ಚಂದ್ರಾಪುರ: ಮಹಾರಾಷ್ಟ್ರದ ಚಂದ್ರಾಪುರ ಜಿಲ್ಲೆಯ ತಡೋಬಾ ಅಂಧಾರಿ ಹುಲಿ ಸಂರಕ್ಷಿತ ವಲಯದಲ್ಲಿ(TATR) ಪ್ರವಾಸಿಗರಿಗೆ ಆನ್‌ಲೈನ್ ಬುಕ್ಕಿಂಗ್ ಸೌಲಭ್ಯ ಒದಗಿಸುತ್ತಿದ್ದ ಸಹೋದರರಿಬ್ಬರು ಭಾರಿ ವಂಚನೆ ಎಸಗಿರುವ ಪ್ರಕರಣ ಬೆಳಕಿಗೆ ಬಂದಿದೆ.
ಬರೋಬ್ಬರಿ ₹12 ಕೋಟಿ ವಂಚನೆ ಮಾಡಿದ್ದಾರೆ ಎಂದು ಹುಲಿ ಮೀಸಲು ಪ್ರದೇಶದ ಆಡಳಿತ ಮಂಡಳಿ ತಿಳಿಸಿದೆ.
ಆರೋಪಿ ಸಹೋದರರನ್ನು ಅಭಿಷೇಕ್ ವಿನೋದ್‌ಕುಮಾರ್ ಠಾಕೂರ್ ಮತ್ತು ರೋಹಿತ್ ವಿನೋದ್‌ಕುಮಾರ್ ಠಾಕೂರ್ ಎಂದು ಗುರುತಿಸಲಾಗಿದ್ದು, ಇಬ್ಬರ ವಿರುದ್ಧವೂ ವಂಚನೆ ಪ್ರಕರಣ ದಾಖಲಿಸಿ, ಬಂಧಿಸಲಾಗಿದೆ.
ಕಳೆದ ಕೆಲವು ವರ್ಷಗಳಿಂದ ಹುಲಿ ಮೀಸಲು ಪ್ರದೇಶಕ್ಕೆ ಏಜೆಂಟ್‌ಗಳಾಗಿ ಸೇವೆ ಒದಗಿಸುತ್ತಿದ್ದರು. ಈ ಬಾರಿಯ ಆಡಿಟಿಂಗ್ ವೇಳೆ ₹12,15,50,831 ಹಣ ಪಾವತಿ ಮಾಡದೇ ಇರುವುದು ಬೆಳಕಿಗೆ ಬಂದಿದೆ ಎಂದು ಆಡಳಿತ ಮಂಡಳಿ ಮಾಹಿತಿ ನೀಡಿದೆ.
ಈ ಬಗ್ಗೆ ವಿಭಾಗೀಯ ಅರಣ್ಯ ಅಧಿಕಾರಿ ಸಚಿನ್ ಶಿಂಧೆ ಎನ್ನುವವರು ದೂರು ದಾಖಲಿಸಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ತಿಳಿಸಿದ್ದಾರೆ.
ಆಡಿಟಿಂಗ್ ವೇಳೆ ₹22,80,67,749 ಹಣವನ್ನು ಆಡಳಿತಕ್ಕೆ ಸಹೋದರರು ಪಾವತಿಸಬೇಕಿತ್ತು. ಆದರೆ ಅವರು ₹10,65,16,918 ಹಣವನ್ನು ಮಾತ್ರ ಪಾವತಿಸಿದ್ದರು. ಅಲ್ಲದೆ ಆಡಿಟಿಂಗ್ ವೇಳೆ ಅಧಿಕಾರಿಗಳ ಪ್ರಶ್ನೆಗೆ ಉತ್ತರಿಸದೆ, ಲೆಕ್ಕಾಚಾರ ನಡೆಸಲು ಸಹಕಾರವನ್ನೂ ನೀಡಲಿಲ್ಲ ಎಂದು ಹುಲಿ ಮೀಸಲು ಪ್ರದೇಶದ ಆಡಳಿಮಂಡಳಿ ದೂರಿದೆ.
ತಡೋಬಾ ಅಂಧಾರಿ ಹುಲಿ ಮೀಸಲು ಪ್ರದೇಶವು ಮಹಾರಾಷ್ಟ್ರದ ಅತಿ ದೊಡ್ಡ ಹುಲಿ ಮೀಸಲು ಪ್ರದೇಶಗಳಲ್ಲಿ ಒಂದಾಗಿದೆ. ಇದು ಚಂದ್ರಾಪುರ ಜಿಲ್ಲೆಯ ಪೂರ್ವ ದಿಕ್ಕಿನಲ್ಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.