ರಾಜಕೀಯದ ಅಪರಾಧೀಕರಣವನ್ನು ತಡೆಯಲು ಚೌಕಟ್ಟು ರೂಪಿಸುವಂತೆ ಚುನಾವಣಾ ಆಯೋಗಕ್ಕೆ ಸುಪ್ರೀಂ ಕೋರ್ಟ್ ಸೂಚಿಸಿದೆ. ಇದು ರಾಷ್ಟ್ರೀಯ ಹಿತಾಸಕ್ತಿಯ ಕೆಲಸ ಎಂದೂ ಹೇಳಿದೆ. ಸಂಸದರು, ಶಾಸಕರಾಗಿಅಪರಾಧ ಹಿನ್ನೆಲೆಯ ವ್ಯಕ್ತಿಗಳ ಆಯ್ಕೆ ಹೆಚ್ಚುತ್ತಲೇ ಇದೆ. ಇದನ್ನು ತಡೆಯಬೇಕು ಎಂಬ ಚರ್ಚೆಯೂ ಜತೆಗೆ ನಡೆಯುತ್ತಿದೆ. ಕೆಲವು ಕ್ರಮಗಳನ್ನೂ ಕೈಗೊಳ್ಳಲಾಗಿದೆ. ಚೌಕಟ್ಟು ರೂಪಿಸುವ ಹೊಣೆಗಾರಿಕೆಯನ್ನು ಆಯೋಗಕ್ಕೆ ನೀಡಿರುವುದು ಅದಕ್ಕೆ ಇತ್ತೀಚಿನ ಸೇರ್ಪಡೆ.
2018ರಲ್ಲಿ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗಿದ್ದ ದೀಪಕ್ ಮಿಶ್ರಾ ನೇತೃತ್ವದ ಐವರು ನ್ಯಾಯಮೂರ್ತಿಗಳ ಪೀಠವು ರಾಜಕಾರಣದ ಅಪರಾಧೀಕರಣವನ್ನು ಪರಿಶೀಲನೆಗೆ ಒಳಪಡಿಸಿತ್ತು. ಗಂಭೀರ ಸ್ವರೂಪದ ಆರೋಪಗಳನ್ನು ಹೊತ್ತವರು ರಾಜಕೀಯಕ್ಕೆ ಪ್ರವೇಶಿಸುವುದನ್ನು ತಡೆಯುವ ಹೊಣೆ ಸಂಸತ್ತಿನದ್ದು ಎಂದು ಪೀಠವು ಹೇಳಿತ್ತು. ಅದಕ್ಕೆ ಬೇಕಾದ ಕಾನೂನು ರೂಪಿಸುವಂತೆ ಸಲಹೆ ಕೊಟ್ಟಿತ್ತು. ಗಂಭೀರ ಆರೋಪ ಇರುವವರ ಸ್ಪರ್ಧೆಗೆ ತಡೆ ಆದೇಶ ನೀಡಲು ನಿರಾಕರಿಸಿತ್ತು. ಸಂಸತ್ತು, ರಾಜಕೀಯ ಪಕ್ಷಗಳು ಮತ್ತು ರಾಜಕಾರಣಿಗಳೇ ಈ ವಿಚಾರದಲ್ಲಿ ಒಂದು ನಿರ್ಧಾರಕ್ಕೆ ಬರಬೇಕು ಎಂದು ಹೇಳಿತ್ತು.
