ADVERTISEMENT

ಸುಪ್ರೀಂ ಕೋರ್ಟ್‌ಗೆ ಸಿವಿಸಿ ವರದಿ ಸಲ್ಲಿಕೆ: ಅಲೋಕ್‌ ಕಳಂಕ ಕಳಚಿಲ್ಲ

ಇನ್ನೂ ತನಿಖೆ ನಡೆಯಬೇಕಿದೆ

ಪಿಟಿಐ
Published 16 ನವೆಂಬರ್ 2018, 20:20 IST
Last Updated 16 ನವೆಂಬರ್ 2018, 20:20 IST
   

ನವದೆಹಲಿ: ಭ್ರಷ್ಟಾಚಾರದ ಆರೋಪ ಹೊತ್ತಿರುವ ಸಿಬಿಐ ನಿರ್ದೇಶಕ ಅಲೋಕ್‌ ವರ್ಮಾ ಅವರನ್ನು ಕೇಂದ್ರ ಜಾಗೃತ ಆಯೋಗವು (ಸಿವಿಸಿ) ದೋಷಮುಕ್ತಗೊಳಿಸಿಲ್ಲ ಎಂದು ಸುಪ್ರೀಂ ಕೋರ್ಟ್‌ ಶುಕ್ರವಾರ ಹೇಳಿದೆ.

ಆರೋಪಗಳ ಬಗ್ಗೆ ಸಿವಿಸಿ ವಿಸ್ತೃತವಾದ ತನಿಖಾ ವರದಿ ಸಲ್ಲಿಸಿದೆ. ಕೆಲವು ಆರೋಪಗಳು ನಿರಾಧಾರ ವಾದರೆ, ಇನ್ನು ಕೆಲವು ಆರೋಪಗಳಿಗೆ ಆಧಾರ ಇದ್ದಂತೆ ಕಾಣಿಸುತ್ತಿದೆ ಎಂದು ಪ್ರಾಥಮಿಕ ವರದಿ ಅಭಿಪ್ರಾಯಪಟ್ಟಿದೆ ಎಂದು ಮುಖ್ಯ ನ್ಯಾಯಮೂರ್ತಿ ರಂಜನ್‌ ಗೊಗೊಯಿ ನೇತೃತ್ವದ ಪೀಠ ಹೇಳಿದೆ.

ಈ ವರದಿಯನ್ನು ಮುಚ್ಚಿದ ಲಕೋಟೆಯಲ್ಲಿ ಸುಪ್ರೀಂ ಕೋರ್ಟ್‌ಗೆ ಸಲ್ಲಿಸಲಾಗಿತ್ತು. ಈ ಗೋಪ್ಯ ವರದಿಯನ್ನು ಮುಚ್ಚಿದ ಲಕೋಟೆಯಲ್ಲಿಯೇ ಅಲೋಕ್‌ ವರ್ಮಾ ಅವರಿಗೆ ನೀಡಲಾಗಿದೆ. ವರದಿಯ ಬಗ್ಗೆ ಏನನ್ನಾದರೂ ಹೇಳುವುದಿದ್ದರೆ ಸೋಮವಾರ ಮಧ್ಯಾಹ್ನ 1 ಗಂಟೆಯ ಒಳಗೆ ಹೇಳಬೇಕು ಎಂದು ಪೀಠ ವರ್ಮಾ ಅವರಿಗೆ ಸೂಚಿಸಿದೆ.

ADVERTISEMENT

ಕೆಲವು ಆರೋಪಗಳ ಬಗ್ಗೆ ಇನ್ನಷ್ಟು ತನಿಖೆ ಮಾಡುವ ಅಗತ್ಯ ಇದೆ ಎಂದೂ ಸಿವಿಸಿ ಹೇಳಿದೆ. ವಿಚಾರಣೆಯನ್ನು ಪೀಠವು ಇದೇ 20ಕ್ಕೆ ಮುಂದೂಡಿದೆ.

