ADVERTISEMENT

'ನನ್ನನ್ನು ಮೃಗಾಲಯದೊಳಗಿನ ಕೋತಿಯಂತೆ ನೋಡುತ್ತಿದ್ದಾರೆ' ಮಿಷಲ್ ಆರೋಪ

ಎಲ್ಲಿಗೆ ಬಂತು ಕೋಟ್ಯಧಿಪತಿ ಸ್ಥಿತಿ

​ಪ್ರಜಾವಾಣಿ ವಾರ್ತೆ
Published 21 ಮಾರ್ಚ್ 2019, 10:16 IST
Last Updated 21 ಮಾರ್ಚ್ 2019, 10:16 IST
   

ತಿಹಾರ್‌: "ನನ್ನನ್ನು ಇಲ್ಲಿ ಮೃಗಾಲಯದ ಕೋತಿ ನೋಡಿಕೊಳ್ಳುವ ಹಾಗೆನೋಡಿಕೊಳ್ಳಲಾಗುತ್ತಿದೆ, ನನಗೆ ಯೂರೋಪಿಯನ್ ಸ್ಟೈಲ್ ನಲ್ಲಿ ಉಪಾಹಾರ ಬೇಕು. ಜೈಲಿನಲ್ಲಿ ಆಟವಾಡಬೇಕು" ಎಂದು ಅಗಸ್ತಾ ವೆಸ್ಟ್ ಲ್ಯಾಂಡ್ ಹಗರಣದ ಆರೋಪಿ ಕ್ರಿಶ್ಟಿಯನ್ ಮಿಷೆಲ್ ತಿಹಾರ್ ಜೈಲು ಅಧಿಕಾರಿಗಳ ವಿರುದ್ಧ ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದ್ದಾನೆ.

ನನಗೆ ಬೆಳಗಿನ ಉಪಾಹಾರಕ್ಕೆ ಮಾಂಸಾಹಾರವೇ ಬೇಕು. ಸಸ್ಯಾಹಾರ ಬೇಡ, ನಾನು ನೀರು ಕೇಳಿದರೆ, ನೀರು ತುಂಬಿದ ಲೋಟವನ್ನ ಸರಳುಗಳ ಕಿಂಡಿಯಿಂದ ತಳ್ಳುತ್ತಾರೆ ಎಂದು ತನ್ನ ಅಳಲುತೋಡಿಕೊಂಡಿದ್ದಾನೆ. ಈತ ಕೋಟ್ಯಾಧಿಪತಿ, ಈತ ವಿದೇಶದಲ್ಲಿಹೈಫೈ ಜೀವನ ನಡೆಸುತ್ತಿದ್ದವನು. ಆದರೆ ಈಗ ತಿಹಾರ್ ಜೈಲಿನಲ್ಲಿ ಸಾಮಾನ್ಯ ಖೈದಿಯಂತೆ ಸೊಳ್ಳೆಗಳಿಂದ ಕಚ್ಚಿಸಿಕೊಳ್ಳಬೇಕಾದ ಅನಿವಾರ್ಯ ಸ್ಥಿತಿ ಎದುರಾಗಿದೆ. ಇದನ್ನ ನೋಡುತ್ತಿರುವ ತಿಹಾರ್ ಜೈಲಿನ ಇತರೆ ಖೈದಿಗಳು 'ಎಲ್ಲಿಗೆ ಬಂತು ಕೋಟ್ಯಾಧಿಪತಿಯ ಸ್ಥಿತಿ' ಎಂದು ಮರುಕಪಡುತ್ತಿದ್ದಾರೆ.

ಈತ 12 ವಿವಿಐಪಿ ಅಗಸ್ಟಾ ವೆಸ್ಟ್ ಲ್ಯಾಂಡ್ ಹೆಲಿಕಾಪ್ಟರ್ಅಧಿಕ ಬೆಲೆಗೆ ಪೂರೈಸಿರುವ ಹಗರಣದಲ್ಲಿ ಮಧ್ಯವರ್ತಿ ಆರೋಪ ಎದುರಿಸುತ್ತಿದ್ದಾನೆ. ಕ್ರಿಶ್ಟಿಯನ್ಮಿಷೆಲ್(58)ನನ್ನು ಕಳೆದ ಜನವರಿಯಲ್ಲಿ ಭಾರತದ ಪೊಲೀಸರು ಬಂಧಿಸಿ ಕರೆತಂದರು. ನಂತರ ನ್ಯಾಯಾಂಗ ಬಂಧನಕ್ಕೆ ಒಳಪಡಿಸಿ ಈತನನ್ನ ಸದ್ಯ ತಿಹಾರ್ ಜೈಲಿನಲ್ಲಿ ಇರಿಸಲಾಗಿದೆ. ಅಲ್ಲದೆ, ಈತನಿಗೆ ಪ್ರಾಣಬೆದರಿಕೆ ಇರುವ ಕಾರಣ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.