ಹಾಗಿದ್ದರೂ, ಅಪರಾಧ ಹಿನ್ನೆಲೆ ಇರುವ ವ್ಯಕ್ತಿಗಳ ಬಗ್ಗೆ ಮತದಾರರಿಗೆ ಮಾಹಿತಿ ದೊರೆಯುವಂತಹ ಕ್ರಮವನ್ನು ಕೈಗೊಂಡಿತ್ತು. ಅಭ್ಯರ್ಥಿಗಳು ತಮ್ಮ ವಿರುದ್ಧ ಅಪರಾಧ ಪ್ರಕರಣಗಳು ದಾಖಲಾಗಿದ್ದರೆ ಅವುಗಳ ಬಗ್ಗೆ ಪತ್ರಿಕೆ ಮತ್ತು ಸುದ್ದಿ ವಾಹಿನಿಗಳಲ್ಲಿ ಕನಿಷ್ಠ ಮೂರು ಬಾರಿ ಜಾಹೀರಾತು ನೀಡಬೇಕು ಎಂಬ ನಿರ್ದೇಶನ ನೀಡಿತ್ತು. ಆದರೆ, ಇದು ಅಂತಹ ಫಲ ನೀಡಿಲ್ಲ ಎಂದು ಚುನಾವಣಾ ಆಯೋಗವು ಸುಪ್ರೀಂ ಕೋರ್ಟ್‌ಗೆ ಹೇಳಿದೆ. ಅಪರಾಧ ಪ್ರಕರಣ ಇರುವ ವ್ಯಕ್ತಿಗಳಿಗೆ ರಾಜಕೀಯ ಪಕ್ಷಗಳು ಸ್ಪರ್ಧಿಸಲು ಟಿಕೆಟ್ ನೀಡದಿರುವುದು ಉತ್ತಮ ಎಂದು ಆಯೋಗ ಅಭಿಪ್ರಾಯಪಟ್ಟಿದೆ.
ಲೋಕಸಭೆ: ಆರೋಪಿಗಳ ಪ್ರಾತಿನಿಧ್ಯ ಏರಿಕೆ
2019ರಲ್ಲಿ ಲೋಕಸಭೆಗೆ ಆಯ್ಕೆಯಾದವರಲ್ಲಿ ಶೇ 43ರಷ್ಟು ಮಂದಿ, ತಮ್ಮ ವಿರುದ್ಧ ಅಪರಾಧ ಪ್ರಕರಣಗಳು ದಾಖಲಾಗಿವೆ ಎಂದು ಘೋಷಿಸಿಕೊಂಡಿದ್ದಾರೆ. 2009ರ ನಂತರ ನಡೆದ ಎರಡೂ ಚುನಾವಾಣೆಗಳಲ್ಲಿ ಆರೋಪಿಗಳು ಆಯ್ಕೆಯಾಗುವ ಪ್ರಮಾಣ ಏರಿಕೆಯಾಗುತ್ತಲೇ ಇದೆ.
ಗಂಭೀರ ಅಪರಾಧ ಪ್ರಕರಣಗಳ ಸ್ವರೂಪ
11 ಸಂಸದರ ವಿರುದ್ಧ ಕೊಲೆ ಪ್ರಕರಣ ದಖಲಾಗಿದೆ
30 ಸಂಸದರ ವಿರುದ್ಧ ಕೊಲೆ ಯತ್ನ ಪ್ರಕರಣ ದಾಖಲಾಗಿದೆ
19 ಸಂಸದರು ಮಹಿಳೆಯರ ಮೇಲೆ ದೌರ್ಜನ್ಯ (ಹಲ್ಲೆ, ಗೌರವಕ್ಕೆ ಕುಂದು, ಲೈಂಗಿಕ ದೌರ್ಜನ್ಯ, ಅತ್ಯಾಚಾರ) ಎಸಗಿದ ಆರೋಪ ಹೊತ್ತಿದ್ದಾರೆ
29 ಸಂಸದರು ದ್ವೇಷ ಭಾಷಣ ಮಾಡಿದ ಆರೋಪ ಹೊತ್ತಿದ್ದಾರೆ
6 ಸಂಸದರು ಅಪಹರಣ ಪ್ರಕರಣಗಳಲ್ಲಿ ಆರೋಪಿಗಳಾಗಿದ್ದಾರೆ
10 ಸಂಸದರು ವಿವಿಧ ಪ್ರಕರಣಗಳಲ್ಲಿ ತಪ್ಪಿತಸ್ಥರೆಂದು ಸಾಬೀತಾಗಿದೆ
ಅನರ್ಹತೆ ಅವಕಾಶ
ಕೆಲವು ಅಪರಾಧಗಳನ್ನೆಸಗಿ ಶಿಕ್ಷಗೆ ಗುರಿಯಾಗಿರುವವರನ್ನು ಅನರ್ಹಗೊಳಿಸಲು ‘ಪ್ರಜಾಪ್ರಾತಿನಿಧ್ಯ ಕಾಯ್ದೆ 1951’ರಲ್ಲಿ ಅವಕಾಶ ಕಲ್ಪಿಸಲಾಗಿದೆ.
