ನವದೆಹಲಿ: ‘ದೇಶದಾದ್ಯಂತ ಜಾತಿಗಣತಿ ನಡೆಸಬೇಕು ಎಂಬ ಬೇಡಿಕೆಗೆ ಬೆಂಬಲವಾಗಿ ನಿಲ್ಲುವ ಐತಿಹಾಸಿಕ ತೀರ್ಮಾನವನ್ನು ಕಾಂಗ್ರೆಸ್ ಕಾರ್ಯಕಾರಿ ಸಮಿತಿಯು (ಸಿಡಬ್ಲ್ಯುಸಿ) ಒಕ್ಕೊರಲಿನಿಂದ ಕೈಗೊಂಡಿದೆ’ ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಸೋಮವಾರ ತಿಳಿಸಿದರು.
‘ಜಾತಿಗಣತಿಯ ಪರ ನಿಲುವು ತಾಳುವುದು ಜನರನ್ನು ಬಡತನದಿಂದ ಪಾರು ಮಾಡಲು ಇರುವ ಬಹಳ ಪ್ರಗತಿಪರವಾದ ಹೆಜ್ಜೆ’ ಎಂದು ಬಣ್ಣಿಸಿದ ರಾಹುಲ್, ‘ಆಡಳಿತಾರೂಢ ಬಿಜೆಪಿಯು ಜಾತಿ ಗಣತಿ ನಡೆಸುವಂತೆ ಕಾಂಗ್ರೆಸ್ ಒತ್ತಡ ತರಲಿದೆ’ ಎಂದು ತಿಳಿಸಿದರು.
ಸಿಡಬ್ಲ್ಯುಸಿ ಸಭೆಯ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಾಹುಲ್, ‘ಇಂಡಿಯಾ’ ಗುಂಪಿನ ಬಹುತೇಕ ಪಕ್ಷಗಳು ಜಾತಿ ಗಣತಿಯನ್ನು ಬೆಂಬಲಿಸುತ್ತವೆ ಎಂಬ ವಿಶ್ವಾಸ ಇದೆ’ ಎಂದರು. ‘ಕೆಲವು ಪಕ್ಷಗಳಲ್ಲಿ ಈ ವಿಚಾರವಾಗಿ ತುಸು ಭಿನ್ನವಾದ ನಿಲುವು ಇದ್ದಿರಬಹುದು. ಅದರಿಂದ ಸಮಸ್ಯೆ ಆಗುವುದಿಲ್ಲ. ನಾವು ಹೊಂದಿಕೊಳ್ಳುವ ಧೋರಣೆ ಇರಿಸಿಕೊಂಡಿದ್ದೇವೆ. ಯಾರಿಗಾದರೂ ಭಿನ್ನ ನಿಲುವುಗಳಿದ್ದರೆ ನಮಗೆ ಅದು ಸಮಸ್ಯೆ ಅಲ್ಲ, ನಾವು ಫ್ಯಾಸಿಸ್ಟ್ ಧೋರಣೆಯಿಂದ ವರ್ತಿಸುವುದಿಲ್ಲ’ ಎಂದು ಹೇಳಿದರು.
‘ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ನೇತೃತ್ವದ ಸರ್ಕಾರವು ದೇಶದಾದ್ಯಂತ ಜಾತಿಗಣತಿ ನಡೆಸಬೇಕು. ಇಲ್ಲ ಎಂದಾದರೆ, ಗಣತಿಯ ಕೆಲಸ ಮಾಡಲು ಕಾಂಗ್ರೆಸ್‌ಗೆ ಅವಕಾಶ ಕೊಡಬೇಕು’ ಎಂದು ಹೇಳಿದರು.