ADVERTISEMENT

ತಿಹಾರ್ ಜೈಲಿನಲ್ಲಿ ಬೆಳಗಿನ ಉಪಾಹಾರ ಸಾಮಾನ್ಯವಾಗಿ ಕಾಫಿ, ಬ್ರೆಡ್ಡು, ಬಿಸ್ಕತ್ತುಗಳು ಹಾಗೂ ಹಲ್ವ ಕೊಡಲಾಗುತ್ತದೆ. ಆದರೆ, ಮಿಷೆಲ್ ತನಗೆ ಯುರೋಪಿಯನ್ ಉಪಹಾರ ಬೇಕು ಎಂದು ಬೇಡಿಕೆ ಇಟ್ಟಿದ್ದಾನೆ. ಈ ಜೈಲಿನಲ್ಲಿ 80 ವಿದೇಶಿ ಸೆರೆವಾಸಿಗಳಿದ್ದಾರೆ. ಯಾರಿಗೂ ಇಲ್ಲಿ ಬೇರೆಬೇರೆ ಮಾದರಿ ತಿಂಡಿ ತೀರ್ಥಗಳನ್ನ ಒದಗಿಸುತ್ತಿಲ್ಲ. ಎಲ್ಲರಿಗೂ ಒಂದೇ ಮಾದರಿಯ ಉಪಾಹಾರಗಳನ್ನು ಒದಗಿಸಲಾಗುತ್ತಿದೆ. ಯುರೋಪಿಯನ್ನರ ಬೆಳಗಿನ ಉಪಾಹಾರವೇ ಪ್ರಾಣಿ ಚರ್ಮಕ್ಕೆ ಮಾಂಸತುಂಬಿದ ಚೀಲವನ್ನ ಬೇಯಿಸಿ ಕೊಡಲಾಗುತ್ತದೆ.ಇಲ್ಲವೇ ಉಪ್ಪು ಹಾಕಿ ಒಣಗಿಸಿದ ಹಂದಿಮಾಂಸವನ್ನು ಬಳಸುವುದು ರೂಢಿ. ಆದರೆ, ತಿಹಾರ್ ಜೈಲಿನಲ್ಲಿ ಇದನ್ನ ಕೊಡಲು ಸಾಧ್ಯವಿಲ್ಲ. ಇಲ್ಲಿ ಬೆಳಗಿನ ಉಪಾಹಾರವೇ ಸಸ್ಯಾಹಾರ.

ಕಳೆದ ವಾರ ನ್ಯಾಯಾಧೀಶರ ಮುಂದೆ ಅರ್ಜಿಯೊಂದನ್ನು ಸಲ್ಲಿಸಿರುವ ಮಿಷೆಲ್, ನನ್ನನ್ನು ಇಲ್ಲಿ ಮೃಗಾಲಯದೊಳಗೆ ಕೋತಿ ನೋಡಿಕೊಳ್ಳುವ ಹಾಗೆ ನೋಡಿಕೊಳ್ಳಲಾಗುತ್ತಿದೆ ಎಂದು ಆರೋಪಿಸಿದ್ದಾನೆ. ಅಲ್ಲದೆ, ಜೈಲಿನಲ್ಲಿ ನನಗೆ ಕುಡಿಯಲು ನೀರು ಕೇಳಿದರೆ, ಜೈಲಿನ ಕಾವಲುಗಾರ ನೀರು ತುಂಬಿದ ಲೋಟವನ್ನು ಸರಳುಗಳ ಮಧ್ಯದ ಕಿಂಡಿಯಿಂದ ತಳ್ಳಿದ. ಆದ್ದರಿಂದ ನನಗೆ ಇತರರಿಗೆ ತೋರುವ ಮೃಧು ಧೋರಣೆಯಂತೆಯೇ ನನಗೂ ಮೃದುಧೋರಣೆ ತೋರುವಂತೆ ಜೈಲು ಅಧಿಕಾರಿಗಳಿಗೆ ಆದೇಶಿಸಬೇಕು ಎಂದು ಅರ್ಜಿಯಲ್ಲಿ ತಿಳಿಸಿದ್ದಾನೆ.