ಅಲೋಕ್‌ ವರ್ಮಾ ಮತ್ತು ಸಿಬಿಐ ವಿಶೇಷ ನಿರ್ದೇಶಕ ರಾಕೇಶ್‌ ಅಸ್ತಾನಾ ನಡುವೆ ತೀವ್ರ ಕಿತ್ತಾಟದ ಬಳಿಕ ಈ ಇಬ್ಬರನ್ನೂ ಸರ್ಕಾರ ಕಡ್ಡಾಯ ರಜೆಯ ಮೇಲೆ ಕಳುಹಿಸಿತ್ತು. ಈ ಕ್ರಮವನ್ನು ಪ್ರಶ್ನಿಸಿ ವರ್ಮಾ ಅವರು ಸುಪ್ರೀಂ ಕೋರ್ಟ್‌ಗೆ ದೂರು ಸಲ್ಲಿಸಿದ್ದರು. ವರ್ಮಾ ವಿರುದ್ಧ ಅಸ್ತಾನಾ ಅವರು ಭ್ರಷ್ಟಾಚಾರದ ಆರೋಪ ಮಾಡಿದ್ದರು.

ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಎ.ಕೆ.ಪಟ್ನಾಯಕ್‌ ಅವರು ತನಿಖೆಯ ಉಸ್ತುವಾರಿ ನೋಡಿಕೊಂಡಿದ್ದರು.ಸಿವಿಸಿ ವರದಿಯ ಪ್ರತಿಯನ್ನು ಸರ್ಕಾರಕ್ಕೆ ನೀಡಲಾಗಿದೆ. ಆದರೆ, ವರದಿಗೆ ಕೇಂದ್ರ ಸರ್ಕಾರ ಪ್ರತಿಕ್ರಿಯೆ ಕೊಡುವ ಅಗತ್ಯ ಇಲ್ಲ ಎಂದು ಪೀಠ ಸ್ಪಷ್ಟಪಡಿಸಿದೆ.

ಅಸ್ತಾನಾಗೂ ವರದಿ ಸಿಗಲಿಲ್ಲ

ಸಿವಿಸಿ ವರದಿಯನ್ನು ಅತ್ಯಂತ ಗೋಪ್ಯವಾಗಿಯೇ ಇರಿಸಬೇಕು ಎಂದು ಪೀಠ ಸೂಚಿಸಿದೆ. ಸಿಬಿಐಯಂತಹ ಸಂಸ್ಥೆಯ ಘನತೆ ಕಾಪಾಡುವುದು ಮತ್ತು ಈ ಸಂಸ್ಥೆಯ ಮೇಲೆ ಜನರಿಗೆ ಇರುವ ವಿಶ್ವಾಸ ಉಳಿಸಿಕೊಳ್ಳುವುದು ಬಹಳ ಮುಖ್ಯ ಎಂದು ಪೀಠ ಹೇಳಿದೆ. ಹಾಗಾಗಿಯೇ, ರಾಕೇಶ್‌ ಅಸ್ತಾನಾ ಅವರಿಗೆ ವರದಿಯ ಪ್ರತಿ ನೀಡಲು ಪೀಠ ಒಪ್ಪಲಿಲ್ಲ.

ವರದಿ ಹೇಳಿದ್ದೇನು?

*ಕೆಲವು ಆರೋಪಗಳು ನಿರಾಧಾರ

*ಕೆಲವು ಆರೋಪಗಳಿಗೆ ಗಟ್ಟಿ ಆಧಾರ ಇದ್ದಂತೆ ಕಾಣಿಸುತ್ತಿದೆ

*ಕೆಲವು ಆರೋಪಗಳ ಬಗ್ಗೆ ಇನ್ನಷ್ಟು ತನಿಖೆ ಆಗಬೇಕಿದೆ

*ನಿವೃತ್ತ ನ್ಯಾಯಮೂರ್ತಿ ಪಟ್ನಾಯಕ್‌ ಅವರು ಪ್ರತ್ಯೇಕ ಟಿಪ್ಪಣಿ ಸಲ್ಲಿಸಿದ್ದಾರೆ

ಸಿಬಿಐಗೆ ಆಂಧ್ರ ಬಾಗಿಲು ಬಂದ್‌

ಹೈದರಾಬಾದ್‌: ಎನ್‌ಡಿಎ ಮೈತ್ರಿಕೂಟದಿಂದ ಇತ್ತೀಚೆಗೆ ಹೊರಗೆ ಬಂದು ಬಿಜೆಪಿಯೇತರ ಪಕ್ಷಗಳ ಮೈತ್ರಿಕೂಟ ರಚಿಸಲು ಪ್ರಯತ್ನಿಸುತ್ತಿರುವ ಆಂಧ್ರ ಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ಕೇಂದ್ರದ ವಿರುದ್ಧ ಬಹಿರಂಗ ಸಮರಕ್ಕೆ ನಿಂತಿದ್ದಾರೆ. ಸಿಬಿಐಗೆ ಆಂಧ್ರ ಪ್ರದೇಶದ ಬಾಗಿಲು ಬಂದ್‌ ಮಾಡಿದ್ದಾರೆ.

