ADVERTISEMENT

ಉತ್ತರಪ್ರದಶಕ್ಕೆ ಪಾತಕಿ ಮುಖ್ತಾರ್ ಅನ್ಸಾರಿ ರವಾನೆ

​ಪ್ರಜಾವಾಣಿ ವಾರ್ತೆ
Published 6 ಏಪ್ರಿಲ್ 2021, 14:10 IST
Last Updated 6 ಏಪ್ರಿಲ್ 2021, 14:10 IST
ವ್ಹೀಲ್ ಚೇರ್‌ನಲ್ಲಿ ಮುಖ್ತಾರ್ ಅನ್ಸಾರಿ
ವ್ಹೀಲ್ ಚೇರ್‌ನಲ್ಲಿ ಮುಖ್ತಾರ್ ಅನ್ಸಾರಿ   

ಚಂಡೀಗಡ(ಪಿಟಿಐ): ಪಂಜಾಬ್‌ನ ರೂಪ್‌ನಗರದ ಜೈಲಿನಲ್ಲಿರುವ ಪಾತಕಿ ಹಾಗೂ ರಾಜಕಾರಣಿ ಮುಖ್ತಾರ್ ಅನ್ಸಾರಿಯನ್ನು ಬಾಂದಾ ಜೈಲಿಗೆ ಸ್ಥಳಾಂತರಿಸಲು ಉತ್ತರಪ್ರದೇಶ ಪೊಲೀಸರು ಮಂಗಳವಾರ ವಶಕ್ಕೆ ಪಡೆದಿದ್ದಾರೆ.

ಸುಲಿಗೆ ಪ್ರಕರಣಕ್ಕೆ ಸಂಬಂಧಿಸಿದಂತೆ 2019ರ ಜನವರಿಯಿಂದ ರೂಪ್‌ನಗರ ಜೈಲಿನಲ್ಲಿರುವ ಅನ್ಸಾರಿಯನ್ನು ಉತ್ತರಪ್ರದೇಶ ಪೊಲೀಸರಿಗೆ ಹಸ್ತಾಂತರಿಸಲಾಗಿದೆ. ಆರೋಪಿಯನ್ನು ಆಂಬುಲೆನ್ಸ್‌ನಲ್ಲಿ ಪೊಲೀಸರು ಕರೆದೊಯ್ದಿದ್ದಾರೆ ಎಂದು ಪಂಜಾಬ್ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರು (ಕಾರಾಗೃಹ) ಪ್ರವೀಣ್ ಕುಮಾರ್ ಸಿನ್ಹಾ ತಿಳಿಸಿದ್ದಾರೆ.

ಅನ್ಸಾರಿ ಕರೆದೊಯ್ಯಲು ಉತ್ತರ ಪ್ರದೇಶದ ಪೊಲೀಸ್ ವಾಹನಗಳು, ಆಂಬುಲೆನ್ಸ್ ಮತ್ತು ವಜ್ರ ವಾಹನಗಳು ಮಧ್ಯಾಹ್ನ 12 ಗಂಟೆ ಸುಮಾರಿಗೆ ರೂಪ್‌ನಗರ ಜೈಲಿಗೆ ಬಂದಿದ್ದವು. ಉತ್ತರಪ್ರದೇಶದ ಪೊಲೀಸ್‌ ಸಿಬ್ಬಂದಿ ಕೂಡ ಮಂಗಳವಾರ ರೂಪ್‌ನಗರ ಜಿಲ್ಲೆಗೆ ಬಂದು, ಬೀಡುಬಿಟ್ಟಿದ್ದರು.

ADVERTISEMENT

ರೂಪ್‌ನಗರ ಜೈಲಿನ ಹೊರಗಡೆ ಮತ್ತು ಜೈಲಿಗೆ ಹೋಗುವ ರಸ್ತೆಯಲ್ಲಿ ಪಂಜಾಬ್ ಪೊಲೀಸರು ಬ್ಯಾರಿಕೇಡ್‌ಗಳನ್ನು ಹಾಕಿ, ಭಾರಿ ಭದ್ರತಾ ವ್ಯವಸ್ಥೆ ಮಾಡಿದ್ದರು.