ಈತ ಜೈಲಿಗೆ ಬಂದಾಗಿನಿಂದಲೂ ಒಂದಿಲ್ಲೊಂದು ಹೊಸ ಬೇಡಿಕೆ ಸಲ್ಲಿಸುತ್ತಲ್ಲೇ ಇದ್ದಾನೆ. ಆದರೆ, ಅದನ್ನ ಜೈಲು ಅಧಿಕಾರಿಗಳು ಪರಿಶೀಲಿಸಿ ಒದಗಿಸುತ್ತಿದ್ದರೂ ಮತ್ತೆ ಮತ್ತೊಂದು ಮನವಿ ಸಲ್ಲಿಸುತ್ತಾನೆ. ಆರಂಭದಲ್ಲಿ ಸಲ್ಲಿಸಿದ ಮನವಿಯಂತೆ ಜೈಲು ಅಧಿಕಾರಿಗಳ ಸಭೆ ನಡೆಸಿ ಪ್ರತ್ಯೇಕ ಕೊಠಡಿಗೆ ವರ್ಗಾಯಿಸಲಾಯಿತು. ಆದರೂ ಅಲ್ಲಿಯೂ ಈತ ತೃಪ್ತಿಯಾಗಿಲ್ಲ. ಮತ್ತೊಂದು ಮನವಿ ಸಲ್ಲಿಸಿದ. ಆಗಮೂರು ಕೊಠಡಿಗಳಿರುವ ವಾರ್ಡ್‌ಗೆ ಸ್ಥಳಾಂತರಿಸಲಾಯಿತು. ಆದರೂ ಅಲ್ಲಿಯೂ ಈತನಿಗೆ ತೃಪ್ತಿಯಾಗಿಲ್ಲ ಎಂದು ಹೆಸರು ಹೇಳಲಿಚ್ಚಿಸದ ಜೈಲು ಅಧಿಕಾರಿಯೊಬ್ಬರು ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.

ತಿಹಾರ್ ಜೈಲಿನಲ್ಲಿ ಎರಡು ವಿಭಾಗಗಳಿವೆ. ಒಂದು ವಿಭಾಗದ ಕೊಠಡಿಗಳಲ್ಲಿ ಕೊಲೆ ಮಾಡಿದವರು, ಅತ್ಯಾಚಾರಿಗಳು, ಸರಣಿಹಂತಕರು, ವಿದೇಶಿ ಉಗ್ರರು ಮತ್ತು ರೌಡಿಗಳನ್ನು ಇರಿಸಲಾಗಿದೆ. ಮತ್ತೊಂದು ವಿಭಾಗದ ಕೊಠಡಿಗಳನ್ನ ಪ್ರಮುಖ ಆರ್ಥಿಕ ಅಪರಾಧಗಳು, ವಂಚಕರಾಗಿ ಪರಿವರ್ತನೆಯಾದ ಅತಿಗಣ್ಯವ್ಯಕ್ತಿಗಳನ್ನು ಇಡಲಾಗಿದೆ.

ಆರ್ಥಿಕ ಅಪರಾಧದ ಆರೋಪದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ಅಥವಾ ಶಿಕ್ಷೆಗೆ ಒಳಪಟ್ಟ ವೈಟ್ ಕಾಲರ್ ಕ್ರಿಮಿನಲ್‌ಗಳು ಇರುವ ಕೊಠಡಿಗಳಲ್ಲಿರುವುದು ಮಿಷೆಲ್‌ಗೆ ಸುರಕ್ಷಿತ. ಏಕೆಂದರೆ, ಮಿಷೆಲ್‌ನಂತೆಯೇ ಮೃದು ಸ್ವಭಾವದವರು ಹೆಚ್ಚಿನವರುಆರ್ಥಿಕ ಅಪರಾಧಗಳಲ್ಲಿ ಭಾಗಿಯಾಗಿರುತ್ತಾರೆ. ಕೊಲೆಗಡುಕರು, ಅತ್ಯಾಚಾರಿಗಳ ಜೊತೆ ಮಿಷೆಲ್‌ನನ್ನು ಇರಿಸಲು ಸಾಧ್ಯವಿಲ್ಲ. ನ್ಯಾಯಾಲಯ ಹೇಳಿದಷ್ಟನ್ನು ನಾವು ಮಾಡುತ್ತೇವೆ. ಆದರೆ, ಇದಕ್ಕೂ ಮಿಷೆಲ್ ಅಡ್ಡಿಪಡಿಸುತ್ತಾನೆ. ಇವರ ಜೊತೆಯೂ ಇರಲು ಬಯಸುತ್ತಿಲ್ಲ. ನಾವು ಮತ್ತೊಂದು ಕೊಠಡಿಗೆ ಬದಲಿಸಿದೆವು ಆದರೂ ಮತ್ತೊಂದು ದೂರನ್ನ ಆತ ಸಲ್ಲಿಸಿದ್ದಾನೆ. ಇದನ್ನ ಬಿಟ್ಟು ಬೇರೆ ಪ್ರತ್ಯೇಕ ಕೊಠಡಿಯ ವ್ಯವಸ್ಥೆ ಮಾಡಲು ನಮ್ಮಲ್ಲಿ ಅವಕಾಶವಿಲ್ಲಎಂದು ಅಧಿಕಾರಿಗಳು ಹೇಳುತ್ತಾರೆ.

