ADVERTISEMENT

ಹುತಾತ್ಮ ಯೋಧನ ಸಹೋದರಿಯ ವಿವಾಹ ನಡೆಸಿಕೊಟ್ಟ ಸಿಆರ್‌ಪಿಎಫ್ ಸಿಬ್ಬಂದಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 15 ಡಿಸೆಂಬರ್ 2021, 12:44 IST
Last Updated 15 ಡಿಸೆಂಬರ್ 2021, 12:44 IST
ಸಿಆರ್‌ಪಿಎಫ್ ಟ್ವಿಟರ್ ಖಾತೆಯ ಚಿತ್ರ
ಸಿಆರ್‌ಪಿಎಫ್ ಟ್ವಿಟರ್ ಖಾತೆಯ ಚಿತ್ರ   

ಲಖನೌ: ಹುತಾತ್ಮ ಯೋಧನ ಹೋದರಿಯ ವಿವಾಹ ಕಾರ್ಯಕ್ರಮದಲ್ಲಿ ಸಿಆರ್‌ಪಿಎಫ್‌ ಸಿಬ್ಬಂದಿ ಪಾಲ್ಗೊಂಡು ಮದುವೆ ನಡೆಸಿಕೊಟ್ಟ ಅವಿಸ್ಮರಣೀಯ ಘಟನೆಗೆ ಉತ್ತರ ಪ್ರದೇಶ ಸಾಕ್ಷಿಯಾಗಿದೆ.

ಕಳೆದ ವರ್ಷ ಪುಲ್ವಾಮಾದಲ್ಲಿ ನಡೆದ ಉಗ್ರರ ದಾಳಿಯಲ್ಲಿ ಸಿಆರ್‌ಪಿಎಫ್ ಯೋಧ ಶೈಲೇಂದ್ರ ಸಿಂಗ್ ಹುತಾತ್ಮರಾಗಿದ್ದರು.

ಉತ್ತರ ಪ್ರದೇಶದ ಯೋಧನ ನಿವಾಸಕ್ಕೆ ಆಗಮಿಸಿದ ಸಿಆರ್‌ಪಿಎಫ್ ಸಿಬ್ಬಂದಿ, ಸಹೋದರರು ಮದುವೆಯಲ್ಲಿ ನೆರವೇರಿಸಬೇಕಾದ ಎಲ್ಲ ಕಾರ್ಯಗಳನ್ನು ನೋಡಿಕೊಂಡರು. ವಧುವನ್ನು ಶಾಸ್ತ್ರೋಕ್ತವಾಗಿ ಮಂಟಪಕ್ಕೆ ಕರೆತರುವುದರಿಂದ ಹಿಡಿದು ಎಲ್ಲ ಕೆಲಸಗಳನ್ನು ತಾವೇ ಮುಂದೆ ನಿಂತು ನಿರ್ವಹಿಸುವ ಮೂಲಕ ಅಣ್ಣನಿಲ್ಲ ಎಂಬ ಕೊರತೆಯನ್ನು ನೀಗಿಸುವ ಪ್ರಯತ್ನ ಮಾಡಿದರು.

ADVERTISEMENT

ಸಿಆರ್‌ಪಿಎಫ್ ತನ್ನ ಅಧಿಕೃತ ಟ್ವಿಟರ್ ಹ್ಯಾಂಡಲ್‌ನಲ್ಲಿ ಶೇರ್ ಮಾಡಿರುವ ಚಿತ್ರಗಳಲ್ಲಿ ಸಮವಸ್ತ್ರ ಧರಿಸಿರುವ ಸಿಆರ್‌ಪಿಎಫ್ ಯೋಧರು ವಧುವನ್ನು ಕರೆತರುತ್ತಿರುವ ದೃಶ್ಯ ಕಾಣಬಹುದು.

ಇದಕ್ಕೆ #GoneButNotForgotten ಎಂದು ಹ್ಯಾಶ್ ಟ್ಯಾಗ್ ನೀಡಲಾಗಿದ್ದು, ‘ಹುತಾತ್ಮ ಯೋಧ ಶೈಲೇಂದ್ರ ಪ್ರತಾಪ್ ಸಿಂಗ್ ಅವರ ಸಹೋದರಿಯ ವಿವಾಹ ಕಾರ್ಯಕ್ರಮದಲ್ಲಿ ಹಿರಿಯ ಸಹೋದರರಾಗಿ ಸಿಆರ್‌ಪಿಎಫ್ ಯೋಧರು ಪಾಲ್ಗೊಂಡರು’ಎಂದು ಶೀರ್ಷಿಕೆ ನೀಡಲಾಗಿದೆ.

05–10–2020ರಂದು ಪುಲ್ವಾಮಾದಲ್ಲಿ ಉಗ್ರರಿಗೆ ಪ್ರತ್ಯುತ್ತರ ನೀಡುವ ಸಂದರ್ಭ 100ನೇ ಬೆಟಾಲಿಯನ್‌ನ ಶೈಲೇಂದ್ರ ಪ್ರತಾಪ್ ಸಿಂಗ್ ಅವರು ತಮ್ಮ ಪ್ರಾಣ ತ್ಯಾಗ ಮಾಡಿದರು ಎಂದೂ ಸಹ ಬರೆಯಲಾಗಿದೆ.

ಮದುವೆಗೆ ಬಂದಿದ್ದ ಸಿಆರ್‌ಪಿಎಫ್ ಯೋಧರು, ವಧುವಿಗೆ ಉಡುಗೊರೆ ಕೊಟ್ಟು ಆಶೀರ್ವದಿಸಿ ತೆರಳಿದ್ದಾರೆ.

‘ಈಗ ನನ್ನ ಮಗ ಈ ಜಗತ್ತಿನಲ್ಲಿ ಇಲ್ಲ. ಆದರೆ, ನಾವೀಗ ಸಿಆರ್‌ಪಿಎಫ್ ಯೋಧರ ರೂಪದಲ್ಲಿ ಹಲವು ಮಕ್ಕಳನ್ನು ಹೊಂದಿದ್ದೇವೆ. ಕಷ್ಟ ಮತ್ತು ಸುಖ ಎರಡರಲ್ಲೂ ಅವರು ನಮ್ಮ ಜೊತೆ ನಿಂತಿದ್ದಾರೆ’ಎಂದು ಹುತಾತ್ಮ ಯೋಧ ಶೈಲೇಂದ್ರ ಸಿಂಗ್ ಅವರ ತಂದೆ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.