ಹಲವು ಗಂಭೀರ ಪ್ರಕರಣಗಳಲ್ಲಿ ಭಾಗಿಯಾಗಿರುವ ಆರೋಪಿ ಮುಖ್ತಾರ್‌ ಅನ್ಸಾರಿಯನ್ನು ಉತ್ತರ ಪ್ರದೇಶ ಸರ್ಕಾರಕ್ಕೆ ಹಸ್ತಾಂತರಿಸುವಂತೆ ಮಾರ್ಚ್‌ 26ರಂದು ಸುಪ್ರೀಂಕೋರ್ಟ್‌, ಪಂಜಾಬ್‌ ಸರ್ಕಾರಕ್ಕೆ ಸೂಚಿಸಿತ್ತು.

ಉತ್ತರ ಪ್ರದೇಶದ ಮೌ ಕ್ಷೇತ್ರದ ಬಿಎಸ್‌ಪಿ ಶಾಸಕ ಅನ್ಸಾರಿ ರಾಜ್ಯದಲ್ಲಿ ಮತ್ತು ಇತರೆಡೆ 52 ಪ್ರಕರಣಗಳನ್ನು ಎದುರಿಸುತ್ತಿದ್ದು, ಇದರಲ್ಲಿ 15 ಪ್ರಕರಣಗಳು ವಿಚಾರಣೆಯ ಹಂತದಲ್ಲಿವೆ. 2005ರಲ್ಲಿ ನಡೆದ ಬಿಜೆಪಿ ಶಾಸಕ ಕೃಷ್ಣಾನಂದ ರೈ ಹತ್ಯೆ ಪ್ರಕರಣದಲ್ಲೂ ಅನ್ಸಾರಿ ಆರೋಪಿಯಾಗಿದ್ದಾರೆ.

ಅನ್ಸಾರಿ ಪತ್ನಿ ಸುಪ್ರೀಂ ಮೊರೆ

ಅನ್ಸಾರಿಯನ್ನು ನಕಲಿ ಎನ್‌ಕೌಂಟರ್‌ನಲ್ಲಿ ಪೊಲೀಸರು ಕೊಲ್ಲಬಹುದೆಂಬ ಆತಂಕ ವ್ಯಕ್ತಪಡಿಸಿರುವ ಆತನ ಪತ್ನಿ ಆಫ್ಶಾನ್ ಅನ್ಸಾರಿ, ಪಂಜಾಬ್‌ನಿಂದ ಉತ್ತರಪ್ರದೇಶಕ್ಕೆ ಕರೆತರುವಾಗ ಮಾರ್ಗದಲ್ಲಿ ಅವರ ಜೀವಕ್ಕೆ ಯಾವುದೇ ಅಪಾಯ ಎದುರಾಗದಂತೆ ಭದ್ರತೆಕೊಡಿಸಬೇಕು ಎಂದು ಸುಪ್ರೀಂಕೋರ್ಟ್‌ಗೆ ಮೊರೆ ಇಟ್ಟಿದ್ದಾರೆ.

ಉತ್ತರಪ್ರದೇಶದ ಸರ್ಕಾರದ ಮೇಲೆ ನಂಬಿಕೆ ಇಲ್ಲವೆಂದಿರುವ ಪಾತಕಿ ಅನ್ಸಾರಿಯ ಸಹೋದರ ಹಾಗೂ ಬಿಎಸ್ಪಿ ಸಂಸದ ಅಫ್ಜಲ್‌ ಅನ್ಸಾರಿಯವರು ಮಂಗಳವಾರ ತಮ್ಮ ಸಹೋದರನ ಜೀವದ ಬಗ್ಗೆ ಆತಂಕವಿದೆ ಎಂದಿದ್ದಾರೆ.

