ಕೋಯಿಕ್ಕೋಡ್: ಶಬರಿಮಲೆ ವಿವಾದಕ್ಕೆ ಸಂಬಂಧಿಸಿ ಹಿಂಸಾಚಾರ ಇನ್ನೂ ಮುಂದುವರಿದಿದ್ದು, ಜಿಲ್ಲೆಯಲ್ಲಿ ಸಿಪಿಎಂ ಮತ್ತು ಬಿಜೆಪಿ ಕಾರ್ಯಕರ್ತರ ಮನೆಗಳ ಮೇಲೆ ದುಷ್ಕರ್ಮಿಗಳು ಮಂಗಳವಾರ ನಸುಕಿನಲ್ಲಿ ಕಚ್ಚಾ ಬಾಂಬ್‌ಗಳನ್ನು ಎಸೆದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಸಿಪಿಎಂನ ಕೊಯಿಲಂಡಿ ಪ್ರದೇಶ ಸಮಿತಿ ಸದಸ್ಯ ಶಿಜು ಅವರ ಮನೆ ಮೇಲೆ ಮೊದಲು ಬಾಂಬ್ ದಾಳಿ ನಡೆದಿದ್ದು, ನಂತರ ಬಿಜೆಪಿ ಸ್ಥಳೀಯ ಮುಖಂಡ ವಿ.ಕೆ.ಮುಕುಂದನ್ ಅವರ ಮನೆ ಮೇಲೂ ಬಾಂಬ್ ದಾಳಿಯಾಗಿದೆ. ಘಟನೆಯಲ್ಲಿ ಯಾರೊಬ್ಬರೂ ಗಾಯಗೊಂಡಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಕೊಯಿಲಂಡಿಯಲ್ಲಿ ಬಿಜೆಪಿ ಕಾರ್ಯಕರ್ತರ ಮನೆಗಳ ಮೇಲೆ ಸೋಮವಾರ ಕಚ್ಚಾ ಬಾಂಬ್ ದಾಳಿಯಾಗಿತ್ತು. ಕಣ್ಣೂರಿನಲ್ಲಿ ಈವರೆಗೆ 18 ಕಚ್ಚಾ ಬಾಂಬ್‌ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಪೊಲೀಸ್ ಮೂಲಗಳಪ್ರಕಾರ, ಹಿಂಸಾಚಾರಕ್ಕೆ ಸಂಬಂಧಿಸಿ 2,187 ಪ್ರಕರಣಗಳು ದಾಖಲಾಗಿದ್ದು, 6,914 ಜನರನ್ನು ಬಂಧಿಸಲಾಗಿದೆ.
ಕಳೆದ ಬುಧವಾರ 50 ವರ್ಷದೊಳಗಿನ ಮಹಿಳೆಯರಾದ ಬಿಂದು ಮತ್ತು ಕನಕದುರ್ಗ ಎಂಬುವವರು ಶಬರಿಮಲೆ ದೇಗುಲ ಪ್ರವೇಶಿಸಿ, ಅಯ್ಯಪ್ಪನ ದರ್ಶನ ಮಾಡಿದ ನಂತರ ರಾಜ್ಯದಲ್ಲಿ ಭಾರಿ ಹಿಂಸಾಚಾರ ಭುಗಿಲೆದ್ದಿದೆ. ಮಹಿಳೆಯರು ದೇಗುಲ ಪ್ರವೇಶಿಸಿದ್ದನ್ನು ಖಂಡಿಸಿ ಮರುದಿನವೇ ವಿವಿಧ ಹಿಂದೂ ಸಂಘಟನೆಗಳು ಬಂದ್‌ಗೆ ಕರೆ ಕೊಟ್ಟಿದ್ದವು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.