ನವದೆಹಲಿ: 'ಸುಲ್ಲಿ ಡೀಲ್ಸ್' ಆ್ಯಪ್ ಸೃಷ್ಟಿಕರ್ತ ಎಂದು ಶಂಕಿಸಲಾಗಿರುವ ವ್ಯಕ್ತಿಯನ್ನು ದೆಹಲಿ ಪೊಲೀಸರು ಮಧ್ಯಪ್ರದೇಶದ ಇಂದೋರ್‌ನಿಂದ ಬಂಧಿಸಿದ್ದಾರೆ.
ಸುಲ್ಲಿ ಡೀಲ್ಸ್ ಆ್ಯಪ್ ಪ್ರಕರಣದಲ್ಲಿ ನಡೆದ ಮೊದಲ ಬಂಧನ ಇದಾಗಿದೆ ಎಂದು ಪೊಲೀಸರುತಿಳಿಸಿದ್ದಾರೆ.
ಮೊಬೈಲ್ ಆ್ಯಪ್‌ನಲ್ಲಿ ನೂರಾರು ಮುಸ್ಲಿಂ ಮಹಿಳೆಯರನ್ನು ಅನುಮತಿಯಿಲ್ಲದೆ ಭಾವಚಿತ್ರ ಸಮೇತ ಹರಾಜಿಗೆ ಇಡಲಾಗಿದೆ ಎಂದು ಆರೋಪಿಸಲಾಗಿದೆ.
ಇಂದೋರ್‌ನ ಐಪಿಎಸ್ ಅಕಾಡೆಮಿಯಲ್ಲಿ ಬಿಸಿಎ ಅಧ್ಯಯನ ಮಾಡಿರುವ ಆರೋಪಿ ಓಂಕಾರೇಶ್ವರ ಠಾಕೂರ್ (26) ನ್ಯೂಯಾರ್ಕ್ ಸಿಟಿ ಟೌನ್‌ಶಿಪ್‌ನ ನಿವಾಸಿಯಾಗಿದ್ದಾರೆ.
ವಿಚಾರಣೆ ಸಮಯದಲ್ಲಿ ಆರೋಪಿಯು ನಾನು ಮುಸ್ಲಿಂ ಮಹಿಳೆಯರನ್ನು ಮಾನಹಾನಿ ಮತ್ತು ಟ್ರೋಲ್ ಮಾಡುವ ಟ್ವಿಟರ್ ಗುಂಪಿನ ಸದಸ್ಯ ಎಂದು ತಪ್ಪೊಪ್ಪಿಕೊಂಡಿದ್ದಾನೆ ಎಂದು ಡೆಪ್ಯೂಟಿ ಕಮಿಷನರ್ ಆಫ್ ಪೊಲೀಸ್ (ಐಎಫ್‌ಎಸ್‌ಒ) ಕೆ.ಪಿ.ಎಸ್. ಮಲ್ಹೋತ್ರಾ ತಿಳಿಸಿದ್ದಾರೆ.
ಆತ ಗಿಟ್‌ಹಬ್‌ನಲ್ಲಿ ಕೋಡ್ ಅಭಿವೃದ್ಧಿಪಡಿಸಿದನು. ಇದರ ಆಕ್ಸೆಸ್ ಗುಂಪಿನ ಎಲ್ಲ ಸದಸ್ಯರಿಗೂ ಇತ್ತು. ಟ್ವಿಟರ್ ಖಾತೆ ಮೂಲಕ ಆ್ಯಪ್ ಹಂಚಿಕೊಂಡಿದ್ದಾನೆ. ಮುಸ್ಲಿಂ ಮಹಿಳೆಯರ ಫೋಟೊಗಳನ್ನು ಗುಂಪಿನ ಸದಸ್ಯರು ಅಪ್‌ಲೋಡ್ ಮಾಡಿದ್ದಾರೆ ಎಂದು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.