ನವದೆಹಲಿ: ಕೇಂದ್ರ ಜಾಗೃತ ಆಯೋಗವು (ಸಿವಿಸಿ) ಭ್ರಷ್ಟಾಚಾರ ಸಂಬಂಧಿತ ದೂರು ನಿರ್ವಹಣೆ ಕಾರ್ಯವಿಧಾನದಲ್ಲಿ ಮಹತ್ವದ ತಿದ್ದುಪಡಿಗಳನ್ನು ಮಾಡಿದ್ದು, ಇನ್ನು ಮುಂದೆ ಭ್ರಷ್ಟಾಚಾರಕ್ಕೆ ಸಂಬಂಧಿಸಿದಂತೆ ದೂರು ನೀಡುವವರು ತಮ್ಮ ಮೊಬೈಲ್ ಸಂಖ್ಯೆ ಒದಗಿಸುವುದನ್ನು ಕಡ್ಡಾಯಗೊಳಿಸಲಾಗಿದೆ.
ಮುಖ್ಯ ಜಾಗೃತ ಅಧಿಕಾರಿಗಳು (ಸಿವಿಒ) ದೂರಿನ ಸ್ಥಿತಿಗತಿ ಕುರಿತು ಆನ್‌ಲೈನ್ ಮೂಲಕ ದೂರುದಾರರಿಗೆಮಾಹಿತಿ ಒದಗಿಸುವ ವ್ಯವಸ್ಥೆಯನ್ನೂ ಮಾಡಲಾಗಿದೆ.
‘ನಾಗರಿಕರು www.portal.cvc.gov.in ಅಥವಾ ಆಯೋಗದ ವೆಬ್‌ಸೈಟ್www.cvc.gov.in ಗೆ ಭೇಟಿ ನೀಡಿದರೆ ಮುಖಪುಟದಲ್ಲಿ ‘lodge complaints’ ಎಂಬ ಲಿಂಕ್ ದೊರೆಯುತ್ತದೆ. ಅದನ್ನು ಕ್ಲಿಕ್ಕಿಸಿ ದೂರು ದಾಖಲಿಸಬಹುದು’ ಎಂದು ಆಯೋಗದ ಆದೇಶದಲ್ಲಿ ತಿಳಿಸಲಾಗಿದೆ.
‘ಅರ್ಜಿಯ ನೈಜತೆ ಪರಿಶೀಲಿಸಿ, ಅದರ ಆಧಾರದಲ್ಲಿ ಯಾವ ಬಗೆಯ ಕ್ರಮ ಕೈಗೊಳ್ಳಬಹುದು ಎಂಬುದನ್ನು ನಿರ್ಧರಿಸಲು ಸಿವಿಒಗಳಿಗೆ ಈ ಮೊದಲು ಒಂದು ತಿಂಗಳ ಕಾಲಾವಕಾಶ ನೀಡಲಾಗುತ್ತಿತ್ತು. ಇದನ್ನು ಈಗ ಎರಡು ತಿಂಗಳಿಗೆ ಹೆಚ್ಚಿಸಲಾಗಿದೆ’ ಎಂದೂ ಹೇಳಲಾಗಿದೆ.
‘ವೆಬ್ ಪೋರ್ಟಲ್ ಮೂಲಕ ದೂರು ದಾಖಲಿಸುವಾಗ ದೂರುದಾರರು ತಮ್ಮ ಮೊಬೈಲ್ ಸಂಖ್ಯೆಯನ್ನು ನಮೂದಿಸುವುದು ಕಡ್ಡಾಯ. ಆ ಸಂಖ್ಯೆಗೆ ಒಟಿಪಿ ಕಳುಹಿಸಲಾಗುತ್ತದೆ. ದೂರಿನ ಅಧಿಕೃತತೆ ಖಾತರಿಪಡಿಸಿಕೊಳ್ಳುವುದು ಇದರ ಉದ್ದೇಶ. ದೂರು ದಾಖಲಾಗಿರುವುದನ್ನು ದೃಢೀಕರಿಸಲು ಆ ಮೊಬೈಲ್ ಸಂಖ್ಯೆಗೆ ಸಂದೇಶ ರವಾನಿಸಲಾಗುತ್ತದೆ. ದೂರಿನ ಉಲ್ಲೇಖ ಸಂಖ್ಯೆಯನ್ನೂ ದೂರುದಾರರಿಗೆ ಕಳುಹಿಸಲಾಗುತ್ತದೆ. ಈ ಸಂಬಂಧ ಕೇಂದ್ರ ಸರ್ಕಾರದ ಎಲ್ಲಾ ಇಲಾಖೆಗಳ ಕಾರ್ಯದರ್ಶಿಗಳಿಗೆ, ಸಾರ್ವಜನಿಕ ವಲಯದ ಬ್ಯಾಂಕ್‌ಗಳ ಮುಖ್ಯ ಕಾರ್ಯನಿರ್ವಾಹಕರಿಗೆ, ವಿಮಾ ಕಂಪನಿಗಳು ಹಾಗೂ ಇತರರಿಗೆ ಸೂಕ್ತ ನಿರ್ದೇಶನಗಳನ್ನು ನೀಡಲಾಗಿದೆ’ ಎಂದು ವಿವರಿಸಲಾಗಿದೆ.
‘ನಾಗರಿಕರು ಜಾಗೃತ ಆಯೋಗದ ಕಾರ್ಯದರ್ಶಿಗಳ ವಿಳಾಸಕ್ಕೆ ಪತ್ರ ಬರೆಯುವ ಮೂಲಕವೂ ದೂರು ದಾಖಲಿಸಬಹುದು.ದೂರನ್ನು ಸೂಕ್ತ ಕ್ರಮಕ್ಕಾಗಿ ಸಿವಿಒಗಳಿಗೆ ವರ್ಗಾಯಿಸಿದ ಸಂದರ್ಭಗಳಲ್ಲಿ ಆ ಕುರಿತ ಮಾಹಿತಿಯನ್ನು ದೂರುದಾರರಿಗೆ ಒದಗಿಸಲಾಗುತ್ತದೆ.ದೂರು ನಿರ್ವಹಣೆ ಕಾರ್ಯವಿಧಾನದಲ್ಲಿನ ತಿದ್ದುಪಡಿಯಿಂದಾಗಿ ನಾಗರಿಕರಿಗೆ ಹೆಚ್ಚು ಅನುಕೂಲವಾಗಲಿದೆ’ ಎಂದೂ ತಿಳಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.