ADVERTISEMENT

Cauvery: 38 ದಿನಗಳಲ್ಲಿ 10.44 ಟಿಎಂಸಿ ಅಡಿ ಕಾವೇರಿ ನೀರು ಬಿಡಲು ಶಿಫಾರಸು

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 23 ನವೆಂಬರ್ 2023, 9:55 IST
Last Updated 23 ನವೆಂಬರ್ 2023, 9:55 IST
   

ನವದೆಹಲಿ: ಸುಪ್ರೀಂ ಕೋರ್ಟ್‌ ಮಾರ್ಪಡಿಸಿರುವ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಆದೇಶವನ್ನು ನವೆಂಬರ್‌ ಹಾಗೂ ಡಿಸೆಂಬರ್‌ ತಿಂಗಳಲ್ಲಿ ಕರ್ನಾಟಕ ಪಾಲನೆ ಮಾಡಬೇಕು ಎಂದು ಕಾವೇರಿ ನೀರು ನಿಯಂತ್ರಣ ಸಮಿತಿ ಗುರುವಾರ ಶಿಫಾರಸು ಮಾಡಿದೆ. ಇದರ ಪ್ರಕಾರ, ಕರ್ನಾಟಕವು ತಮಿಳುನಾಡಿಗೆ ಮುಂದಿನ 38 ದಿನಗಳಲ್ಲಿ ಒಟ್ಟು 10.44 ಟಿಎಂಸಿ ಅಡಿ ನೀರು ಬಿಡಬೇಕಿದೆ. 

ಕಾವೇರಿ ನ್ಯಾಯಮಂಡಳಿಯ 2007ರ ಫೆ.5ರ ಅಂತಿಮ ತೀರ್ಪಿನ ಅನ್ವಯ ಸಾಮಾನ್ಯ ಜಲವರ್ಷ
ದಲ್ಲಿ ಕಾವೇರಿಯಿಂದ ತಮಿಳುನಾಡಿಗೆ 192 ಟಿಎಂಸಿ ಅಡಿ ಹರಿಸಬೇಕು. ಈ ನೀರಿನ ಪ್ರಮಾಣದ ಹಂಚಿಕೆಯನ್ನು ಪ್ರಶ್ನಿಸಿ ಕರ್ನಾಟಕ ಸರ್ಕಾರವು ಸುಪ್ರೀಂ ಕೋರ್ಟ್‌ಗೆ ವಿಶೇಷ ಮೇಲ್ಮನವಿ ಸಲ್ಲಿಸಿತ್ತು. ಪ್ರತಿವರ್ಷ 177.25 ಟಿಎಂಸಿ ಅಡಿ ನೀರು ಹರಿಸುವಂತೆ ಸುಪ್ರೀಂ ಕೋರ್ಟ್‌ 2018ರ ಫೆ. 16ರಂದು ತೀರ್ಪು ನೀಡಿತ್ತು. ಈ ಆದೇಶದ ಪ್ರಕಾರ, ನವೆಂಬರ್‌ ತಿಂಗಳಲ್ಲಿ 15 ಟಿಎಂಸಿ ಹಾಗೂ ಡಿಸೆಂಬರ್‌ನಲ್ಲಿ 7 ಟಿಎಂಸಿ ಅಡಿ ನೀರು ಬಿಡಬೇಕು. ರಾಜ್ಯವು ಈ ವರ್ಷ ನವೆಂಬರ್‌ ತಿಂಗಳಲ್ಲಿ 11.50 ಟಿಎಂಸಿ ನೀರು ಬಿಟ್ಟಿದೆ. ಉಳಿದ ಎಂಟು ದಿನಗಳಲ್ಲಿ 3.5 ಟಿಎಂಸಿ ನೀರು ಬಿಡಬೇಕು. ಸಮಿತಿಯ ಶಿಫಾರಸಿನ ‍ಪ್ರಕಾರ, ರಾಜ್ಯವು ಪ್ರತಿದಿನ 3,216 ಕ್ಯೂಸೆಕ್‌ ಕಾವೇರಿ ನೀರನ್ನು ಹರಿಸಬೇಕಿದೆ. 