ಕಳೆದ ತಿಂಗಳು ಮಿಷೆಲ್‌ನನ್ನ ಜೈಲಿನ ಸುರಕ್ಷಿತ ಕೊಠಡಿಯಾದ'ವಾರ್ಡ್ ಎಕ್ಸ್‌'ಗೆ ಸ್ಥಳಾಂತರಿಸಲಾಯಿತು. ಅಲ್ಲಿ ಬೇರೆ ಸೆರೆಮನೆವಾಸಿಗಳು ಮಾತನಾಡುವಂತಿಲ್ಲ. ಈತನಿಗೆ ಪ್ರಾಣ ಬೆದರಿಕೆ ಇರುವುದರ ಮಾಹಿತಿ ಬಂದ ಕಾರಣ ಈ ವ್ಯವಸ್ಥೆ ಮಾಡಲಾಯಿತು. ಇಲ್ಲಿ ಕೇವಲ ಮೂರು ವ್ಯಕ್ತಿಗಳು ಇದ್ದಾರೆ. ಅವರಲ್ಲಿ ಭೂಗತ ಪಾತಕಿ ಚೋಟಾ ರಾಜನ್, ರಾಜಕಾರಣಿ ಮಹಮದ್ ಶಹಾಬುದ್ದೀನ್ ಮತ್ತು ದೆಹಲಿಯ ಕುಖ್ಯಾತ ರೌಡಿ ನೀರಜ್ ಬವನ.

ಇದಾದ ನಂತರ ಕೇವಲ ಒಂದು ವಾರದಲ್ಲಿ ಈತ ಮತ್ತೊಂದು ಅರ್ಜಿ ಹಾಕಿ ನನ್ನನ್ನು ಮೂಲೆಗುಂಪುಮಾಡಲಾಗಿದೆ ಎಂದು ಆರೋಪಿಸಿದ್ದಾನೆ. ಈ ಕೊಠಡಿ ಬಹುತೇಕ ಸುರಕ್ಷಿತವಾಗಿದೆ. ಪುನಃ ಆತನನ್ನ ಮತ್ತೊಂದು ಕೊಠಡಿಗೆ ಸ್ಥಳಾಂತರಿಸಲಾಯಿತು. ಕೇವಲ 10 ದಿನಗಳಲ್ಲಿ ಈತ ಮತ್ತೊಂದು ಅರ್ಜಿ ಸಲ್ಲಿಸಿದ. ಅಲ್ಲಿ ಆಶ್ಚರ್ಯಕರ ಸಂಗತಿ ಎಂದರೆ, ಉಗ್ರಗಾಮಿ ಚಟುವಟಿಕೆಗಳಿರುವ ಕಾಶ್ಮೀರಿ ಪ್ರತ್ಯೇಕತಾವಾದಿಗಳ ಜೊತೆ ಇರಿಸಲಾಗಿದೆ ಎಂದು ಆರೋಪಿಸಿದ್ದಾನೆ.

ಈತನ ಆರೋಪಗಳನ್ನ ತಳ್ಳಿಹಾಕಿರುವ ಸಿಬಿಐ ಈತನ ಆರೋಪಗಳಿಂದಾಗಿ ಭಾರತದ ಘನತೆಗೆ ಕುಂದುಂಟು ಮಾಡುತ್ತದೆ. ಇಲ್ಲಿ ಯಾರಿಗೂ ಮೃದು ಧೋರಣೆ ತೋರುತ್ತಿಲ್ಲ. ಈ ಜೈಲಿನಲ್ಲಿ ಇಲ್ಲಿಯವರೆಗೆ ಅನೇಕ ಶ್ರೀಮಂತ ವ್ಯಕ್ತಿಗಳು, ಮಹಿಳೆಯರು ರಿಯಲ್ ಎಸ್ಟೇಟ್ ಉದ್ಯಮಿಗಳು, ಶ್ರೀಮಂತ ಕ್ರಿಮಿನಲ್ ಗಳು ಹಲವು ವರ್ಷಗಳು, ತಿಂಗಳುಗಳನ್ನು ಕಳೆದಿದ್ದಾರೆ.

