ADVERTISEMENT

ಪುರುಷತ್ವ ಪರೀಕ್ಷೆಗೆ ವೀರ್ಯ ಬದಲು ರಕ್ತದ ಮಾದರಿಗೆ ಎಸ್‌ಒಪಿ ರಚಿಸಿ: ಮದ್ರಾಸ್ ಹೈಕೋರ್ಟ್

ಪಿಟಿಐ
Published 10 ಜುಲೈ 2023, 16:20 IST
Last Updated 10 ಜುಲೈ 2023, 16:20 IST
   

ಚೆನ್ನೈ: ‘ವಿಜ್ಞಾನವು ಮುಂದುವರಿದಿದ್ದು, ಪುರುಷತ್ವ ಸಾಮರ್ಥ್ಯ ಪರೀಕ್ಷೆಗಾಗಿ ಆರೋಪಿಯ ವೀರ್ಯದ ಮಾದರಿ ಸಂಗ್ರಹಿಸುವ ಅಗತ್ಯವಿಲ್ಲ. ಅದರ ಬದಲು ರಕ್ತದ ಮಾದರಿ ಬಳಸಿ ಸಾಮರ್ಥ್ಯ ಪರೀಕ್ಷೆ ನಡೆಸಲು ಪ್ರಮಾಣಿತ ಕಾರ್ಯಾಚರಣೆ ವಿಧಾನವನ್ನು (ಎಸ್‌ಒಪಿ) ರೂಪಿಸಿ’ ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಮದ್ರಾಸ್ ಹೈಕೋರ್ಟ್ ನಿರ್ದೇಶನ ನೀಡಿದೆ. 

ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯ್ದೆ ಮತ್ತು ಬಾಲಾಪರಾಧಿ ಕಾಯ್ದೆಯ (ಕಾಳಜಿ ಮತ್ತು ರಕ್ಷಣೆ) ಅನುಷ್ಠಾನದ ಕುರಿತು ನಿಗಾ ವಹಿಸಲು ವಿಶೇಷವಾಗಿ ನೇಮಿಸಲಾಗಿರುವ ನ್ಯಾಯಮೂರ್ತಿಗಳಾದ ಎನ್. ಆನಂದ ವೆಂಕಟೇಶ್ ಮತ್ತು ಸುಂದರ್ ಮೋಹನ್ ಅವರನ್ನೊಳಗೊಂಡ ವಿಭಾಗೀಯ ಪೀಠವು ಜುಲೈ 7ರಂದು ಈ ಮೇಲಿನಂತೆ ನಿರ್ದೇಶನ ನೀಡಿದೆ.

ಅಪ್ರಾಪ್ತ ವಯಸ್ಸಿನ ಬಾಲಕಿ ಮತ್ತು ಬಾಲಕನಿಗೆ ಸಂಬಂಧಪಟ್ಟ ಹೇಬಿಯಸ್ ಕಾರ್ಪಸ್ ಅರ್ಜಿಯ ವಿಚಾರಣೆಯನ್ನು ನಡೆಸಿದ ಪೀಠವು, ಎರಡು ಬೆರಳು ಪರೀಕ್ಷೆಯನ್ನು ಸ್ಥಗಿತಗೊಳಿಸಿರುವುದನ್ನು ಖಚಿತಪಡಿಸಿಕೊಳ್ಳುವ ಅಗತ್ಯವನ್ನೂ ಒತ್ತಿ ಹೇಳಿದೆ. 

ADVERTISEMENT

ಅಂತೆಯೇ, ಲೈಂಗಿಕ ಅಪರಾಧ ಪ್ರಕರಣಗಳಲ್ಲಿ ಆರೋಪಿಯ ಪುರುಷತ್ವ ಸಾಮರ್ಥ್ಯ ಪರೀಕ್ಷೆ ಮಾಡಲಾಗುತ್ತದೆ. ಇಂಥ ಪ್ರಕರಣಗಳಲ್ಲಿ ಆರೋಪಿಯಿಂದ ವೀರ್ಯವನ್ನು ಸಂಗ್ರಹಿಸಲಾಗುತ್ತದೆ. ಇದು ಹಳೆಯ ವಿಧಾನವಾಗಿದೆ. ಈಗ ವಿಜ್ಞಾನವು ಸಾಕಷ್ಟು ಪ್ರಗತಿ ಸಾಧಿಸಿದೆ. ಪುರುಷತ್ವ ಪರೀಕ್ಷೆಗಾಗಿ ರಕ್ತದ ಮಾದರಿ ಸಂಗ್ರಹಿಸಿ ಪುರುಷತ್ವ ಪರೀಕ್ಷೆ ಮಾಡಲು ಸಾಧ್ಯವಿದೆ. ಇಂತಹ ಸುಧಾರಿತ ತಂತ್ರಗಳನ್ನು ವಿಶ್ವದಾದ್ಯಂತ ಅನುಸರಿಸಲಾಗುತ್ತಿದೆ. ಈ ನಿಟ್ಟಿನಲ್ಲಿ ನಾವೂ ಈ ತಂತ್ರವನ್ನು ಅಳವಡಿಸಿಕೊಳ್ಳಬೇಕು. ಈ ನಿಟ್ಟಿನಲ್ಲಿ ಪ್ರಮಾಣಿತ  ಕಾರ್ಯಾಚರಣೆ ವಿಧಾನವನ್ನು ರೂಪಿಸಬೇಕು’ ಎಂದು ನ್ಯಾಯಪೀಠವು ನಿರ್ದೇಶನ ನೀಡಿತು. 

ಪ್ರಕರಣದ ಮುಂದಿನ ವಿಚಾರಣೆಯನ್ನು ನ್ಯಾಯಾಲಯವು ಆಗಸ್ಟ್ 11ಕ್ಕೆ ಮುಂದೂಡಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.