‘ನನಗೆ ನ್ಯಾಯಾಂಗದ ಮೇಲೆ ಸಂಪೂರ್ಣ ನಂಬಿಕೆ ಇದೆ. ಆದರೆ, ಸರ್ಕಾರವನ್ನು ನಂಬಲು ಸಾಧ್ಯವಿಲ್ಲ. ಸರ್ಕಾರಕ್ಕೆ ಮುಖ್ತಾರ್ ಮೇಲೆ ಕೆಟ್ಟ ಉದ್ದೇಶವಿದೆ’ ಎಂದು ಗಾಜಿಪುರದ ಲೋಕಸಭಾ ಕ್ಷೇತ್ರದ ಸಂಸದರಾದ ಅಫ್ಜಲ್ ಅನ್ಸಾರಿ ಹೇಳಿದ್ದಾರೆ.

‘ಆಡಳಿತ ಪಕ್ಷದ ಮುಖಂಡರಿಗೆ ಬಹಳ ಆಪ್ತನಾಗಿರುವ ಮತ್ತೊಬ್ಬ ಪಾತಕಿ ಬ್ರಿಜೇಶ್ ಸಿಂಗ್ ವಿರುದ್ಧ ಮುಖ್ತಾರ್ ಧ್ವನಿ ಎತ್ತಿದ್ದರು. ಬ್ರಿಜೇಶ್ ಸಿಂಗ್ ರಕ್ಷಿಸಲು ರಾಜ್ಯ ಸರ್ಕಾರ ನನ್ನ ಸಹೋದರನ ವಿರುದ್ಧ ಪಿತೂರಿ ನಡೆಸುತ್ತಿದೆ’ ಎಂದು ಅವರು ಆರೋಪಿಸಿದ್ದಾರೆ.

ಈ ನಡುವೆ ಮುಖ್ತಾರ್ ಅವರ ಪತ್ನಿ ಆಫ್ಶಾನ್ ಅನ್ಸಾರಿ, ಪಂಜಾಬ್‌ನಿಂದ ಬಾಂದಾ ಜೈಲಿಗೆ ಸಾಗಿಸುವಾಗ ಪತಿಯ ಜೀವದ ಸುರಕ್ಷತೆಯನ್ನು ಖಾತ್ರಿಪಡಿಸಲು ಉತ್ತರಪ್ರದೇಶ ಸರ್ಕಾರಕ್ಕೆ ನಿರ್ದೇಶನ ನೀಡಲು ಕೋರಿ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ಪತಿಯನ್ನು ನಕಲಿ ಎನ್‌ಕೌಂಟರ್‌ನಲ್ಲಿ ಪೊಲೀಸರು ಕೊಲ್ಲಬಹುದೆಂಬ ಆತಂಕವನ್ನು ಅವರು ಅರ್ಜಿಯಲ್ಲಿ ವ್ಯಕ್ತಪಡಿಸಿದ್ದಾರೆ.

ಆಫ್ಶಾನ್ ಈ ಹಿಂದೆ ಇದೇ ರೀತಿ ಆತಂಕ ವ್ಯಕ್ತಪಡಿಸಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರಿಗೆ ಪತ್ರ ಬರೆದಿದ್ದರು. ‘ಕೊಲೆ ಪ್ರಕರಣದಲ್ಲಿ ನನ್ನ ಪತಿ ಪ್ರತ್ಯಕ್ಷ ಸಾಕ್ಷಿಯಾಗಿದ್ದು, ಈ ಪ್ರಕರಣದಲ್ಲಿ ಪಾತಕಿ ಬ್ರಿಜೇಶ್ ಸಿಂಗ್ ಮತ್ತು ಆತನ ಒಬ್ಬ ಸಹಚರ ಪ್ರಮುಖ ಆರೋಪಿಗಳಾಗಿದ್ದಾರೆ’ ಎಂದು ಆಫ್ಶಾನ್‌ ದೂರಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.