ADVERTISEMENT

ವಿ.ವಿ ಸಾಮಾನ್ಯ ಪ್ರವೇಶ ಪರೀಕ್ಷೆ | ಕೀ ಉತ್ತರದಲ್ಲಿ ಹಲವು ದೋಷ: ಆರೋಪ

ಪಿಟಿಐ
Published 8 ಜುಲೈ 2024, 19:45 IST
Last Updated 8 ಜುಲೈ 2024, 19:45 IST
Exam
Exam   

ನವದೆಹಲಿ: ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ(ಎನ್‌ಟಿಎ) ನಡೆಸಿದ ವಿಶ್ವವಿದ್ಯಾಲಯಗಳ ಸಾಮಾನ್ಯ ಪ್ರವೇಶ ಪರೀಕ್ಷೆಯ(ಸಿಯುಇಟಿ –ಯುಜಿ) ಕೀ ಉತ್ತರಗಳಲ್ಲಿ ತಪ್ಪುಗಳಿವೆ ಎಂದು ಪರೀಕ್ಷೆ ಬರೆದ ಹಲವು ಅಭ್ಯರ್ಥಿಗಳು ಆರೋಪಿಸಿದ್ದಾರೆ.

ಎನ್‌ಟಿಎ ಕೀ ಉತ್ತರಗಳನ್ನು ಪ್ರಕಟಿ‌ಸಿದ ಮರುದಿನವೇ ಈ ಆರೋಪಗಳು ಕೇಳಿಬಂದಿವೆ.

ಸಿಯುಇಟಿ –ಯುಜಿ ಪರೀಕ್ಷೆಗೆ ಸಂಬಂಧಿಸಿದಂತೆ ಅಭ್ಯರ್ಥಿಗಳು ಎತ್ತಿರುವ ಯಾವುದೇ ಕುಂದುಕೊರತೆಗಳು ಕಂಡುಬಂದಲ್ಲಿ ಜುಲೈ 15ರಿಂದ ಜುಲೈ 19ರವರೆಗೆ ಮರು ಪರೀಕ್ಷೆ ನಡೆಸುವುದಾಗಿ ಎನ್‌ಟಿಎ ಈ ಹಿಂದೆ ತಿಳಿಸಿತ್ತು.

ADVERTISEMENT

ಎನ್‌ಟಿಎ ಪ್ರಕಟಿಸಿದ ಕೀ ಉತ್ತರದ ಕುರಿತು ಆಕ್ಷೇಪಣೆಗಳಿದ್ದರೆ ಜುಲೈ 9ರ ಸಂಜೆ 5 ಗಂಟೆ ಒಳಗಾಗಿ ಪ್ರತಿಯೊಂದು ಉತ್ತರಕ್ಕೆ ತಲಾ ₹200 ಪಾವತಿಸಿ ಪ್ರಶ್ನಿಸ‌ಬಹುದು.

‘ಸರ್‌, ಸಿಯುಇಟಿ ಕೀ ಉತ್ತರದಲ್ಲಿ ಹಲವು ತಪ್ಪುಗಳು ಕಂಡುಬಂದಿವೆ. ನಾನು ಅದನ್ನು ಪ್ರಶ್ನಿಸಲು ಮುಂದಾದರೆ, ನಾನು ಸಿಯುಇಟಿ ಅರ್ಜಿಗೆ ಸಲ್ಲಿಸಿದ್ದಕ್ಕಿಂತಲೂ ಹೆಚ್ಚಿನ ಹಣ ಪಾವತಿಸಬೇಕಿದೆ’ ಎಂದು ಅಭ್ಯರ್ಥಿ ರಿಷಭ್‌ ‘ಎಕ್ಸ್‌’ನಲ್ಲಿ ಬರೆದಿದ್ದಾರೆ.

‘ನಾನು ಭುಗೋಳ ವಿಷಯದ ಒಎಂಆರ್‌ ಶೀಟ್‌ನೊಂದಿಗೆ ಕೀ ಉತ್ತರಗಳನ್ನು ಪರಿಶೀಲಿಸಿ‌ದೆ. ಕೀ ಉತ್ತರದಲ್ಲಿ ಶೇಕಡ 80ರಷ್ಟು ತಪ್ಪುಗಳಿರುವುದು ನೋಡಿ ಆಘಾತಗೊಂಡಿದ್ದೇನೆ. ಎನ್‌ಟಿಎ ಪ್ರಕಾರ, ನನಗೆ ಕೇವಲ 26 ಅಂಕ ಸಿಗಲಿದ್ದು, ವಾಸ್ತವದಲ್ಲಿ 122 ಅಂಕ ಪಡೆಯಲಿದ್ದೇನೆ’ ಎಂದು ಮತ್ತೋರ್ವ ಅಭ್ಯರ್ಥಿ ಬಿಶಲ್‌ ಭೌಮಿಕ್‌ ತಿಳಿಸಿದ್ದಾರೆ.