ಆಂಧ್ರ ಪ್ರದೇಶದಲ್ಲಿ ತನಿಖೆ ನಡೆಸುವುದಕ್ಕೆ ಸಿಬಿಐಗೆ ನೀಡಲಾಗಿದ್ದ ‘ಮುಕ್ತ ಸಮ್ಮತಿ’ಯನ್ನು ಅಲ್ಲಿನ ಸರ್ಕಾರ ವಾಪಸ್‌ ಪಡೆದಿದೆ. ರಾಜ್ಯದಲ್ಲಿ ತನಿಖೆ ನಡೆಸುವುದಕ್ಕೆ ಅವಿಭಜಿತ ಆಂಧ್ರ ಪ್ರದೇಶದ ಸರ್ಕಾರ ಸಮ್ಮತಿ ನೀಡಿತ್ತು. ಈಗ, ಹೊಸ ಆದೇಶದ ಮೂಲಕ ಸಿಬಿಐ ಅಧಿಕಾರಿಗಳು ರಾಜ್ಯಕ್ಕೆ ಪ್ರವೇಶಿಸುವುದನ್ನು ನಿರ್ಬಂಧಿಸಲಾಗಿದೆ.

ದೆಹಲಿ ಪೊಲೀಸ್‌ ಕಾಯ್ದೆ ಪ್ರಕಾರ, ರಾಜ್ಯಗಳಲ್ಲಿ ತನಿಖೆ ನಡೆಸುವ ಅಧಿಕಾರ ಸಿಬಿಐಗೆ ಇಲ್ಲ. ಹಾಗಾಗಿ ಆಂಧ್ರ ಪ್ರದೇಶದಲ್ಲಿ ತನಿಖೆ ನಡೆಸುವುದಕ್ಕಾಗಿ ನೀಡಿದ್ದ ಸಮ್ಮತಿಯನ್ನು ಕಾಲ ಕಾಲಕ್ಕೆ ವಿಸ್ತರಿಸಲಾಗುತ್ತಿತ್ತು.

ರಾಜ್ಯದಲ್ಲಿ ಕೆಲಸ ಮಾಡುತ್ತಿರುವ ಕೇಂದ್ರ ಸರ್ಕಾರದ ಅಧಿಕಾರಿಗಳ ವಿರುದ್ಧದ ಆರೋಪಗಳ ತನಿಖೆ ನಡೆಸುವ ಹೊಣೆಯನ್ನು ರಾಜ್ಯದ ಭ್ರಷ್ಟಾಚಾರ ತಡೆ ಘಟಕಕ್ಕೆ (ಎಸಿಬಿ) ಕೊಡಲಾಗಿದೆ. ಹಾಗಾಗಿ, ಆದಾಯ ತೆರಿಗೆ, ಅಂಚೆ, ಕೇಂದ್ರ ಎಕ್ಸೈಸ್‌ ಮತ್ತು ದೂರಸಂಪರ್ಕ ಇಲಾಖೆಗಳಿಗೆ ಸಂಬಂಧಿಸಿದ ಪ್ರಕರಣಗಳು ಎಸಿಬಿ ವ್ಯಾಪ್ತಿಗೆ ಬಂದಿದೆ.

ಬಿಜೆಪಿ ಜತೆ ಟಿಡಿಪಿ ಸ್ನೇಹ ಕಡಿದುಕೊಂಡ ಬಳಿಕ ಆಂಧ್ರ ಪ್ರದೇಶದ ಹಲವು ಕಡೆ ಸಿಬಿಐ ಅಧಿಕಾರಿಗಳು ಶೋಧ ನಡೆಸಿದ್ದರು. ಟಿಡಿ‍ಪಿ ಮುಖಂಡರಿಗೆ ಹತ್ತಿರವಾಗಿರುವ ಹಲವು ಉದ್ಯಮಿಗಳಿಗೆ ಸೇರಿದ ಸ್ಥಳಗಳಲ್ಲಿಯೂ ತನಿಖೆ ನಡೆದಿತ್ತು. ರಾಜಕೀಯ ದ್ವೇಷ ಸಾಧನೆಗಾಗಿ ಸಿಬಿಐಯನ್ನು ಕೇಂದ್ರ ಸರ್ಕಾರ ಬಳಸಿಕೊಳ್ಳುತ್ತಿದೆ ಎಂದು ಟಿಡಿಪಿ ಆರೋಪಿಸಿದೆ. ‘ಆಪರೇಷನ್‌ ಗರುಡ’ ಎಂಬ ಯೋಜನೆಯನ್ನು ಬಿಜೆಪಿ ರೂಪಿಸಿದೆ. ಸಿಬಿಐಯನ್ನು ಬಳಸಿಕೊಂಡು ನಾಯ್ಡು ಸರ್ಕಾರವನ್ನು ಕಿತ್ತೆಸೆಯುವುದು ಇದರ ಉದ್ದೇಶ ಎಂದು ಆಪಾದಿಸಲಾಗಿದೆ.

