ADVERTISEMENT

ಹಿಂಸಾಚಾರ | ಹಲ್ದವಾನಿಯಲ್ಲಿ ಕರ್ಫ್ಯೂ ತೆರವು; ಮ್ಯಾಜಿಸ್ಟ್ರೇಟ್ ತನಿಖೆಗೆ ಆದೇಶ

ಪಿಟಿಐ
Published 10 ಫೆಬ್ರುವರಿ 2024, 12:52 IST
Last Updated 10 ಫೆಬ್ರುವರಿ 2024, 12:52 IST
<div class="paragraphs"><p>ಉತ್ತರಾಖಂಡದ ಹಲ್ದವಾನಿಯಲ್ಲಿ ನಡೆದ ಗಲಭೆಯ ದೃಶ್ಯ</p></div>

ಉತ್ತರಾಖಂಡದ ಹಲ್ದವಾನಿಯಲ್ಲಿ ನಡೆದ ಗಲಭೆಯ ದೃಶ್ಯ

   

ಪಿಟಿಐ ಚಿತ್ರ

ಹಲ್ದವಾನಿ: ಮದರಸಾ ಹಾಗೂ ಪ್ರಾರ್ಥನಾ ಸ್ಥಳ ತೆರವು ಕಾರ್ಯಾಚರಣೆ ವೇಳೆ ಹಿಂಸಾಚಾರ ನಡೆದ ಹಿನ್ನೆಲೆಯಲ್ಲಿ ನೈನಿತಾಲ್‌ ಜಿಲ್ಲೆಯ ಹಲ್ದವಾನಿಯಲ್ಲಿ ಹೇರಿದ್ದ ಕರ್ಫ್ಯೂ ಅನ್ನು ಹಿಂಪಡೆಯಲಾಗಿದೆ. ಆದರೆ, ಪೊಲೀಸ್‌ ಠಾಣೆಗೆ ಬೆಂಕಿ ಹಚ್ಚಿದ್ದ ಪ್ರಕರಣ ವರದಿಯಾದ ಬಂಭೂಲ್ಪುರದಲ್ಲಿ ನಿರ್ಬಂಧ ಕ್ರಮ ಮುಂದುವರಿಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ADVERTISEMENT

ಕರ್ಫ್ಯೂ ಆದೇಶವನ್ನು ಬಂಭೂಲ್ಪುರ ವ್ಯಾಪ್ತಿಗೆ ಸೀಮಿತಗೊಳಿಸುವ ಆದೇಶವನ್ನು ನೈನಿತಾಲ್‌ ಜಿಲ್ಲಾಧಿಕಾರಿ ವಂದನಾ ಸಿಂಗ್‌ ಆದೇಶಿಸಿದ್ದಾರೆ. ನೈನಿತಾಲ್‌–ಬರೇಲಿ ರಸ್ತೆಯಲ್ಲಿ ವಾಹನ ಸಂಚಾರ ಮುಕ್ತಗೊಳಿಸಲಾಗಿದೆ. ವಾಣಿಜ್ಯ ವ್ಯವಹಾರಗಳಿಗೆ ಅವಕಾಶ ಕಲ್ಪಿಸಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಆದಾಗ್ಯೂ, ಕರ್ಫ್ಯೂ ಹಿಂಪಡೆಯಲಾಗಿರುವ ಪ್ರದೇಶಗಳಲ್ಲಿ ಆಸ್ಪತ್ರೆಗಳು, ಮೆಡಿಕಲ್‌ ಸ್ಟೋರ್‌ಗಳಷ್ಟೇ ತೆರದಿವೆ. ಹಲ್ದವಾನಿ ಪಟ್ಟಣದ ಹೊರವಲಯದಲ್ಲಿ ಅಂಗಡಿ ಮುಂಗಟ್ಟುಗಳು ಶನಿವಾರ ತೆರೆದಿವೆ. ಆದರೆ, ಶಾಲೆಗಳು ಮುಚ್ಚಿದ ಸ್ಥಿತಿಯಲ್ಲೇ ಇವೆ.

