ನವದೆಹಲಿ: ಸರ್ಕಾರದ ವಿವಿಧ ಇಲಾಖೆಗಳ ಭಷ್ಟ ಅಧಿಕಾರಿಗಳ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ತಾನು ನೀಡಿದ್ದ ಸಲಹೆ ಪಾಲನೆಯಾಗದಿರುವ 42 ಪ್ರಕರಣಗಳನ್ನು ಕೇಂದ್ರ ಜಾಗೃತ ಆಯೋಗ (ಸಿವಿಸಿ) ಗಂಭೀರವಾಗಿ ಪರಿಗಣಿಸಿದೆ.
ಇದರಲ್ಲಿ ರೈಲ್ವೆಯ 10 ಮತ್ತು ಕೆನರಾ ಬ್ಯಾಂಕಿನ ಐದು ಪ್ರಕರಣಗಳೂ ಇವೆ. ಅಲ್ಲದೇ ಸಿಂಡಿಕೇಟ್ ಬ್ಯಾಂಕ್, ಬ್ಯಾಂಕ್ ಆಫ್ ಇಂಡಿಯಾ, ಮಹಾನದಿ ಕೋಲ್‌ಫೀಲ್ಡ್ಸ್ ಲಿಮಿಟೆಡ್ ಮತ್ತು ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್‌ಒ)ಯಲ್ಲೂ ತಲಾ ಎರಡು ಪ್ರಕರಣಗಳಿವೆ ಎಂದು ವರದಿ ಹೇಳಿದೆ.
ವಿವಿಧ ಬ್ಯಾಂಕ್ ಮತ್ತು ಇಲಾಖೆಗಳಲ್ಲಿನ ಪ್ರಕರಣಗಳ ಪಟ್ಟಿ ಬಿಡುಗಡೆ ಮಾಡಿರುವ ಸಿವಿಸಿ, ‘ಆಯೋಗದ ಸಲಹೆಯನ್ನು ಅಂಗೀಕರಿಸದಿರುವುದು ಅಥವಾ ಆಯೋಗದೊಂದಿಗೆ ಸಮಾಲೋಚಿಸದಿರುವುದು ಜಾಗರೂಕ ಪ್ರಕ್ರಿಯೆಯನ್ನು ಹಾಳುಮಾಡುತ್ತದೆ ಮತ್ತು ಜಾಗೃತ ಆಡಳಿತದ ನಿಷ್ಪಕ್ಷಪಾತವನ್ನು ದುರ್ಬಲಗೊಳಿಸುತ್ತದೆ’ ಎಂದು ಹೇಳಿದೆ.
2020ರ ಸಾಲಿನ ಸಿವಿಸಿಯ ವಾರ್ಷಿಕ ವರದಿಯನ್ನು ಇತ್ತೀಚೆಗೆ ಮುಕ್ತಾಯಗೊಂಡ ಸಂಸತ್ತಿನ ಮುಂಗಾರು ಅಧಿವೇಶನದಲ್ಲಿ ಮಂಡಿಸಲಾಗಿದೆ. ಈ ವರದಿಯನ್ನು ಸಿವಿಸಿ ತನ್ನ ವೆಬ್‌ಸೈಟ್‌ನಲ್ಲಿ ಮಂಗಳವಾರ ಅಪ್‌ಲೋಡ್ ಮಾಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.