ಛೆಗೆ ಅನುಗುಣವಾಗಿ, ಅವರ ಮೃತದೇಹವನ್ನು ಏಮ್ಸ್‌ಗೆ ದಾನವಾಗಿ ನೀಡಲಾಗುತ್ತಿದೆ. ಅದನ್ನು ಅಲ್ಲಿ ಬೋಧನೆ ಹಾಗೂ ಸಂಶೋಧನಾ ಉದ್ದೇಶಕ್ಕೆ ಬಳಸಿಕೊಳ್ಳಲಾಗುತ್ತದೆ.

ಮೃತದೇಹವನ್ನು ಶುಕ್ರವಾರ ಸಂಜೆ ಅವರ ನಿವಾಸಕ್ಕೆ ಒಯ್ಯಲಾಗುತ್ತದೆ. ಶನಿವಾರ ಬೆಳಿಗ್ಗೆ 11ರ ಸುಮಾರಿಗೆ ಪಕ್ಷದ ಪ್ರಧಾನ ಕಚೇರಿಗೆ ತರಲಾಗುತ್ತದೆ. ಅಲ್ಲಿ ಸಾರ್ವಜನಿಕರು ಅಂತಿಮ ನಮನ ಸಲ್ಲಿಸಬಹುದು. ಶನಿವಾರ ಮಧ್ಯಾಹ್ನ 3 ಗಂಟೆಯ ನಂತರ ಅದನ್ನು ಏಮ್ಸ್‌ಗೆ ಹಸ್ತಾಂತರಿಸಲಾಗುತ್ತದೆ.

ದೇಶದ ರಾಜಕೀಯದಲ್ಲಿ ಪ್ರಮುಖ ವ್ಯಕ್ತಿಯಾಗಿ ಗುರುತಿಸಿಕೊಂಡಿದ್ದ ಅವರು, 32 ವರ್ಷಗಳಿಂದ ಸಿಪಿಎಂನ ಕೇಂದ್ರ ಸಮಿತಿ ಪಾಲಿಟ್ ಬ್ಯೂರೊ ಸದಸ್ಯರಾಗಿದ್ದರು. 2015ರಿಂದ ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿದ್ದರು. 2005–2017ರವರೆಗೆ ಪಶ್ಚಿಮ ಬಂಗಾಳದಿಂದ ರಾಜ್ಯಸಭಾ ಸದಸ್ಯರಾಗಿದ್ದರು.

1952ರ ಆಗಸ್ಟ್‌ 12ರಂದಿ ಚೆನ್ನೈನಲ್ಲಿ ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದ ಅವರ ಮೂಲ ಹೆಸರು, ಯೆಚೂರಿ ಸೀತಾರಾಮ ರಾವ್. ತಂದೆ ಸರ್ವೇಶ್ವರ ಸೋಮಯಾಜಲು ಯೆಚೂರಿ. ತಾಯಿ ಕಲ್ಪಕಂ.

ಸಿಪಿಎಂನ ಮೊದಲ ಪ್ರಧಾನ ಕಾರ್ಯದರ್ಶಿ ಪಿ. ಸುಂದರಯ್ಯ (ಸುಂದರ ರಾಮ ರೆಡ್ಡಿ) ಅವರಿಂದ ಪ್ರಭಾವಿತರಾಗಿ, ತಮ್ಮ ಹೆಸರಿನಲ್ಲಿದ್ದ ಜಾತಿ ಸೂಚಕ ನಾಮವನ್ನು ತೆಗೆದು ಸೀತಾರಾಂ ಯೆಚೂರಿ ಎಂದು ಬದಲಾಯಿಸಿಕೊಂಡಿದ್ದರು.

ಸೀತಾರಾಂ ಯೆಚೂರಿ ನಡೆದು ಬಂದ ಹಾದಿ...