lಧರ್ಮ, ಜನಾಂಗ, ಜನ್ಮ ಸ್ಥಳ, ವಾಸಸ್ಥಳ, ಭಾಷೆ ಮುಂತಾದ ವಿಚಾರಗಳ ಆಧಾರದಲ್ಲಿ ಬೇರೆಬೇರೆ ಗುಂಪುಗಳಲ್ಲಿ ದ್ವೇಷ ಬಿತ್ತುವುದು ಅಥವಾ ಪೂರ್ವಗ್ರಹಪೀಡಿತ ದೃಷ್ಟಿಯಿಂದ, ಸಾಮರಸ್ಯಕ್ಕೆ ಹಾನಿ ಉಂಟುಮಾಡುವುದು (ಸೆಕ್ಷನ್ 153ಎ), ಲಂಚ ಪ್ರಕರಣ (171 ಇ)
lಚುನಾವಣೆಯಲ್ಲಿ ಅನಗತ್ಯವಾಗಿ ಪ್ರಭಾವ (171ಎಫ್)
lಅತ್ಯಾಚಾರ ಪ್ರಕರಣ, ಮಹಿಳೆಯ ಮೇಲೆ ಗಂಡ ಅಥವಾ ಗಂಡನ ಸಂಬಂಧಿಕರಿಂದ ಕ್ರೌರ್ಯ, ಧಾರ್ಮಿಕ ಸ್ಥಳದಲ್ಲಿ ಅಥವಾ ಧಾರ್ಮಿಕ ಸಮಾರಂಭಗಳಲ್ಲಿ ವಿವಿಧ ಗುಂಪುಗಳು ಅಥವಾ ವರ್ಗಗಳ ಮಧ್ಯೆ ವೈರತ್ವ ಅಥವಾ ಅಪನಂಬಿಕೆ ಮೂಡಿಸುವಂಥ ಹೇಳಿಕೆ ನೀಡುವುದು
lಅಸ್ಪೃಶ್ಯತೆ ಆಚರಿಸಲು ಪ್ರೇರೇಪಿಸುವುದು, ಆಚರಿಸುವುದು ಮತ್ತು ಅದರಿಂದ ಉಂಟಾಗುವ ಯಾವುದೇ ಹಾನಿಗೆ (ನಾಗರಿಕ ಹಕ್ಕುಗಳ ರಕ್ಷಣೆ ಕಾಯ್ದೆ 1955ರ ಅಡಿ)
lನಿಷೇಧಿತ ವಸ್ತುಗಳ ಆಮದು, ರಫ್ತು (ಸುಂಕ ಕಾಯ್ದೆ)
lಕಾನೂನುಬಾಹಿರ ಸಂಸ್ಥೆ ಎಂದು ಘೋಷಿಸಲಾದ ಸಂಘಟನೆಯ ಸದಸ್ಯನಾಗುವುದು. ಕಾನೂನುಬಾಹಿರ ಎಂದು ಘೋಷಣೆಯಾದ ಸಂಸ್ಥೆಯ ನಿಧಿಯ ನಿರ್ವಹಣೆ ಅಥವಾ ಅಧಿಸೂಚಿತ ಸ್ಥಳಕ್ಕೆ ಸಂಬಂಧಿಸಿದಂತೆ ಮಾಡಿರುವ ಉಲ್ಲಂಘನೆಗೆ ಸಂಬಂಧಿಸಿದ ಅಪರಾಧ (ಕಾನೂನುಬಾಹಿರ ಅಪರಾಧ (ತಡೆ) ಕಾಯ್ದೆ–1967ರ ಅಡಿ)
lವಿದೇಶ ವಿನಿಮಯ ನಿಯಂತ್ರಣ ಕಾಯ್ದೆ, ಮಾದಕವಸ್ತು ತಡೆ ಕುರಿತ ಕಾಯ್ದೆಯ ಉಲ್ಲಂಘನೆ ಅಪರಾಧ
