ADVERTISEMENT

ಬಾಲ್ಯವಿವಾಹ | ಅಸ್ಸಾಂನಲ್ಲಿ ಪುರುಷರ ಬಂಧನ: ಪತ್ನಿಯರ ಆಕ್ರಂದನ

​ಪ್ರಜಾವಾಣಿ ವಾರ್ತೆ
Published 5 ಫೆಬ್ರುವರಿ 2023, 19:30 IST
Last Updated 5 ಫೆಬ್ರುವರಿ 2023, 19:30 IST
   

ಗುವಾಹಟಿ: ಅಸ್ಸಾಂನಲ್ಲಿ ಬಾಲ್ಯವಿವಾಹ ಪ್ರಕರಣಗಳ ಸಂಬಂಧ ಗುರುವಾರದಿಂದ ಭಾನುವಾರದವರೆಗೆ ಪೊಲೀಸರು ನಡೆಸಿರುವ ಬೃಹತ್‌ ಕಾರ್ಯಾಚರಣೆಯಲ್ಲಿ 2,278 ಪುರುಷರನ್ನು ಬಂಧಿಸಲಾಗಿದ್ದು, ಠಾಣೆಗಳ ಮುಂದೆ ಮಹಿಳೆಯರ ಆಕ್ರಂದನ ಮುಗಿಲುಮುಟ್ಟಿದೆ.

ಬಂಧಿತರಲ್ಲಿ 50ಕ್ಕೂ ಹೆಚ್ಚು ಮಂದಿ ಖಾಜಿಗಳು ಮತ್ತು ಪುರೋಹಿತರು ಇದ್ದಾರೆ. ಬಾಲ್ಯ ವಿವಾಹಗಳನ್ನು ಮಾಡಿಸಿದ ಕಾರಣಕ್ಕೆ ಇವರ ಮೇಲೂ ಪ್ರಕರಣ ದಾಖಲಿಸಿದ್ದಾರೆ.

13ರಿಂದ 14 ವರ್ಷದ ಬಾಲಕಿಯರ ಮದುವೆಗಳು ನಡೆಯುತ್ತಿವೆ. ಅವರೆಲ್ಲರೂ ಬಾಲ್ಯಾವಸ್ಥೆಯಲ್ಲೇ ತಾಯ್ತನಕ್ಕೆ ಕಾಲಿಡುತ್ತಿದ್ದಾರೆ. ಹಲವು ಬಾಲಕಿಯರು ಹೆರಿಗೆ ವೇಳೆ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ಮತ್ತು ಸಂಘಟನೆಗಳ ಕಾರ್ಯಕರ್ತರು ಹೇಳಿದ್ದಾರೆ.

ADVERTISEMENT

ಬಾಲಕಿಯರನ್ನು ವಿವಾಹವಾಗಿರುವ ಪುರುಷರನ್ನು ಪೋಕ್ಸೊ ಕಾಯ್ದೆಯಡಿ ಬಂಧಿಸುವ ಕಾರ್ಯಾಚರಣೆಯನ್ನು ಪೊಲೀಸರು ಭಾನುವಾರವೂ ಮುಂದುವರಿಸುತ್ತಿದ್ದಂತೆ, ಕೆಲವು ಗರ್ಭಿಣಿಯರು, ಬಗಲಲ್ಲಿ ಮಗು ಎತ್ತಿಕೊಂಡಿದ್ದ ಮಹಿಳೆಯರು, ಯುವತಿಯರು ಪೊಲೀಸ್ ಠಾಣೆಗಳ ಹೊರಗೆ ಜಮಾಯಿಷಿ ತಮ್ಮ ಪತಿಯರನ್ನು ಬಿಡುಗಡೆ ಮಾಡುವಂತೆ ಗೋಳಿಡುತ್ತಿದ್ದರು.

ಪಶ್ಚಿಮ ಅಸ್ಸಾಂನ ಧುಬರಿ ಜಿಲ್ಲೆಯ ಬಾಗಾಬರಿ ಪೊಲೀಸ್ ಠಾಣೆಯ ಹೊರಗೆ ಯುವತಿಯೊಬ್ಬಳು ಪೊಲೀಸ್‌ ವ್ಯಾನಿನೊಳಕ್ಕೆ ಜಿಗಿದು, ತನ್ನ ಪತಿಯನ್ನು ಪೊಲೀಸರ ವಶದಿಂದ ಬಿಡಿಸಿಕೊಳ್ಳಲು ಇನ್ನಿಲ್ಲದ ಸಾಹಸ ನಡೆಸಿದಳು. 17ರ ಹರೆಯದ ಆ ಯುವತಿ, ಕಳೆದ ತಿಂಗಳಷ್ಟೇ ತನ್ನ ಮೊದಲ ಮಗುವಿಗೆ ಜನ್ಮ ನೀಡಿದ್ದಾಳೆ. ‘ನಮ್ಮನ್ನು ಯಾರು ನೋಡಿಕೊಳ್ಳುತ್ತಾರೆ’ ಎಂದು ದುಃಖಿಸುತ್ತಿದ್ದ ಆಕೆ ಸಮಾಧಾನಪಡಿಸಲು ಪ್ರಯತ್ನಿಸಿದ ಪೊಲೀಸರ ಮೇಲೆ ಕೂಗಾಡಿದಳು.

