ADVERTISEMENT

ಸೈಬರ್ ವಂಚನೆ: ₹ 5,000 ಉಳಿಸಲು ₹ 6 ಲಕ್ಷ ಕಳೆದುಕೊಂಡ ಮುಂಬೈ ಮಹಿಳೆ!

ಪಿಟಿಐ
Published 4 ಅಕ್ಟೋಬರ್ 2024, 13:18 IST
Last Updated 4 ಅಕ್ಟೋಬರ್ 2024, 13:18 IST
<div class="paragraphs"><p>ಪ್ರಾತಿನಿಧಿಕ ಚಿತ್ರ</p></div>

ಪ್ರಾತಿನಿಧಿಕ ಚಿತ್ರ

   

ಮುಂಬೈ: ಗೂಗಲ್‌ನಲ್ಲಿ ಸರ್ಚ್‌ ಮಾಡಿದಾಗ ದೊರೆತ ನಂಬರ್‌ ಅನ್ನು ಸರ್ಕಾರದ ಸಹಾಯವಾಣಿ ಸಂಖ್ಯೆ ಎಂದು ನಂಬಿದ ಮುಂಬೈನ 31 ವರ್ಷದ ಮಹಿಳೆಯೊಬ್ಬರು ₹ 6 ಲಕ್ಷ ಕಳೆದುಕೊಂಡಿದ್ದಾರೆ. ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುವ ಮಹಿಳೆ, ಘೋಟ್ಕೊಪರ್‌ ಪೊಲೀಸ್‌ ಠಾಣೆಗೆ ಬುಧವಾರ ದೂರು ನೀಡಿದ ಬಳಿಕ ಪ್ರಕರಣ ಬೆಳಕಿಗೆ ಬಂದಿದೆ.

ಮುಂಬೈ ಹೊರವಲಯದ ಘೋಟ್ಕೊಪರ್‌ ಪಶ್ಚಿಮದ ಚಿರಾಗ್‌ ನಗರದಲ್ಲಿ ವಾಸವಿರುವ ಮಹಿಳೆ ನೀಡಿರುವ ದೂರನ್ನು ಆಧರಿಸಿ, ಪೊಲೀಸರು ಪ್ರಕರಣದ ಬಗ್ಗೆ ಶುಕ್ರವಾರ ಮಾಹಿತಿ ನೀಡಿದ್ದಾರೆ.

ADVERTISEMENT

ಮಹಿಳೆಯು ತಮ್ಮ ಖಾತೆ ಇರುವ ಬ್ಯಾಂಕ್‌ನ ಮೊಬೈಲ್‌ ಅಪ್ಲಿಕೇಷನ್‌ ಮೂಲಕ ಕಾರ್ಡ್‌ಲೆಸ್‌ ಆಯ್ಕೆ ಬಳಸಿ ಎಟಿಎಂವೊಂದರಲ್ಲಿ ₹ 5,000 ತೆಗೆಯಲು ಸೆಪ್ಟೆಂಬರ್‌ 26ರಂದು ಪ್ರಯತ್ನಿಸಿದ್ದರು. ಆದರೆ, ತಾಂತ್ರಿಕ ದೋಷದಿಂದ ಹಣವು 'ಮುಖ್ಯಮಂತ್ರಿಗಳ ವಿಪತ್ತು ಪರಿಹಾರ ನಿಧಿ'ಯ 'kerlacmdrf.covid@icici' ಯುಪಿಐ ಖಾತೆಗೆ ಜಮೆಯಾಗಿತ್ತು.