ಸರ್ಕಾರದ ಕ್ರಮಕ್ಕೆ ಪ್ರಮುಖ ವಿರೋಧ ಪಕ್ಷ ವೈಎಸ್‌ಆರ್‌ ಕಾಂಗ್ರೆಸ್‌ ಮತ್ತು ಬಿಜೆಪಿ ಆಕ್ರೋಶ ವ್ಯಕ್ತಪಡಿಸಿವೆ. ಯಾವ ಕಾರಣಕ್ಕೆ ಸಿಬಿಐ ಮೇಲೆ ನಿರ್ಬಂಧ ಹೇರಲಾಗಿದೆ ಎಂಬುದನ್ನು ನಾಯ್ಡು ಅವರು ತಿಳಿಸಬೇಕು. ಸಿಬಿಐ ಬಗೆಗಿನ ಭಯವೇ ಈ ನಿರ್ಧಾರಕ್ಕೆ ಕಾರಣ ಎಂದೂ ವೈಎಸ್‌ಆರ್‌ ಕಾಂಗ್ರೆಸ್‌ ಆರೋಪಿಸಿದೆ.

8ರಂದೇ ಸಮ್ಮತಿ ವಾಪಸ್‌:1946ರ ದೆಹಲಿ ವಿಶೇಷ ಪೊಲೀಸ್‌ ಸಂಸ್ಥೆ ಕಾಯ್ದೆ ಅಡಿಯಲ್ಲಿ ಸಿಬಿಐ ಕಾರ್ಯನಿರ್ವಹಿಸುತ್ತದೆ. ಈ ಕಾಯ್ದೆ ಪ್ರಕಾರ ದೆಹಲಿಯ ಹೊರಗೆ ತನಿಖೆ ನಡೆಸಲು ಆಯಾ ರಾಜ್ಯಗಳ ಅನುಮತಿ ಪಡೆದುಕೊಳ್ಳಬೇಕು. ಅದಕ್ಕಾಗಿ ರಾಜ್ಯಗಳು ಸಿಬಿಐಗೆ ‘ಮುಕ್ತ ಸಮ್ಮತಿ’ ನೀಡುತ್ತವೆ. ಇಂತಹ ಸಮ್ಮತಿಯನ್ನು ಆಂಧ್ರ ಪ್ರದೇಶ ಸರ್ಕಾರವು ಆಗಸ್ಟ್‌ 3ರಂದು ನವೀಕರಿಸಿತ್ತು. ಆದರೆ, ಇದೇ 8ರಂದು ಈ ಸಮ್ಮತಿಯನ್ನು ವಾಪಸ್‌ ಪಡೆದು ಆದೇಶ ಹೊರಡಿಸಲಾಗಿದೆ. ಈಗ ಈ ಆದೇಶ ಬಹಿರಂಗವಾಗಿದೆ.

*ತಮ್ಮ ಭ್ರಷ್ಟಾಚಾರ ಬಯಲಿಗೆ ಬಾರದಂತೆ ತಡೆಯುವುದಕ್ಕಾಗಿ ನಾಯ್ಡು ಈ ಕ್ರಮ ಕೈಗೊಂಡಿದ್ದಾರೆ. ಇದು ಅಧಿಕಾರ ದುರುಪಯೋಗದ ಸ್ಪಷ್ಟ ನಿದರ್ಶನ

ಜಿ.ವಿ.ಎಲ್‌. ನರಸಿಂಹ ರಾವ್‌, ಬಿಜೆಪಿ ವಕ್ತಾರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.