ADVERTISEMENT

ಐಎಂಎ ಹಗರಣ | ಕೋಟ್ಯಂತರ ಹಣ ಪಡೆದು ಚುನಾವಣೆಗೆ ವೆಚ್ಚ: ಸಿಬಿಐ

ಐಎಂಎ ಹಗರಣ: ಬೇಗ್ ವಿರುದ್ಧ ಪೂರಕ ದೋಷಾರೋಪ

​ಪ್ರಜಾವಾಣಿ ವಾರ್ತೆ
Published 27 ಏಪ್ರಿಲ್ 2021, 21:17 IST
Last Updated 27 ಏಪ್ರಿಲ್ 2021, 21:17 IST
   

ನವದೆಹಲಿ: ಐಎಂಎ ವಂಚನೆ ಪ್ರಕರಣದ ತನಿಖೆ ನಡೆಸುತ್ತಿರುವ ಸಿಬಿಐ, ಕರ್ನಾಟಕದ ಮಾಜಿ ಸಚಿವ ರೋಷನ್ ಬೇಗ್ ವಿರುದ್ಧ ಮಂಗಳವಾರ ಪೂರಕ ದೋಷಾರೋಪ ಪಟ್ಟಿ ಸಲ್ಲಿಸಿದ್ದು, ಐಎಂಎ ನಿಧಿಯಿಂದ ಅಕ್ರಮವಾಗಿ ಪಡೆದ ಹಣವನ್ನು ವಿಧಾನಸಭೆ ಚುನಾವಣೆಗೆ ಬಳಸಿದ್ದಾಗಿ ದೂರಿದೆ.

ಐಎಂಎ ಗ್ರೂಪ್‌ನ ವ್ಯವಸ್ಥಾಪಕ ನಿರ್ದೇಶಕ ಮನ್ಸೂರ್ ಖಾನ್ ಹಾಗೂ ಅವರ ಸಂಸ್ಥೆ, ಬೇಗ್ ಒಡೆತನದ ದಾನೀಶ್ ಪಬ್ಲಿಕೇಶನ್ಸ್ ಸಂಸ್ಥೆಗಳ ಹೆಸರನ್ನೂ ಬೆಂಗಳೂರಿನ ವಿಶೇಷ ನ್ಯಾಯಾಲಯಕ್ಕೆ ಸಲ್ಲಿಸಿರುವ ದೋಷಾರೋಪ ಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ ಎಂದು ಸಿಬಿಐ ಅಧಿಕಾರಿಗಳು ತಿಳಿಸಿದ್ದಾರೆ.

ರೋಷನ್‌ ಬೇಗ್‌ ಅವರು ವಿಧಾನಸಭೆ ಚುನಾವಣೆಯ ವೆಚ್ಚಕ್ಕಾಗಿ ಐಎಂಎ ನಿಧಿಯಿಂದ ಹಲವು ಕೋಟಿ ರೂಪಾಯಿಗಳನ್ನು ಪಡೆದಿದ್ದಾರೆ. ಅವರು ತಮ್ಮ ಸಂಸ್ಥೆಯ ನೌಕರರ ವೇತನ ಸೇರಿದಂತೆ ದಿನನಿತ್ಯದ ಖರ್ಚಿಗೆ ಈ ಹಣವನ್ನು ಬಳಸಿದ್ದಾರೆ ಎಂದು ಆರೋಪಿಸಲಾಗಿದೆ.

ADVERTISEMENT

ಆರೋಪಿಯು ಜನಪ್ರಿಯತೆ ಹೆಚ್ಚಿಸಿಕೊಳ್ಳಲು ತನ್ನ ವಿಧಾನಸಭೆ ಕ್ಷೇತ್ರ ವ್ಯಾಪ್ತಿಯಲ್ಲಿ ವಿವಿಧ ಸಾಮಾಜಿಕ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಿಗೆ ಇದೇ ಹಣವನ್ನು ವ್ಯಯಿಸಿದ್ದಾಗಿ ಆರೋಪಿಸಲಾಗಿದೆ ಎಂದು ಸಿಬಿಐ ವಕ್ತಾರ ಆರ್.ಸಿ. ಜೋಶಿ ತಿಳಿಸಿದ್ದಾರೆ.

ತನ್ನ ಅಕ್ರಮ ಚಟುವಟಿಕೆಗಳನ್ನು ಸುಲಭವಾಗಿ ಮುಂದುವರೆಸುವ ಉದ್ದೇಶದಿಂದ ಸಿದ್ದರಾಮಯ್ಯ ನೇತೃತ್ವದ ಅಂದಿನ ಕಾಂಗ್ರೆಸ್ ಸರ್ಕಾರದಲ್ಲಿ ಸಚಿವರಾಗಿದ್ದ ಬೇಗ್‌ ಅವರಿಗೆ ಐಎಂಎ ಗ್ರೂಪ್‌ ಈ ಹಣವನ್ನು ನೀಡಿತ್ತು ಎಂದು ಸಿಬಿಐ ದೂರಿದೆ.

ಹೂಡಿಕೆಗೆ ಉತ್ತಮ ಲಾಭ ನೀಡುವುದಾಗಿ ಆಮಿಷ ಒಡ್ಡಿ ಅಂದಾಜು ಒಂದು ಲಕ್ಷಕ್ಕೂ ಅಧಿಕ ಹೂಡಿಕೆದಾರರಿಂದ ₹ 4,000 ಕೋಟಿಯಷ್ಟು ಹಣವನ್ನು ಐಎಂಎ ಗ್ರೂಪ್ ಸಂಗ್ರಹಿಸಿದೆ. ಹಗರಣಕ್ಕೆ ಸಂಬಂಧಿಸಿದಂತೆ ಪ್ರತ್ಯೇಕವಾದ 4 ಪ್ರಕರಣಗಳನ್ನು ದಾಖಲಿಸಿಕೊಂಡಿರುವ ಸಿಬಿಐ, ಈ ಹಿಂದೆಯೇ ಮನ್ಸೂರ್‌ ಖಾನ್, ಅವರ ಕಂಪನಿಯ ನಿರ್ದೇಶಕರು, ಕಂದಾಯ ಮತ್ತು ಪೊಲೀಸ್ ಅಧಿಕಾರಿಗಳು ಸೇರಿದಂತೆ 33 ಆರೋಪಿಗಳ ವಿರುದ್ಧ 3 ದೋಷಾರೋಪ ಪಟ್ಟಿ ಹಾಗೂ 3 ಪೂರಕ ದೋಷಾರೋಪ ಪಟ್ಟಿ ಸಲ್ಲಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.