ಹಿಂಸಾಚಾರದ ಕುರಿತು ಮ್ಯಾಜಿಸ್ಟ್ರೇಟ್ ತನಿಖೆಗೆ ಆದೇಶಿಸಲಾಗಿದ್ದು, ಹದಿನೈದು ದಿನಗಳೊಳಗೆ ಮುಕ್ತಾಯಗೊಳಿಸುವಂತೆ ಸೂಚಿಸಲಾಗಿದೆ. ಈ ಆದೇಶ ನೀಡಿರುವ ರಾಜ್ಯ ಮುಖ್ಯಕಾರ್ಯದರ್ಶಿ ರಾಧಾ ರಾತುರಿ ಅವರು, ಕುಮೋನ್‌ ಕಮಿಷನರ್‌ ದೀಪಕ್‌ ರಾವತ್‌ ಅವರು ತನಿಖೆ ನಡೆಸಿ, ಸರ್ಕಾರಕ್ಕೆ ವರದಿ ನೀಡಲಿದ್ದಾರೆ ಎಂದಿದ್ದಾರೆ.

'ಗಲಭೆಪೀಡಿತ ಪ್ರದೇಶದಲ್ಲಿ ಪರಿಸ್ಥಿತಿ ನಿಯಂತ್ರಣದಲ್ಲಿದೆ. ಕಟ್ಟೆಚ್ಚರ ಮುಂದುವರಿಸಲಾಗಿದೆ' ಎಂದು ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಎ.ಪಿ. ಅನ್ಶುಮನ್‌ ತಿಳಿಸಿದ್ದಾರೆ.

ಮುಸ್ಲಿಂ ಬಾಹುಳ್ಯವಿರುವ ಬಂಭೂಲ್ಪುರ ಪ್ರದೇಶದಲ್ಲಿ ಅಕ್ರಮವಾಗಿ ನಿರ್ಮಿಸಲಾಗಿರುವ ಮದರಸಾ ಹಾಗೂ ಪ್ರಾರ್ಥನಾ ಸ್ಥಳವನ್ನು ಗುರುವಾರ ತೆರವುಗೊಳಿಸುವ ಸಂದರ್ಭದಲ್ಲಿ ಗಲಭೆ ನಡೆದಿತ್ತು. ಈವರೆಗೆ ಕನಿಷ್ಠ 6 ಮಂದಿ ಮೃತಪಟ್ಟಿದ್ದು, 100ಕ್ಕೂ ಹೆಚ್ಚು ಪೊಲೀಸರು ಗಾಯಗೊಂಡಿದ್ದಾರೆ.

ಹಿಂಸಾಚಾರ ಸಂಬಂಧ ಮೂರು ಎಫ್‌ಐಆರ್‌ಗಳನ್ನು ದಾಖಲಿಸಿಕೊಳ್ಳಲಾಗಿದೆ. ಇವುಗಳಲ್ಲಿ 16 ಆರೋಪಿಗಳ ಹೆಸರನ್ನು ಸೇರಿಸಲಾಗಿದೆ. ಈ ಪೈಕಿ ಐವರನ್ನು ಬಂಧಿಸಿದ್ದೇವೆ. ಸಾಮಾಜಿಕ ಮಾಧ್ಯಮಗಳಲ್ಲಿ ಸುಳ್ಳು ಸುದ್ದಿಗಳು ಹರಿದಾಡುವುದನ್ನು ತಡೆಯಲು ಇಂಟರ್‌ನೆಟ್‌ ಸ್ಥಗಿತಗೊಳಿಸಿರುವ ಕ್ರಮ ಮುಂದುವರಿಯಲಿದೆ. ಕರ್ಫ್ಯೂ ಮುಂದುವರಿದಿರುವ ಪ್ರದೇಶದಲ್ಲಿ ವಾಸಿಸುವ ಜನರಿಗೆ ಅಗತ್ಯ ವಸ್ತುಗಳನ್ನು ಖರೀದಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ಅನ್ಶುಮನ್‌ ಮಾಹಿತಿ ನೀಡಿದ್ದಾರೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.