ಹಾರಂಗಿ, ಹೇಮಾವತಿ, ಕೆಆರ್‌ಎಸ್‌ ಹಾಗೂ ಕಬಿನಿ ಜಲಾಶಯಗಳಲ್ಲಿ ಕಳೆದ ವರ್ಷ ನವೆಂಬರ್‌ 23ರಂದು 96.82 ಟಿಎಂಸಿ ಅಡಿ ನೀರಿತ್ತು. ಆದರೆ, ಈ ವರ್ಷ 56 ಟಿಎಂಸಿ ನೀರು ಇದೆ. ಒಳಹರಿವಿನ ಪ್ರಮಾಣ 2,230 ಕ್ಯೂಸೆಕ್‌ ಇದ್ದರೆ, ಹೊರಹರಿವು 7,840 ಕ್ಯೂಸೆಕ್‌ನಷ್ಟಿದೆ. ಬೆಂಗಳೂರಿನ ಕುಡಿಯುವ ನೀರಿನ ಬೇಡಿಕೆ ಪೂರೈಸಲು ಜೂನ್‌ ತನಕ 12 ಟಿಎಂಸಿ ಅಡಿ ನೀರು ಬೇಕಿದೆ. 

ADVERTISEMENT

ರಾಜ್ಯದ ಮಳೆ ಕೊರತೆ ಹಾಗೂ ಬರ ಪರಿಸ್ಥಿತಿಯನ್ನು ಗಮನಿಸಿ ಸಮಿತಿಯು ಕಳೆದ ಕೆಲವು ಸಭೆಗಳಲ್ಲಿ ಕರ್ನಾಟಕದ ವಾದಕ್ಕೆ ಮನ್ನಣೆ ನೀಡಿತ್ತು. ಆದರೆ, ಗುರುವಾರದ ಸಭೆಯಲ್ಲಿ ಹಾಗಾಗಲಿಲ್ಲ. ಸುಪ್ರೀಂ ಕೋರ್ಟ್‌ ಆದೇಶ ‍ಪಾಲನೆಗೆ ಶಿಫಾರಸು ಮಾಡಿದ್ದರಿಂದ ರಾಜ್ಯಕ್ಕೆ ಭಾರಿ ಹಿನ್ನಡೆಯಾಗಿದೆ. 

ಸಮಿತಿಯ ಅಧ್ಯಕ್ಷ ವಿನಿತ್‌ ಗುಪ್ತ ಅಧ್ಯಕ್ಷತೆಯಲ್ಲಿ ಆನ್‌ಲೈನ್‌ ಮೂಲಕ ನಡೆದ ಸಮಿತಿಯ 90ನೇ ಸಭೆಯಲ್ಲಿ ಕರ್ನಾಟಕ ಹಾಗೂ ತಮಿಳುನಾಡು ಜಲಸಂಪನ್ಮೂಲ ಇಲಾಖೆಯ ಅಧಿಕಾರಿಗಳು ಭಾಗಿಯಾದರು. 

‘ಕಾವೇರಿ ಜಲಾನಯನ ಪ್ರದೇಶದ ನಾಲ್ಕು ಜಲಾಶಯಗಳಲ್ಲಿ ನ.22ರ ವರೆಗೆ ಸಂಚಿತ ಒಳಹರಿವಿನ ಕೊರತೆಯು ಶೇ 52ರಷ್ಟು ಇದೆ. ಹವಾಮಾನ ಇಲಾಖೆಯ ಪ್ರಕಾರ, ಅಕ್ಟೋಬರ್ 1ರಿಂದ ತಮಿಳುನಾಡಿನಲ್ಲಿ ಉತ್ತಮ ಮಳೆಯಾಗಿದೆ. ತಮಿಳುನಾಡಿನ ಕುರುವೈ ಬೆಳೆ ಸೆಪ್ಟೆಂಬರ್ ಅಂತ್ಯದಲ್ಲಿ ಕಟಾವು ಆಗಿತ್ತು. ಹೀಗಾಗಿ, ಈ ಬೆಳೆಗೆ ನೀರಿನ ಅವಶ್ಯಕತೆ ಇಲ್ಲ. ಸಾಂಬಾ ಬೆಳೆಯು ಕೊಯಿಲು ಹಂತ ತಲುಪಿದ್ದು, ಡಿಸೆಂಬರ್ ಮೊದಲ ವಾರ ಕೊಯಿಲು ಪೂರ್ಣಗೊಳ್ಳಲಿದೆ’ ಎಂದು ಕರ್ನಾಟಕದ ಅಧಿಕಾರಿಗಳು ಗಮನ ಸೆಳೆದರು. 