ಧುಬರಿ ಜಿಲ್ಲೆಯ ತಮಾರ್ಹತ್ ಪೊಲೀಸ್ ಠಾಣೆಯ ಹೊರಗೆ ಶನಿವಾರವಷ್ಟೇ ಮಹಿಳೆಯರು ತಮ್ಮ ಗಂಡಂದಿರನ್ನು ತಕ್ಷಣ ಬಿಡುಗಡೆ ಮಾಡುವಂತೆ ಒತ್ತಾಯಿಸಿ ಸಂಬಂಧಿಕರ ಜತೆಗೆ ಪ್ರತಿಭಟನೆ ನಡೆಸಿದರು. ಗುಂಪುಗೂಡಿದ್ದ ಪ್ರತಿಭಟನನಿರತರನ್ನು ಚದುರಿಸಲು ಪೊಲೀಸರು ಅಶ್ರುವಾಯು ಸಿಡಿಸಿ, ಲಾಠಿ ಪ್ರಹಾರ ನಡೆಸಿದ್ದರು.

ಅಸ್ಸಾಂನಲ್ಲಿ ಮುಸ್ಲಿಂ ಬಹುಸಂಖ್ಯೆಯಲ್ಲಿರುವ ಜಿಲ್ಲೆಗಳಲ್ಲಿ ಒಟ್ಟು 4,074 ಪ್ರಕರಣಗಳು ದಾಖಲಾಗಿವೆ. ಧುಬರಿ ಜಿಲ್ಲೆಯೊಂದರಲ್ಲೇ 374 ಪ್ರಕರಣಗಳು ದಾಖಲಾಗಿದ್ದು, 126 ಜನರನ್ನು ಬಂಧಿಸಲಾಗಿದೆ. ಹೊಜೈ (255 ), ಮಾರಿಗೋನ್‌ 224 ), ಬಕ್ಸಾ ( 153 ), ನಾಗೋನ್ (141), ದರಾಂಗ್‌ (125), ಬೊಂಗೈಗಾನ್‌ (123), ಗೋಲ್‌ಪಾರಾ( 157 ) ಮತ್ತು ಬಾರ್ಪೆಟಾದಲ್ಲಿ ( 81 ) ಹೆಚ್ಚು ಪ್ರಕರಣಗಳು ವರದಿಯಾಗಿವೆ.

ತಾಯಿ ಮತ್ತು ಶಿಶು ಮರಣ ಪ್ರಮಾಣ ರಾಜ್ಯದಲ್ಲಿ ಹೆಚ್ಚಿರಲು ಬಾಲ್ಯವಿವಾಹವೇ ಪ್ರಮುಖ ಕಾರಣವಾಗಿರುವು ಕಂಡುಬಂದ ನಂತರ, ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರು 2006ರ ಮಕ್ಕಳ ವಿವಾಹ ನಿಷೇಧ ಕಾಯ್ದೆಯ ವಿವಿಧ ಸೆಕ್ಷನ್‌ಗಳ ಅಡಿ, ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯ್ದೆಯಡಿ ಕಠಿಣ ಕ್ರಮಕ್ಕೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದ್ದರು.

ಮುಸ್ಲಿಂ ಜನಸಂಖ್ಯೆ ಹೆಚ್ಚು ಇರುವ ಜಿಲ್ಲೆಗಳಲ್ಲಿ ಬಾಲ್ಯ ವಿವಾಹ ಪ್ರಕರಣಗಳು ಹೆಚ್ಚು ಕಂಡುಬಂದಿವೆ. ಬುಡಕಟ್ಟು ಸಮುದಾಯಗಳು, ಚಹಾ ತೋಟಗಳ ಪ್ರದೇಶಗಳಲ್ಲಿ ವಾಸಿಸುವ ಸಮುದಾಯಗಳಲ್ಲಿ ಬಾಲ್ಯ ವಿವಾಹ ಪದ್ಧತಿ ಹೆಚ್ಚು ಕಂಡುಬಂದಿದೆ. ಬಾಲ್ಯವಿವಾಹದ ವಿರುದ್ಧ ನಮ್ಮ ಸರ್ಕಾರ ಶೂನ್ಯ ಸಹಿಷ್ಣುತೆ ಹೊಂದಿದೆ ಎಂದು ಮುಖ್ಯಮಂತ್ರಿ ಶರ್ಮಾ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.