lಭಯೋತ್ಪಾದನೆ, ವಿಚ್ಛಿದ್ರಕಾರಕ ಚಟುವಟಿಕೆ(ಭಯೋತ್ಪಾದನೆ, ವಿಚ್ಛಿದ್ರಕಾರಿ ಚಟುವಟಿಕೆ ತಡೆ ಕಾಯ್ದೆ 1987)
lಭಾರತದ ರಾಷ್ಟ್ರಧ್ವಜವನ್ನು ಅಥವಾ ಭಾರತದ ಸಂವಿಧಾನವನ್ನು ಅಪಮಾನಿಸುವುದು ಅಥವಾ ರಾಷ್ಟ್ರಗೀತೆ ಹಾಡಲು ಅಡ್ಡಿಪಡಿಸುವುದು (ರಾಷ್ಟ್ರೀಯ ಗೌರವದ ಅಪಮಾನ (ತಡೆ) ಕಾಯ್ದೆ–1971)
lಇಂಥ ಆರೋಪಗಳು ಸಾಬೀತಾಗಿ, ಶಿಕ್ಷಗೆ ಗುರಿಯಾದ ದಿನದಿಂದ 6 ವರ್ಷಗಳ ಅವಧಿಗೆ ಅಥವಾ ಜೈಲು ಶಿಕ್ಷಗೆ ಒಳಗಾಗಿ ಬಿಡುಗಡೆಯಾದ ದಿನದಿಂದ ಆರು ವರ್ಷಗಳ ಅವಧಿಗೆ ಅನರ್ಹಗೊಳಿಸಲು ಅವಕಾಶವಿದೆ.
ಇದಲ್ಲದೆ, ಆಹಾರ ಅಥವಾ ಔಷಧ ಕಲಬೆರಕೆ, ವರದಕ್ಷಿಣೆ ನಿಷೇಧ ಕಾಯ್ದೆಯಡಿ ಶಿಕ್ಷಗೆ ಗುರಿಯಾದವರನ್ನೂ ಅನರ್ಹಗೊಳಿಸಬಹುದಾಗಿದೆ.
lಯಾವುದೇ ಅಪರಾಧ ಎಸಗಿ ಎರಡು ವರ್ಷಗಳಿಗೆ ಕಡಿಮೆ ಇಲ್ಲದಂತೆ ಜೈಲು ಶಿಕ್ಷೆ ಅನುಭವಿಸಿದ ವ್ಯಕ್ತಿಯನ್ನು ಅಪರಾಧ ಸಾಬೀತಾದ ದಿನದಿಂದಲೇ ಅನರ್ಹಗೊಳಿಸಬೇಕು. ಮತ್ತು ಬಿಡುಗಡೆಯಾದ ದಿನದಿಂದ ಆರಂಭಿಸಿ ಮುಂದಿನ ಆರು ವರ್ಷಗಳವರೆಗೂ ಅವರನ್ನು ಅನರ್ಹಗೊಳಿಸಬೇಕು
lಶಿಕ್ಷೆಗೆ ಗುರಿಯಾಗಿರುವ ವ್ಯಕ್ತಿಯು ಸಂಸದ ಅಥವಾ ಶಾಸಕನಾಗಿದ್ದರೆ, ಮೇಲ್ಮನವಿ ಸಲ್ಲಿಸಲು ಮೂರು ತಿಂಗಳ ಅವಕಾಶ ನೀಡಬೇಕು. ಆ ಅವಧಿಯೊಳಗೆ ಮೇಲ್ಮನವಿ ಸಲ್ಲಿಸಿದರೆ ಅಥವಾ ತೀರ್ಪಿನ ಮರು ಪರಿಶೀಲನೆಗೆ ಅರ್ಜಿ ಸಲ್ಲಿಸಿದರೆ ಆ ಅರ್ಜಿಯು ಇತ್ಯರ್ಥವಾಗುವವರೆಗೆ ಅವರನ್ನು ಅನರ್ಹಗೊಳಿಸಬಾರದು
ಹೆಚ್ಚು ಪ್ರಕರಣ ದಾಖಲಾಗಿರುವ ಸಚಿವರು
ಪ್ರತಾಪ್ ಚಂದ್ರ ಸಾರಂಗಿ