ಜಾತಿಗಣತಿಯು ಜಾತಿ ಧರ್ಮಕ್ಕೆ ಸಂಬಂಧಿಸಿದ್ದಲ್ಲ. ಇದು ಬಡತನಕ್ಕೆ ಸಂಬಂಧಿಸಿದ್ದು. ಒಬಿಸಿ ವರ್ಗ ದಲಿತರು ಆದಿವಾಸಿಗಳು ಮತ್ತು ಬಡವರಿಗಾಗಿ ಇದನ್ನು ಮಾಡಲಾಗುತ್ತಿದೆ. ಇದರ ಹಿಂದೆ ರಾಜಕೀಯ ಲೆಕ್ಕಾಚಾರಗಳಿಲ್ಲ.–ರಾಹುಲ್ ಗಾಂಧಿ ಕಾಂಗ್ರೆಸ್ ಮುಖಂಡ
‘ಜಾತಿಗಣತಿಯನ್ನು ನಡೆಸಲು ಪ್ರಧಾನಿ ನರೇಂದ್ರ ಮೋದಿ ಅಸಮರ್ಥರು, ಅದನ್ನು ನಡೆಸುವ ವಿಚಾರವಾಗಿ ಅವರಿಗೆ ಹೆದರಿಕೆ ಇದೆ. ಜಾತಿಗಣತಿಯ ವಿಚಾರದಿಂದ ಜನರ ಗಮನ ಬೇರೆಡೆ ತಿರುಗಿಸಲು ಅವರು ಯತ್ನಿಸುತ್ತಿದ್ದಾರೆ’ ಎಂದು ಆರೋಪಿಸಿದರು. ‘ಜಾತಿಗಣತಿಗೆ ಬೆಂಬಲ ನೀಡುವ ಸಿಡಬ್ಲ್ಯುಸಿ ತೀರ್ಮಾನವನ್ನು ಪಕ್ಷವು ಅಧಿಕಾರದಲ್ಲಿ ಇರುವ ರಾಜ್ಯಗಳಲ್ಲಿ ಮುಂದಿನ ಹಂತಕ್ಕೆ ಒಯ್ಯಲಾಗುತ್ತದೆ’ ಎಂದರು.
ಸಂಪತ್ತಿನ ಗಣತಿ: ‘ಜಾತಿಗಣತಿ ನಡೆಸಿದ ನಂತರ ಕಾಂಗ್ರೆಸ್ ಪಕ್ಷವು ಸಂಪತ್ತಿನ ಗಣತಿಯನ್ನು ಕೂಡ ನಡೆಸಲಿದೆ. ಸಂಪತ್ತು ಮತ್ತು ಆಸ್ತಿಗಳು ಯಾರ ಬಳಿ ಇವೆ ಎಂಬುದನ್ನು ಕಂಡುಕೊಳ್ಳಲಿದೆ’ ಎಂದು ರಾಹುಲ್ ತಿಳಿಸಿದರು.
ಅಧಿಕಾರದಲ್ಲಿ ಇದ್ದಾಗ ಜಾತಿಗಣತಿಯನ್ನು ನಡೆಸದೆ ಇದ್ದುದು ಒಂದು ಲೋಪ ಎಂಬುದನ್ನು ಒಪ್ಪಿಕೊಂಡ ರಾಹುಲ್, ‘ಹಿಂದೆ ಮಾಡಲು ಆಗದೆ ಇದ್ದುದನ್ನು ನಾವು ಮುಂದೆ ಮಾಡುತ್ತೇವೆ. ಎಲ್ಲರಿಗೂ ನ್ಯಾಯ ಸಿಗುವ ರೀತಿಯಲ್ಲಿ ಅಭಿವೃದ್ಧಿಯ ಹೊಸ ಮಾದರಿಯನ್ನು ರೂಪಿಸಲು ಜಾತಿ ಗಣತಿ ಅಗತ್ಯ’ ಎಂದರು.
‘ದೇಶದಲ್ಲಿ ದಲಿತರು, ಇತರೆ ಹಿಂದುಳಿದ ವರ್ಗಗಳು (ಒಬಿಸಿ) ಹಾಗೂ ಆದಿವಾಸಿಗಳಿಗೆ ಅವರ ಜನಸಂಖ್ಯೆಯ ಪ್ರಮಾಣಕ್ಕೆ ಅನುಗುಣವಾಗಿ ಹಕ್ಕುಗಳು ದೊರೆತಿಲ್ಲ ಎಂದು ನಾವು ಭಾವಿಸಿದ್ದೇವೆ. ಇದು ನಮ್ಮ ಅನುಮಾನ, ಈ ಅನುಮಾನದಲ್ಲಿ ಸತ್ಯವಿದೆಯೇ ಎಂಬುದನ್ನು ತಿಳಿಯಬೇಕಿದೆ. ಜಾತಿ ಗಣತಿಯನ್ನು ನಡೆಸಲು ನರೇಂದ್ರ ಮೋದಿ ಹೆದರುತ್ತಿದ್ದಾರೆ’ ಎಂದು ರಾಹುಲ್ ಟೀಕಿಸಿದರು.