ರಾಜ್ಯದ ನಾಲ್ಕು ಜಲಾಶಯಗಳಿಗೆ ಒಳಹರಿವು ಸ್ಥಗಿತಗೊಂಡಿದೆ. ಈ ಜಲಾಶಯಗಳಲ್ಲಿರುವ ನೀರು ನೀರಾವರಿ, ಕುಡಿಯಲು, ಇತರ ಅಗತ್ಯ ಪೂರೈಸಲು ಸಾಕಾಗುವುದಿಲ್ಲ. ತಮಿಳುನಾಡಿಗೆ ನೀರು ಬಿಡಲು ಸಾಧ್ಯವಿಲ್ಲ. ಈ ಸಂಬಂಧ ಸಮಿತಿಯು ನಿರ್ದೇಶನ ನೀಡಬಾರದು’ ಎಂದು ಅವರು ಒತ್ತಾಯಿಸಿದರು. 

‘ಸುಪ್ರೀಂ ಕೋರ್ಟ್‌ ಆದೇಶದ ಪ್ರಕಾರ, ಕರ್ನಾಟಕವು ಈ ವರ್ಷ ಇಲ್ಲಿಯ
ವರೆಗೆ 155 ಟಿಎಂಸಿ ಅಡಿಯಷ್ಟು ನೀರು ಹರಿಸಬೇಕಿತ್ತು. ಆದರೆ, ಹರಿಸಿರುವುದು 63 ಟಿಎಂಸಿ ಅಡಿಯಷ್ಟು. ಸಂಕಷ್ಟ ಸೂತ್ರವನ್ನು ಅನ್ವಯಿಸಿದರೂ 71 ಟಿಎಂಸಿ ನೀರು ಹರಿಸಬೇಕಿತ್ತು. ಈ ಸೂತ್ರದ ಪ್ರಕಾರ, 7 ಟಿಎಂಸಿ ಅಡಿಯಷ್ಟು ನೀರು ಹರಿಸಬೇಕಿದೆ. ಹೀಗಾಗಿ, ಮುಂದಿನ 30 ದಿನ ಕರ್ನಾಟಕವು ಪ್ರತಿ ದಿನವೂ  5,000 ಕ್ಯೂಸೆಕ್ ನೀರು ಬಿಡಬೇಕು’ ಎಂದು ತಮಿಳುನಾಡಿನ ಅಧಿಕಾರಿಗಳು ಪಟ್ಟು ಹಿಡಿದರು. ಇದಕ್ಕೆ ಕರ್ನಾಟಕದ ಅಧಿಕಾರಿಗಳು ಒಪ್ಪಲಿಲ್ಲ.

ಸುಪ್ರೀಂ ಕೋರ್ಟ್ ಆದೇಶದ ಪ್ರಕಾರ, ನವೆಂಬರ್‌ ಉಳಿದ ಅವಧಿ ಹಾಗೂ ಡಿಸೆಂಬರ್ ತಿಂಗಳಲ್ಲಿ ನಿಗದಿತ ಪ್ರಮಾಣದ ಹರಿವನ್ನು ಕರ್ನಾಟಕವು ಖಚಿತಪಡಿಸಬೇಕು ಎಂದು ಸಮಿತಿಯು ಶಿಫಾರಸು ಮಾಡಿತು. 

‘4 ಜಲಾಶಯಗಳಿಂದ ಹೊರ ಹರಿವು ಸಂಪೂರ್ಣ ನಿಂತಿದೆ. ಆದರೆ, ಈ ಜಲಾಶಯಗಳ ಕೆಳ ಪ್ರದೇಶದಲ್ಲಿ (ಅಂದರೆ ಬಿಳಿಗುಂಡ್ಲುವರೆಗೆ) ಆಗಾಗ ಮಳೆಯಾಗುತ್ತಿದೆ. ಇದರಿಂದ, ತಮಿಳುನಾಡಿಗೆ ಪ್ರತಿದಿನ 3 ಸಾವಿರ ಕ್ಯೂಸೆಕ್‌ನಷ್ಟು ನೀರು ಹೋಗುತ್ತಿದೆ. ಇನ್ನೂ ನಾಲ್ಕೈದು ದಿನ ಮಳೆಯಾಗುವ ಮುನ್ಸೂಚನೆ ಇದೆ. ತಮಿಳುನಾಡಿಗೆ ಸಹಜವಾಗಿ ನೀರು ಹರಿದುಹೋಗಲಿದೆ. ಜಲಾಶಯಗಳಿಂದ ನೀರು ಹರಿಸುವ ಪ್ರಮೇಯ ಎದುರಾಗುವುದಿಲ್ಲ’ ಎಂದು ಜಲಸಂಪನ್ಮೂಲ ಇಲಾಖೆಯ ಉನ್ನತ ಅಧಿಕಾರಿಯೊಬ್ಬರು ತಿಳಿಸಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.