ಚಂಡೀಗಢ: ಗಡಿಯಾಚೆಗಿನ ಕಳ್ಳಸಾಗಣೆ ದಂಧೆಯನ್ನು ಭೇದಿಸಿರುವ ಪಂಜಾಬ್ ಪೊಲೀಸರು, ವಿದೇಶಿ ಮೂಲದ ಮಾದಕವಸ್ತು ಕಳ್ಳಸಾಗಣೆದಾರನ ಇಬ್ಬರು ಸಹಚರರನ್ನು ಬಂಧಿಸಿದ್ದಾರೆ. ಬಂಧಿತರಿಂದ 105 ಕೆ.ಜಿ ಹೆರಾಯಿನ್ ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಯೊಬ್ಬರು ಭಾನುವಾರ ತಿಳಿಸಿದ್ದಾರೆ.
ನವಜೋತ್ ಸಿಂಗ್ ಮತ್ತು ಲವ್‌ಪ್ರೀತ್ ಕುಮಾರ್ ಬಂಧಿತರು. ಜಲಮಾರ್ಗ ಮೂಲಕ ಪಾಕಿಸ್ತಾನದಿಂದ ಡ್ರಗ್ಸ್ ಸಾಗಿಸಲಾಗುತ್ತಿತ್ತು. ಆರೋಪಿಗಳಿಂದ ರಬ್ಬರ್ ಟ್ಯೂಬ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪಂಜಾಬ್ ಪೊಲೀಸ್ ಮಹಾನಿರ್ದೇಶಕ ಗೌರವ್ ಯಾದವ್ ಹೇಳಿದ್ದಾರೆ.
'ಗುಪ್ತಚರ ಮಾಹಿತಿ ಮೇರೆಗೆ ಪಂಜಾಬ್ ಪೊಲೀಸರು ಗಡಿಯಾಚೆಗಿನ ಕಳ್ಳಸಾಗಣೆ ದಂಧೆಯನ್ನು ಭೇದಿಸಿದ್ದಾರೆ. ವಿದೇಶಿ ಮೂಲದ ಮಾದಕವಸ್ತು ಕಳ್ಳಸಾಗಣೆದಾರ ನವಪ್ರೀತ್ ಸಿಂಗ್ ಅಲಿಯಾಸ್ ನವ್ ಭುಲ್ಲರ್‌ನ ಇಬ್ಬರು ಸಹಚರರನ್ನು ಬಂಧಿಸಿದ್ದಾರೆ. ಬಂಧಿತರಿಂದ 105 ಕೆ.ಜಿ ಹೆರಾಯಿನ್, 31.93 ಕೆ.ಜಿ ಕೆಫೀನ್ ಅನ್‌ಹೈಡ್ರಸ್, 17 ಕೆ.ಜಿ ಡಿಎಂಆರ್, 5 ವಿದೇಶಿ ನಿರ್ಮಿತ ಹಾಗೂ 1 ದೇಶಿಯ ಪಿಸ್ತೂಲ್ ವಶಪಡಿಸಿಕೊಳ್ಳಲಾಗಿದೆ' ಎಂದು ಯಾದವ್ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
ಎಫ್‌ಐಆರ್ ದಾಖಲಾಗಿದ್ದು, ದಂಧೆಯಲ್ಲಿ ಭಾಗಿಯಾಗಿರುವವರ ಪತ್ತೆಗಾಗಿ ತನಿಖೆ ನಡೆಯುತ್ತಿದೆ ಎಂದೂ ಅವರು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.