‘ಪತ್ರಕರ್ತರಲ್ಲಿ ದಲಿತರು ಎಷ್ಟು?
ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಅವರು ಸೋಮವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಪಾಲ್ಗೊಂಡಿದ್ದ ಪತ್ರಕರ್ತರ ಪೈಕಿ ದಲಿತ ಹಾಗೂ ಇತರೆ ಹಿಂದುಳಿದ ವರ್ಗಗಳಿಗೆ (ಒಬಿಸಿ) ಸೇರಿದವರು ಎಷ್ಟು ಜನ ಇದ್ದಾರೆ ಎಂಬುದನ್ನು ಕೈ ಎತ್ತಿ ತೋರಿಸುವಂತೆ ಕೇಳಿದರು. ಸಮಾಜದ ದುರ್ಬಲ ವರ್ಗಗಳಿಗೆ ಸೇರಿದ ಜನರಿಗೆ ದೇಶದ ಸಂಸ್ಥೆಗಳಲ್ಲಿ ಸರಿಯಾದ ಪ್ರಾತಿನಿಧ್ಯ ಸಿಗುತ್ತಿಲ್ಲ ಎಂಬ ಸಂದೇಶ ರವಾನಿಸಲು ಅವರು ಈ ಪ್ರಶ್ನೆ ಕೇಳಿದರು.
‘ದಲಿತರು ಆದಿವಾಸಿಗಳು ಮತ್ತು ಒಬಿಸಿ ವರ್ಗಗಳಿಗೆ ಸೇರಿದವರು ದೇಶದ ಆಸ್ತಿಯಲ್ಲಿ ಹಾಗೂ ಸಂಸ್ಥೆಗಳಲ್ಲಿ ಎಷ್ಟು ಪಾಲು ಹೊಂದಿದ್ದಾರೆ ಎಂಬ ಪ್ರಶ್ನೆಯನ್ನು ಕಾಂಗ್ರೆಸ್ ಕೇಳುತ್ತಿದೆ’ ಎಂದು ಪ್ರಶ್ನೆಯೊಂದಕ್ಕೆ ಉತ್ತರವಾಗಿ ರಾಹುಲ್ ತಿಳಿಸಿದರು.
‘ಈ ಕೊಠಡಿಯಲ್ಲಿ ಎಷ್ಟು ಮಂದಿ ದಲಿತರಿದ್ದೀರಿ? ಒಬಿಸಿ ವರ್ಗಗಳಿಗೆ ಸೇರಿದವರು ಎಷ್ಟು ಜನ ಇದ್ದೀರಿ? ನಿಮ್ಮ ಕೈ ಎತ್ತಿ ತೋರಿಸಿ... ಅಲ್ಲಿ ಒಬ್ಬರು ಕ್ಯಾಮೆರಾ ಸಿಬ್ಬಂದಿ ಇದ್ದಾರೆ ಅವರ ಬಗ್ಗೆ ನಾನು ಮಾತನಾಡುತ್ತಿಲ್ಲ. ನಾನು ನಿಮ್ಮ ಬಗ್ಗೆ (ಪತ್ರಕರ್ತರನ್ನು ಉದ್ದೇಶಿಸಿ) ಮಾತನಾಡುತ್ತಿದ್ದೇನೆ’ ಎಂದು ರಾಹುಲ್ ಹೇಳಿದರು.
ದೇಶದಾದ್ಯಂತ ಜಾತಿಗಣತಿ ನಡೆಸುವುದರ ಪರವಾಗಿ ತಾವು ನೂರರಕ್ಕೆ ನೂರರಷ್ಟು ನಿಲ್ಲುವುದಾಗಿ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರು ಸಿಡಬ್ಲ್ಯುಸಿ ಸಭೆಯಲ್ಲಿ ಹೇಳಿದ್ದಾರೆ ಎಂದು ಮೂಲಗಳು ತಿಳಿಸಿವೆ. ಜಾತಿಗಣತಿ ನಡೆಸುವುದು ಪಕ್ಷದ ಪಾಲಿಗೆ ಅತ್ಯಂತ ಹೆಚ್ಚಿನ ಆದ್ಯತೆಯ ಕೆಲಸ ಆಗಬೇಕು ಎಂದು ಅವರು ಹೇಳಿದ್ದಾರೆ ಎನ್ನಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.