ADVERTISEMENT

ಸಿಯುಇಟಿ–ಯುಜಿ ಫಲಿತಾಂಶದಲ್ಲಿ ವಿಳಂಬ: ಪರ್ಯಾಯ ವ್ಯವಸ್ಥೆಗೆ ಜಾಮಿಯಾ ವಿ.ವಿ ಚಿಂತನೆ

ಪಿಟಿಐ
Published 16 ಜುಲೈ 2024, 15:16 IST
Last Updated 16 ಜುಲೈ 2024, 15:16 IST
   

ನವದೆಹಲಿ: ಸಾಮಾನ್ಯ ವಿಶ್ವವಿದ್ಯಾಲಯ ಪ್ರವೇಶ ಪರೀಕ್ಷೆಯ (ಸಿಯುಇಟಿ) ಫಲಿತಾಂಶ ಪ್ರಕಟಗೊಳ್ಳುವುದು ವಿಳಂಬವಾಗಿರುವುದರಿಂದ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿಶ್ವವಿದ್ಯಾಲಯವು ಪರ್ಯಾಯ ವ್ಯವಸ್ಥೆಯೊಂದನ್ನು ರೂಪಿಸಿಕೊಳ್ಳುವ ಬಗ್ಗೆ ಗಂಭೀರ ಚಿಂತನೆ ನಡೆಸಿದೆ.

ಎಲ್ಲ ಡೀನ್‌ಗಳ ಜೊತೆ ಜುಲೈ 18ರಂದು ಸಭೆ ನಡೆಸಿ ಚರ್ಚಿಸಿ, ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವುದಾಗಿ ವಿಶ್ವವಿದ್ಯಾಲಯದ ಅಧಿಕಾರಿಗಳು ಪಿಟಿಐಗೆ ತಿಳಿಸಿದ್ದಾರೆ. ಆದಷ್ಟು ಬೇಗ ಪ್ರವೇಶ ಪ್ರಕ್ರಿಯೆ ಪೂರ್ಣಗೊಳಿಸಿಕೊಳ್ಳುವುದರ ಕುರಿತು ವಿಶ್ವವಿದ್ಯಾಲಯ ಚಿಂತಿಸುತ್ತಿದೆ.

ಜವಾಹರಲಾಲ್‌ ನೆಹರೂ ವಿಶ್ವವಿದ್ಯಾಲಯ (ಜೆಎನ್‌ಯು) ಮತ್ತು ದೆಹಲಿ ವಿಶ್ವವಿದ್ಯಾಲಯಗಳು (ಡಿಯು) ಮಾತ್ರವೇ ಸಿಯುಇಟಿ–ಯುಜಿ ಪರೀಕ್ಷೆಯನ್ನು ನೆಚ್ಚಿಕೊಂಡಿವೆ. ಆದರೆ, ಜಾಮಿಯಾ ವಿಶ್ವವಿದ್ಯಾಲಯವು ಪೂರ್ಣ ಪ್ರಮಾಣದಲ್ಲಿ ಈ ಪರೀಕ್ಷೆಯನ್ನು ಅವಲಂಬಿಸಿಲ್ಲ. 50 ಪದವಿ ಕೋರ್ಸ್‌ಗಳ ಪೈಕಿ 15 ಕೋರ್ಸ್‌ಗಳಲ್ಲಿ ಮಾತ್ರವೇ ಜಾಮಿಯಾ ವಿಶ್ವವಿದ್ಯಾಲಯವು ಸಿಯುಇಟಿ–ಯುಜಿ ಪರೀಕ್ಷೆಯ ಅಂಕಗಳನ್ನು ಪರಿಗಣಿಸುತ್ತದೆ. ಇನ್ನು 86 ಎಂ.ಎ ಕೋರ್ಸ್‌ಗಳ ಪೈಕಿ ಕೇವಲ 5ರಲ್ಲಿ ಈ ವಿಶ್ವವಿದ್ಯಾಲಯವು ಈ ಪರೀಕ್ಷೆಯ ಅಂಕಗಳನ್ನು ಪರಿಗಣಿಸುತ್ತದೆ.

ADVERTISEMENT

‘ಸುಮಾರು ಒಂದು ಸಾವಿರಕ್ಕೂ ಹೆಚ್ಚು ಅಭ್ಯರ್ಥಿಗಳ ಮರು ಪರೀಕ್ಷೆಯನ್ನು ಜುಲೈ 19ರಂದು ನಡೆಸಲಾಗುವುದು’ ಎಂದು ಎನ್‌ಟಿಎ ಭಾನುವಾರ ಘೋಷಿಸಿತ್ತು. ಪರೀಕ್ಷೆಯಲ್ಲಿ ತಪ್ಪು ಪ್ರಶ್ನೆಪತ್ರಿಕೆ ಹಂಚಿದ್ದರಿಂದಾದ ಗೊಂದಲದ ಕಾರಣಕ್ಕಾಗಿ ಪರೀಕ್ಷೆ ಬರೆಯುವ ಸಮಯ ಕಡಿತಗೊಂಡಿತ್ತು. ಈ ಕುರಿತು ಹಲವು ಅಭ್ಯರ್ಥಿಗಳು ದೂರು ನೀಡಿದ್ದರು. ಇದನ್ನು ಪರಿಗಣಿಸಿ, ಎನ್‌ಟಿಎ ಮರು ಪರೀಕ್ಷೆ ಮಾಡುವುದಾಗಿ ಘೋಷಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.