7 ಪ್ರಕರಣಗಳು ದಾಖಲಾಗಿವೆ
7 ಗಂಭೀರ ಅಪರಾಧಗಳಿಗೆ ಸಂಬಂಧಿಸಿದ ಸೆಕ್ಷನ್‌ಗಳ ಸಂಖ್ಯೆ
15 ಇತರೆ ಅಪರಾಧಗಳಿಗೆ ಸಂಬಂಧಿಸಿದ ಸೆಕ್ಷನ್‌ಗಳ ಸಂಖ್ಯೆ
ಗಿರಿರಾಜ್ ಸಿಂಗ್
6 ಪ್ರಕರಣಗಳು ದಾಖಲಾಗಿವೆ
9 ಗಂಭೀರ ಅಪರಾಧಗಳಿಗೆ ಸಂಬಂಧಿಸಿದ ಸೆಕ್ಷನ್‌ಗಳ ಸಂಖ್ಯೆ
7 ಇತರೆ ಅಪರಾಧಗಳಿಗೆ ಸಂಬಂಧಿಸಿದ ಸೆಕ್ಷನ್‌ಗಳ ಸಂಖ್ಯೆ
ಗೃಹ ಸಚಿವ ಶಾ ವಿರುದ್ಧ ಗಂಭೀರ ಪ್ರಕರಣಗಳು
4: ಪ್ರಕರಣಗಳು ದಾಖಲಾಗಿವೆ
4:ಗಂಭೀರ ಅಪರಾಧಗಳಿಗೆ ಸಂಬಂಧಿಸಿದ ಸೆಕ್ಷನ್‌ಗಳ ಸಂಖ್ಯೆ
7: ಇತರೆ ಅಪರಾಧಗಳಿಗೆ ಸಂಬಂಧಿಸಿದ ಸೆಕ್ಷನ್‌ಗಳ ಸಂಖ್ಯೆ
* ಕೊಲೆ ಬೆದರಿಕೆ, ಹಲ್ಲೆ ಬೆದರಿಕೆ, ಉದ್ದೇಶಪೂರ್ವಕವಾಗಿ ಶಾಂತಿ ಕದಡಿದಕ್ಕೆ ಸಂಬಂಧಿಸಿದಂತೆ ವಿವಿಧ ಸೆಕ್ಷನ್‌ಗಳ ಅಡಿ ಪಶ್ಚಿಮ ಬಂಗಾಳದ ಪುರ್ಬಾದಲ್ಲಿ ಪ್ರಕರಣ ದಖಲಾಗಿದೆ
* ಸ್ಫೋಟಕ ಬಳಸಿದ ಆರೋಪದ ಅಡಿ, ಕೋಲ್ಕತ್ತಾದಲ್ಲಿ ಪ್ರಕರಣ ದಾಖಲಾಗಿದೆ
* ರಾಷ್ಟ್ರದ ಏಕತೆಗೆ ಧಕ್ಕೆ ತಂದ ಆರೋಪದಲ್ಲಿ ಬಿಹಾರದ ಮುಜಪ್ಫರಪುರದಲ್ಲಿ ಪ್ರಕರಣ ದಾಖಲಾಗಿದೆ
* ಸರ್ಕಾರಿ ನೌಕರನ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದಲ್ಲಿ, ಬಿಹಾರದ ಬೆಗುಸರಾಯೈನಲ್ಲಿ ಪ್ರಕರಣ ದಾಖಲಾಗಿದೆ
* ಈ ಎಲ್ಲಾ ಪ್ರಕರಣಗಳು ವಿಚಾರಣೆ ಹಂತದಲ್ಲಿವೆ. ಯಾವೊಂದು ಪ್ರಕರಣದಲ್ಲೂ ಆರೋಪಪಟ್ಟಿ ಸಲ್ಲಿಕೆಯಾಗಿಲ್ಲ
ಆಧಾರ: ಎಡಿಆರ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.