‘ಎನ್‌ಟಿಎ– ಒಮ್ಮೆ ಇತ್ತ ನೋಡಿ. ನೀವು ತಪ್ಪು ಉತ್ತರಗಳನ್ನು ನೀಡಿದ್ದು, ನಿಮ್ಮ ತಪ್ಪಿಗೆ ಯಾರು ತಾನೇ ಸಾವಿರಾರು ರೂಪಾಯಿ ತೆರಬೇಕು. ನಾವು ಯಾವುದೇ ಕಾರಣಕ್ಕೂ ಹಣ ಪಾವತಿಸಲ್ಲ. ಬೋಗಸ್‌ ಕೀ ಉತ್ತರ ಪ್ರಕಟಿಸಿದ್ದನ್ನು ಒಪ್ಪಿಕೊಳ್ಳಿ‘ ಎಂದು ಅಭ್ಯರ್ಥಿಯೊಬ್ಬ ‘ಎಕ್ಸ್‌’ನಲ್ಲಿ ಕಿರಿಕಾರಿದ್ದಾನೆ.

ಕಾಂಗ್ರೆಸ್‌ ವಕ್ತಾರೆ ರಾಗಿಣಿ ನಾಯಕ್‌ ಕೂಡ ಈ ವಿಷಯದ ಕುರಿತು ‘ಎಕ್ಸ್‌’ನಲ್ಲಿ ಧ್ವನಿಯೆತ್ತಿದ್ದು, ಮನಃಶಾಸ್ತ್ರ ವಿಷಯದ ಕೀ ಉತ್ತರದ ಸ್ಟ್ರೀನ್‌ಶಾಟ್‌ ಹಂಚಿಕೊಂಡಿದ್ದಾರೆ.

‘ರಸ್ತೆಯಲ್ಲಿ ಅಪಘಾತ ಸಂಭವಿಸಿದರೆ, ಹಲವಾರು ಮಂದಿ ಸೇರಿದರೆ ಏನೆಂದು ಕರೆಯುತ್ತಾರೆ? ಇದಕ್ಕೆ ಎನ್‌ಸಿಎಆರ್‌ಟಿ ಪ್ರಕಾರ, 'ಗುಂಪು’ ಎಂದಾದರೆ, ಎನ್‌ಟಿಎ ಕೀ ಉತ್ತರದಂತೆ ‘ಪ್ರೇಕ್ಷಕರು’ ಆಗುತ್ತಾರೆ. ಈ‌ಗ ಪ‍್ರಶ್ನೆಗೆ ಉತ್ತರಿಸುವ ವಿದ್ಯಾರ್ಥಿಯೇ ಗೊಂದಲದಲ್ಲಿ ಸಿಲುಕಿದ್ದಾನೆ’ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.

ಅಭ್ಯರ್ಥಿಗಳು ಎತ್ತಿರುವ ಆಕ್ಷೇಪಗಳಿಗೆ ಉತ್ತರಿಸಲು ಎನ್‌ಟಿಎ ಅಧಿಕಾರಿಗಳು ನಿರಾಕರಿಸಿದ್ದಾರೆ. ಈ ವಿಚಾರದ ಕುರಿತು ಪ್ರಶ್ನಿಸುವುದು ಸಮಯದ ವ್ಯರ್ಥ ಎಂದು ಅಭ್ಯರ್ಥಿಗಳು ಬೇಸರ ಹೊರಹಾಕಿದ್ದಾರೆ.

‘ಅಭ್ಯರ್ಥಿಗಳು ಎತ್ತಿರುವ ಪ್ರಶ್ನೆಗಳ ಕುರಿತು ವಿಷಯ ತಜ್ಞರ ತಂಡವು ಪರಿಶೀಲಿಸಲಿದೆ. ಆಕ್ಷೇಪ ಪರಿಶೀಲಿಸಿ, ಪರಿಷ್ಕೃತ ಅಂತಿಮ ಕೀ– ಉತ್ತರ ಆಧರಿಸಿಯೇ ಫಲಿತಾಂಶ ಪ್ರಕಟಿಸಲಾ‌ಗುವುದು’ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

261 ಕೇಂದ್ರ, ರಾಜ್ಯ, ಡೀಮ್ಡ್‌ ಹಾಗೂ ಖಾಸಗಿ ವಿಶ್ವವಿದ್ಯಾಲಯಗಳಲ್ಲಿ ಯು–ಜಿ ಪ್ರವೇಶ ಪಡೆಯಲು 13.4 ಲಕ್ಷ ವಿದ್ಯಾರ್ಥಿಗಳು ಸಾಮಾನ್ಯ ಪ್ರವೇಶ ಪರೀಕ್ಷೆ ಎದುರಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.