* 1952ರ ಆಗಸ್ಟ್‌ 12: ಮದ್ರಾಸ್‌ (ಈಗಿನ ಚೆನ್ನೈ) ತೆಲುಗು ಕುಟುಂಬದಲ್ಲಿ ಜನನ. ಹೈದರಾಬಾದ್‌ನಲ್ಲಿ ವಿದ್ಯಾಭ್ಯಾಸ 

* 1969: ಆಂಧ್ರಪ್ರದೇಶದಲ್ಲಿ ತೆಲಂಗಾಣ ಹೋರಾಟ ಆರಂಭವಾದ ಬಳಿಕ ಉನ್ನತ ವಿದ್ಯಾಭ್ಯಾಸಕ್ಕಾಗಿ ದೆಹಲಿಗೆ

* 1970: ಸಿಬಿಎಸ್‌ಇ 10ನೇ ತರಗತಿಯಲ್ಲಿ ಮೊದಲ ರ‍್ಯಾಂಕ್‌ನ ಸಾಧನೆ

* 1974: ಜೆಎನ್‌ಯುನಲ್ಲಿ ಶಿಕ್ಷಣ ಪಡೆಯುತ್ತಿದ್ದಾಗ ಸ್ಟೂಡೆಂಟ್ಸ್‌ ಫೆಡರೇಷನ್‌ ಆಫ್‌ ಇಂಡಿಯಾಕ್ಕೆ (ಎಸ್‌ಎಫ್‌ಐ) ಸೇರ್ಪಡೆ

* 1975: ಸಿಪಿಎಂ ಸದಸ್ಯರಾಗಿ ಪಕ್ಷ ರಾಜಕಾರಣಕ್ಕೆ ಪ್ರವೇಶ

* 1978: ಎಸ್‌ಎಫ್‌ಐನ ಅಖಿಲ ಭಾರತ ಜಂಟಿ ಕಾರ್ಯದರ್ಶಿಯಾಗಿ ಆಯ್ಕೆ, ನಂತರ ಅಧ್ಯಕ್ಷರಾಗಿ ನೇಮಕ

* 1984: ಸಿಪಿಎಂನ ಕೇಂದ್ರ ಸಮಿತಿಯ ಸದಸ್ಯರಾಗಿ ನೇಮಕ

*1992: ಸಿಪಿಎಂನ ಪಾಲಿಟ್‌ಬ್ಯೂರೊ ಸದಸ್ಯರಾಗಿ ಆಯ್ಕೆ

* 2005: ಪಶ್ಚಿಮ ಬಂಗಾಳದಿಂದ ರಾಜ್ಯಸಭಾ ಸದಸ್ಯರಾಗಿ ಆಯ್ಕೆ

* 2015 ಏಪ್ರಿಲ್‌ 19: ಸಿಪಿಎಂನ ಐದನೇ ಪ್ರಧಾನ ಕಾರ್ಯದರ್ಶಿಯಾಗಿ ನೇಮಕ

* 2011: ಎರಡನೇ ಅವಧಿಗೆ ರಾಜ್ಯಸಭಾ ಸದಸ್ಯರಾಗಿ ಆಯ್ಕೆ

* 2017: ರಾಜ್ಯಸಭಾ ಸದಸ್ಯತ್ವದ ಅವಧಿ ಕೊನೆ 

* 2021: ಕೋವಿಡ್‌ನಿಂದಾಗಿ 35 ವರ್ಷದ ಮಗನ ಸಾವು

* 2023: ವಿರೋಧ ಪಕ್ಷಗಳ ‘ಇಂಡಿಯಾ’ ಒಕ್ಕೂಟದ ರಚನೆಯಲ್ಲಿ ಮಹತ್ವದ ಪಾತ್ರ 

* 2024 ಆ.19: ಉಸಿರಾಟದ ಸಮಸ್ಯೆ, ನಿಮೋನಿಯಾ ಕಾರಣಕ್ಕೆ ದೆಹಲಿಯ ಏಮ್ಸ್‌ಗೆ ದಾಖಲು

* 2024 ಸೆ.12: ಚಿಕಿತ್ಸೆಗೆ ಸ್ಪಂದಿಸದೆ ಕೊನೆಯುಸಿರು. 50 ವರ್ಷಗಳ ರಾಜಕೀಯ ಜೀವನಕ್ಕೆ ತೆರೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.