ADVERTISEMENT

ತಮಿಳುನಾಡಿಗೆ ಕಾವೇರಿ: ಫೆಬ್ರುವರಿಯಲ್ಲಿ ನಿತ್ಯ 998 ಕ್ಯು. ನೀರು ಹರಿಸಲು ಶಿಫಾರಸು

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 18 ಜನವರಿ 2024, 10:18 IST
Last Updated 18 ಜನವರಿ 2024, 10:18 IST
<div class="paragraphs"><p>ಕಾವೇರಿ ನದಿ</p></div>

ಕಾವೇರಿ ನದಿ

   

ನವದೆಹಲಿ: ಕರ್ನಾಟಕವು ಫೆಬ್ರುವರಿಯಲ್ಲಿ ತಮಿಳುನಾಡಿಗೆ ನಿತ್ಯ 998 ಕ್ಯುಸೆಕ್‌ನಷ್ಟು ಕಾವೇರಿ ನೀರನ್ನು ಹರಿಸುವಂತೆ ಕಾವೇರಿ ನೀರು ನಿಯಂತ್ರಣ ಸಮಿತಿಯು ಶಿಫಾರಸು ಮಾಡಿದೆ.

‘ಕರ್ನಾಟಕದ ನಾಲ್ಕು ಜಲಾನಯನ ಪ್ರದೇಶಗಳಲ್ಲಿ ಜ. 17ರವರೆಗೂ ಶೇ 52.592ರಷ್ಟು ಮಳೆ ಕೊರತೆ ಉಂಟಾಗಿದೆ. ಮೆಟ್ಟೂರು ಹಾಗೂ ಭವಾನಿ ಸಾಗರ ಜಲಾಶಯದಲ್ಲಿ 50.805 ಟಿಎಂಸಿ ಯಷ್ಟು ನೀರಿದೆ. ಇದು ತಮಿಳುನಾಡಿನ ನೀರಾವರಿ ಯೋಜನೆಗಳಿಗೆ ಸಾಕು’ ಎಂದು ಕರ್ನಾಟಕ ವಾದ ಮಂಡಿಸಿತು.

ADVERTISEMENT

‘ತಮಿಳುನಾಡಿಗೆ ಆಗ್ನೇಯ ಮುಂಗಾರು ಮಾರುತ ಉತ್ತಮವಾಗಿದ್ದು ಮೂರು ಜಲಾಶಯಗಳಿಗೆ ಸಾಕಷ್ಟು ನೀರು ಹರಿದುಬಂದಿದೆ. ತಮಿಳುನಾಡಿಗೆ ಹೋಲಿಸಿದಲ್ಲಿ ಕರ್ನಾಟಕಕ್ಕೆ ಈ ಬಾರಿ ಮಳೆ ಕೊರತೆ ಎದುರಾಗಿದೆ. ರಾಜ್ಯದಲ್ಲಿ ಕೃಷಿ ಚಟುವಟಿಕೆಗಳಿಗೆ, ಕುಡಿಯುವ ನೀರು ಹಾಗೂ ಕೈಗಾರಿಕೆಗಳಿಗೆ ನೀರು ಪೂರೈಕೆಗೆ ಸಮಸ್ಯೆ ಎದುರಾಗಿದೆ. ಹೀಗಾಗಿ ರಾಜ್ಯದ ಜಲಾಶಯಗಳಿಂದ ಇನ್ನೂ ಹೆಚ್ಚಿನ ನೀರು ಬಿಡುವುದು ಅಸಾಧ್ಯ’ ಎಂದು ಸಮಿತಿ ಮುಂದೆ ಕರ್ನಾಟಕ ತನ್ನ ವಾದ ಮಂಡಿಸಿತು.

‘ಕರ್ನಾಟಕವು ಜ. 19ರಿಂದ ಮೇವರೆಗೆ ಬಾಕಿ ಉಳಿದ 19 ಟಿಎಂಸಿ ನೀರು (ಬ್ಯಾಕ್‌ಲಾಗ್‌ 7.61 ಟಿಎಂಸಿ) ಬಿಡಬೇಕು’ ಎಂದು ತಮಿಳುನಾಡು ಪಟ್ಟು ಹಿಡಿಯಿತು.

ಕಾವೇರಿ ಜಲವಿವಾದಗಳ ನ್ಯಾಯಮಂಡಳಿ ಆದೇಶವನ್ನು ಬದಲಿಸಿದ ಸುಪ್ರೀಂ ಕೋರ್ಟ್‌ನ ಆದೇಶದಂತೆ ಅಂತರರಾಜ್ಯ ಗಡಿ ಭಾಗದಲ್ಲಿರುವ ಬಿಳಿಗುಂಡ್ಲುಗೆ ಸೂಚಿಸಿದ ಪ್ರಮಾಣದಷ್ಟು ನೀರನ್ನು ಕರ್ನಾಟಕ ಬಿಡುಗಡೆ ಮಾಡಬೇಕು. 2024ರ ಜನವರಿಯಿಂದ ಫೆಬ್ರುವರಿವರೆಗೆ ತಮಿಳುನಾಡಿಗೆ ಒಟ್ಟು 1182 ಕ್ಯುಸೆಕ್ ನೀರು ಹರಿಸಬೇಕು. ಅದರಲ್ಲಿ ಜನವರಿಯಲ್ಲಿ 998 ಕ್ಯುಸೆಕ್ ನೀರನ್ನು ಪ್ರತಿದಿನ ಹರಿಸಬೇಕು ಎಂದು ಸಮಿತಿ ಶಿಫಾರಸು ಮಾಡಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.