ಹೈದರಾಬಾದ್: ಆದಾಯ ತೆರಿಗೆ ಇಲಾಖೆಯ(ಐಟಿ) ಅಧಿಕಾರಿಗಳ ಜೊತೆ ಬಂದಿದ್ದ ಕೇಂದ್ರೀಯ ಮೀಸಲು ಪೊಲೀಸ್ ಪಡೆ (ಸಿಆರ್‌ಪಿಎಫ್) ಸಿಬ್ಬಂದಿ ತಮ್ಮ ಮಗನನ್ನು ಥಳಿಸಿದ್ದಾರೆ ಎಂದು ತೆಲಂಗಾಣ ಕಾರ್ಮಿಕ ಕಲ್ಯಾಣ ಸಚಿವ ಮಲ್ಲಾ ರೆಡ್ಡಿ ಅವರು ಬುಧವಾರ ಆರೋಪಿಸಿದ್ದಾರೆ.
ಮಲ್ಲಾ ರೆಡ್ಡಿ ಅವರ ಮನೆ ಮತ್ತು ಶಿಕ್ಷಣ ಸಂಸ್ಥೆಗಳಲ್ಲಿ ಐಟಿ ಅಧಿಕಾರಿಗಳು ಮಂಗಳವಾರ ಬೆಳಿಗ್ಗೆ ಶೋಧ ಕಾರ್ಯಾಚರಣೆ ಆರಂಭಿಸಿದರು. ಬುಧವಾರವೂ ಕಾರ್ಯಾಚರಣೆ ಮುಂದುವರಿದಿದೆ. ಈ ನಡುವೆ, ಮಲ್ಲಾ ರೆಡ್ಡಿ ಅವರ ಮಗ ಮಹೇಂದ್ರ ರೆಡ್ಡಿ ಅವರನ್ನು ಎದೆ ನೋವಿನ ಕಾರಣ ಬುಧವಾರ ಬೆಳಿಗ್ಗೆ ಆಸ್ಪತ್ರೆಗೆ ದಾಖಲಿಸಲಾಗಿದೆ.
ಈ ಕುರಿತು ಸುದ್ದಿಗಾರರ ಜೊತೆ ಮಾತನಾಡಿದ ಮಲ್ಲಾ ರೆಡ್ಡಿ, ‘ಸಿಆರ್‌ಪಿಎಫ್ ಸಿಬ್ಬಂದಿ ನನ್ನ ಹಿರಿಯ ಮಗನನ್ನು ಇಡೀ ರಾತ್ರಿ ಥಳಿಸಿದ್ದಾರೆ. ಎದೆ ನೋವಿನ ನೆಪ ಹೇಳಿ ಆತನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ನಮ್ಮ ಕುಟುಂಬದ ವೈದ್ಯರಿಗೆ ಆತನನ್ನು ಭೇಟಿ ಮಾಡಲು ಅವಕಾಶ ನೀಡುತ್ತಿಲ್ಲ. ಮಗನನ್ನು ಕಾಣಲು ನನಗೂ ಅನುಮತಿ ಕೊಟ್ಟಿಲ್ಲ. ಅಧಿಕಾರಿಗಳಿಗೆ ದಾಖಲೆಯಿಲ್ಲದ ಹಣ ದೊರೆತರೆ ಅದರಲ್ಲಿ ತಪ್ಪೇನಿದೆ. ಅವರು ಅವರ ಕರ್ತವ್ಯವನ್ನು ನಿಭಾಯಿಸಬೇಕು’ ಎಂದು ಅವರು ಹೇಳಿದ್ದಾರೆ.
ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ‘ನಮ್ಮ ಮಾಲೀಕತ್ವದ ವೈದ್ಯಕೀಯ ಕಾಲೇಜುಗಳಲ್ಲಿ ಸೀಟು ಹಂಚಿಕೆಯಲ್ಲಿ ಅವ್ಯವಹಾರ ನಡೆದಿಲ್ಲ. ನಾವು ಬಡ ಮಕ್ಕಳಿಗೆ ಶಿಕ್ಞಣ ನೀಡುತ್ತಿದ್ದೇವೆಯೇ ಹೊರತು ಕಾನೂನು ಬಾಹಿರ ವ್ಯವಹಾರಗಳನ್ನು ಮಾಡುತ್ತಿಲ್ಲ. ಇದನ್ನು ಸಹಿಸದ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ನಮ್ಮ ಮನೆಯನ್ನು ಶೋಧಿಸಲು 200 ಐಟಿ ಅಧಿಕಾರಿಗಳನ್ನು ಕಳಿಸಿದೆ. ಅವರಿಗೆ ಕೇವಲ ₹6 ಲಕ್ಷ ದೊರೆತಿದೆ’ ಎಂದರು.
ರಾಜಕೀಯ ದುರುದ್ದೇಶದಿಂದಾಗಿಶೋಧ ಕಾರ್ಯಾಚರಣೆ ನಡೆಸಿರುವುದಾಗಿ ಹೇಳಿರುವ ಅವರು, ತಮ್ಮನ್ನು ಮತ್ತು ಬಿಆರ್‌ಎಸ್ ಸರ್ಕಾರವನ್ನು ಬಿಜೆಪಿ ಗುರಿಯಾಗಿಸಿಕೊಂಡಿದೆ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.