ಮಿಷೆಲ್ ಜೈಲಿನಲ್ಲಿ ಕ್ರೀಡಾ ಚಟುವಟಿಕೆಗಳಲ್ಲಿ ಭಾಗವಹಿಸಲು ವ್ಯವಸ್ಥೆ ಕಲ್ಪಿಸಬೇಕು ಎಂದು ಮತ್ತೊಂದು ಬೇಡಿಕೆ ಸಲ್ಲಿಸಿದ್ದಾನೆ.ಆದರೆ, ಇದು ಬಹಳ ಕಷ್ಟಸಾಧ್ಯ. ಈತನ ಜೊತೆ ಸಹ ಆಟಗಾರನನ್ನಾಗಿ ಖೈದಿಯನ್ನುಕಳುಹಿಸಲು ಸಾಧ್ಯವೇ. ಇದು ಅಸಾಧ್ಯ. ಇತರೆ ಖೈದಿಗಳೊಂದಿಗೆ ಈತನನ್ನ ಸೇರಿಸುವುದು ಕಷ್ಟ. ಯಾರಿಂದಲೂ ಅಪಾಯ ಬರದಂತೆ ಈತನನ್ನ ನೋಡಿಕೊಳ್ಳಬೇಕಾಗಿದೆ.

ಒತ್ತಡ ಹೇರುವ ತಂತ್ರ

ಸೆರೆವಾಸಿಗಳು ಹಲವು ತಂತ್ರಗಳನ್ನ ಅನುಸರಿಸುತ್ತಾರೆ. ನ್ಯಾಯಾಲಯಕ್ಕೆ ಆಗಿಂದಾಗ್ಗೆ ಅರ್ಜಿಗಳನ್ನ ಸಲ್ಲಿಸುವುದೂ ಕೂಡ ಒಂದು ಬಗೆಯ ಒತ್ತಡ ಹೇರುವ ತಂತ್ರ. ವಿದೇಶಿಯರಿಗಾಗಿಯೇ ಜೈಲಿನಲ್ಲಿ ಒಂದು ಪ್ರತ್ಯೇಕ ಆಹಾರ ಪಟ್ಟಿ ಇದೆ. ಅದರಲ್ಲಿ ಫಿಜ್ಜಾ ಮತ್ತು ಪಾಸ್ತಾ ಕೊಡಬೇಕೆಂಬ ನಿಯಮವಿತ್ತು ಎಂದು ತಿಹಾರ್ ಜೈಲಿನ ಕಾನೂನು ವಿಭಾಗದ ನಿವೃತ್ತ ಅಧಿಕಾರಿ ಸುನಿಲ್ ಗುಪ್ತಾ ಹೇಳಿದ್ದಾರೆ.ಅಲ್ಲದೆ, ಇದು ಭಾರತದ ಹೊರಗಿನ ಜೈಲುಗಳಲ್ಲಿ ಎಲ್ಲಾ ಖೈದಿಗಳಿಗೂ ಒಂದೇ ಬಗೆಯ ಅಹಾರವನ್ನು ಕೊಡಲಾಗುತ್ತದೆ. ಆದ್ದರಿಂದ ತಿಹಾರ್ ಜೈಲಿನಲ್ಲಿ ಇದನ್ನ ಕೈಬಿಡಲಾಯಿತು. ವಿದೇಶದ ಕಾರಾಗೃಹಗಳಲ್ಲಿ ರೋಟಿ ಮತ್ತು ದಾಲ್ ಕೇಳಿದರೆ ಕೊಡುತ್ತಾರೆಯೇ. ಖಂಡಿತವಾಗಿಯೂ ಕೊಡುವುದಿಲ್ಲ. ಇದರ ವಿರುದ್ಧವಾಗಿ ಪ್ರಕರಣವೂ ದಾಖಲಾಗಿದ್ದು, ನಮ್ಮ ಪರವಾಗಿ ತೀರ್ಪುಬಂದಿದೆ. ನಿಜವಾಗಿ ಮಿಷೆಲ್‌ಗಂ ಜೀವಬೆದರಿಕೆ ಇದೆ. ಅದನ್ನ ಹೊರತುಪಡಿಸಿ ಮೃದುಧೋರಣೆ ಅನುಸರಿಸಲಾಗುತ್ತಿದೆ ಎಂಬುದು ಕೇವಲ ಆರೋಪ ಎಂದು ಕಾನೂನು ವಿಭಾಗದ ಅಧಿಕಾರಿ ಸುನಿಲ್ ದತ್ ಅಭಿಪ್ರಾಯಪಟ್ಟಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.