ನೂಹ್, ಹರಿಯಾಣ: ‘ಅರಾವಳಿ ಬೆಟ್ಟ ಪ್ರದೇಶದಲ್ಲಿ ಗಣಿಗಾರಿಕೆ ನಡೆಸುವುದನ್ನು ಸುಪ್ರೀಂಕೋರ್ಟ್ ನಿಷೇಧಿಸಿದ್ದರೂ ಈ ಪ್ರದೇಶದಲ್ಲಿ ಅಕ್ರಮ ಗಣಿಗಾರಿಕೆ ಎಗ್ಗಿಲ್ಲದೆ ನಡೆಯುತ್ತಿದೆ. ಇದಕ್ಕೆ ಕಡಿವಾಣ ಹಾಕುವುದು ಪೊಲೀಸರಿಗೂ ಸವಾಲಾಗಿ ಪರಿಣಮಿಸಿದೆ.
ಈ ಭಾಗದಲ್ಲಿನ ಅಕ್ರಮ ಕಲ್ಲು ಗಣಿಗಾರಿಕೆ ತಡೆಯಲು ಮುಂದಾಗಿದ್ದ ಡಿವೈಎಸ್‌ಪಿ ಸುರೇಂದ್ರ ಸಿಂಗ್ ಅವರನ್ನು ಅಕ್ರಮದಲ್ಲಿ ತೊಡಗಿದ್ದವರು ಟ್ರಕ್ ಹರಿಸಿ ಮಂಗಳವಾರ ಹತ್ಯೆ ಮಾಡಿದ್ದರು.
‘ಗಣಿ ಮಾಫಿಯಾದಲ್ಲಿ ಭಾಗಿಯಾಗಿರುವವರು ದೊಡ್ಡ ಬಂಡೆಗಳನ್ನು ಟ್ರಕ್‌ಗಳಲ್ಲಿ ತುಂಬಿಕೊಂಡು ಕ್ರಷರ್‌ಗಳಿಗೆ ಸಾಗಿಸುತ್ತಾರೆ.ತಡರಾತ್ರಿ ಹಾಗೂ ಮುಂಜಾನೆ ಸಮಯದಲ್ಲೇ ಇಂತಹ ಟ್ರಕ್‌ಗಳ ಓಡಾಟ ಹೆಚ್ಚಿರುತ್ತದೆ. ಇವರಿಗೆ ಕಾನೂನಿನ ಮೇಲೆ ಕಿಂಚಿತ್ತೂ ಭಯವಿಲ್ಲ. ಡಿವೈಎಸ್‌ಪಿ ಸುರೇಂದ್ರ ಅವರ ಹತ್ಯೆಯೇ ಇದಕ್ಕೆ ಸಾಕ್ಷಿ’ ಎಂದು ತವೂರು ನಿವಾಸಿಗಳು ದೂರಿದ್ದಾರೆ.
ಪರಿಸರ ಸೂಕ್ಷ್ಮ ಪ್ರದೇಶವಾದ ಅರಾವಳಿ ಬೆಟ್ಟದಲ್ಲಿ ಯಾವುದೇ ಬಗೆಯ ಗಣಿಗಾರಿಕೆ ನಡೆಸಬಾರದು ಎಂದು 2002ರಲ್ಲಿ ಸುಪ್ರೀಂಕೋರ್ಟ್ ಆದೇಶಿಸಿತ್ತು. 2009ರಲ್ಲೂ ಈ ಸಂಬಂಧ ಆದೇಶ ಹೊರಡಿಸಿತ್ತು.
‘ಡಿವೈಎಸ್‌ಪಿ ಸುರೇಂದ್ರ ಸಿಂಗ್ ಹತ್ಯೆ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ಒಪ್ಪಿಸಬೇಕು’ ಎಂದು ಕಾಂಗ್ರೆಸ್ ನಾಯಕ ರಣದೀಪ್ ಸಿಂಗ್ ಸುರ್ಜೇವಾಲಾ ಆಗ್ರಹಿಸಿದ್ದಾರೆ.
‘ಗಣಿ ಮಾಫಿಯಾಕ್ಕೆ ಹರಿಯಾಣ ಸರ್ಕಾರದ ಪರೋಕ್ಷ ಬೆಂಬಲವಿದ್ದಂತೆ ಕಾಣುತ್ತದೆ. ಹೀಗಾಗಿಯೇ ಅವರು ನಿರ್ಭೀತಿಯಿಂದ ಅಕ್ರಮವಾಗಿ ಗಣಿಗಾರಿಕೆ ನಡೆಸುತ್ತಿದ್ದಾರೆ’ ಎಂದು ಹರಿಯಾಣ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಭೂಪಿಂದರ್ ಸಿಂಗ್ ಹೂಡಾ ದೂರಿದ್ದಾರೆ.
ಅಧಿಕಾರಿಗಳನ್ನು ಹತ್ಯೆ ಮಾಡುವ ಉದ್ದೇಶದಿಂದ2021ರಲ್ಲಿ ಚಾಲಕನೊಬ್ಬ ತನ್ನ ಟ್ರಕ್‌ನಿಂದ ಪೊಲೀಸ್ ವಾಹನಕ್ಕೆ ಗುದ್ದಿದ್ದ. ಆತನ ವಿರುದ್ಧ ಕೊಲೆಯತ್ನ ಆರೋಪದಡಿ ಪ್ರಕರಣ ದಾಖಲಿಸಲಾಗಿತ್ತು.
ಸರ್ಕಾರದ ಅಂಕಿ ಅಂಶಗಳ ಪ್ರಕಾರ 2022–23ನೇ ಸಾಲಿನಲ್ಲಿ ಅಕ್ರಮ ಗಣಿಗಾರಿಕೆಯಲ್ಲಿ ತೊಡಗಿದ್ದ 68 ವಾಹನಗಳನ್ನು ಜಪ್ತಿ ಮಾಡಲಾಗಿದೆ. ನೂಹ್ ಜಿಲ್ಲೆಯಲ್ಲೇ 23 ಎಫ್‌ಐಆರ್‌ಗಳು ದಾಖಲಾಗಿವೆ. ಒಟ್ಟು ₹4.28 ಲಕ್ಷ ದಂಡ ಮೊತ್ತವನ್ನೂ ಸಂಗ್ರಹಿಸಲಾಗಿದೆ. 2021–22ರಲ್ಲಿ ನೂಹ್‌ನಲ್ಲಿ ಅಕ್ರಮ ಗಣಿಗಾರಿಕೆ ಸಂಬಂಧ ಒಟ್ಟು 239 ಪ್ರಕರಣಗಳು ದಾಖಲಾಗಿದ್ದವು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.