ಮಹಿಳೆಯು ಮರುದಿನ, ಯುಪಿಐ ಮಾಹಿತಿ ಹೊಂದಿರುವ ರಾಷ್ಟ್ರೀಯ ಪಾವತಿ ನಿಗಮದ (ಎನ್‌ಪಿಸಿಐ) ಸಹಾಯವಾಣಿ ಸಂಖ್ಯೆಯನ್ನು ಗೂಗಲ್‌ನಲ್ಲಿ ಹುಡುಕಿದ್ದರು. ಅವರಿಗೆ, '1800-41-2222-32' ಸಂಖ್ಯೆ ದೊರೆತಿತ್ತು. ಆ ಸಂಖ್ಯೆಯನ್ನು ಸರ್ಕಾರಿ ಸಂಸ್ಥೆಯ ಸಹಾಯವಾಣಿ ಎಂದು ನಂಬಿ, ಕರೆ ಮಾಡಿದ್ದರು. ಕರೆ ಸ್ವೀಕರಿಸಿದ ವ್ಯಕ್ತಿ ತಮ್ಮನ್ನು ತಾವು ಎನ್‌ಪಿಸಿಐ ಬಾಂದ್ರಾ ಘಟಕದ ಉದ್ಯೋಗಿ ಸುರೇಶ್‌ ಶರ್ಮಾ ಎಂದು ಪರಿಚಯಿಸಿಕೊಂಡು ಮಾತನಾಡಿದ್ದ. ಹಾಗೆಯೇ, ಇನ್ನೊಂದು ಸಂಖ್ಯೆಯಿಂದ ತಮಗೆ ಕರೆ ಬರಲಿದೆ ಎಂದು ತಿಳಿಸಿದ್ದ.

ಅದರಂತೆ, ಅಮಿತ್‌ ಯಾದವ್‌ ಎಂದು ಹೇಳಿಕೊಂಡು ಮತ್ತೊಬ್ಬ ಕರೆ ಮಾಡಿದ್ದ. ಆತ, ಮೊಬೈಲ್‌ ಅಪ್ಲಿಕೇಷನ್‌ವೊಂದನ್ನು ಡೌನ್‌ಲೋಡ್‌ ಮಾಡಿಕೊಳ್ಳುವಂತೆ ಹಾಗೂ ಮೊಬೈಲ್‌ ಸ್ಕ್ರೀನ್‌ ಬಳಸಲು ತನಗೆ ಅನುಮತಿ (Access) ನೀಡುವಂತೆ ಹೇಳಿದ್ದ. ನಂತರ, ಬ್ಯಾಂಕ್‌ ಖಾತೆ, ಮೊಬೈಲ್‌ ಪಾಸ್‌ವರ್ಡ್‌, ಪ್ಯಾನ್‌ ನಂಬರ್‌ ಮತ್ತು ಯುಪಿಐ ವಿವರ ನೀಡುವಂತೆ ಸೂಚಿಸಿದ್ದ. ಇದಾದ ತಕ್ಷಣವೇ, ಆಕೆಯ ಖಾತೆಯಿಂದ ₹ 93,062 ಕಡಿತಗೊಂಡಿತ್ತು. ಆ ಹಣ ವೀರೇಂದ್ರ ರಾಯಕ್ವಾರ್ ಎಂಬವರ ಖಾತೆಗೆ ವರ್ಗಾವಣೆಗೊಂಡಿತ್ತು. ಆದರೆ, ತಮಗಾಗಿಯೇ (ಮಹಿಳೆಗಾಗಿಯೇ) ಆ ಖಾತೆ ತೆರೆಯಲಾಗಿದೆ. ಕಡಿತಗೊಂಡಿರುವ ಅಷ್ಟೂ ಹಣ 24 ಗಂಟೆಗಳಲ್ಲಿ ಮೂಲ ಖಾತೆಗೆ ವರ್ಗಾವಣೆಯಾಗಲಿದೆ ಎಂದು ಯಾದವ್‌ ನಂಬಿಸಿದ್ದ.

ಆದರೆ, 24 ಗಂಟೆ ಕಳೆದರೂ ಹಣ ವಾಪಸ್‌ ಆಗದ ಕಾರಣ ಸೆಪ್ಟೆಂಬರ್‌ 28ರಂದು ಮತ್ತೆ 'ಅದೇ' ಸಹಾಯವಾಣಿ ಸಂಖ್ಯೆಗೆ ಕರೆ ಮಾಡಿ, ಸುರೇಶ್‌ ಶರ್ಮಾ ಜೊತೆ ಮಾತನಾಡಿದ್ದರು. ಆಗ ಆತ, ರಾಕೇಶ್‌ ಕುಮಾರ್‌ ದೊಸರಾ ಎಂಬಾತನ ನಂಬರ್‌ ಅನ್ನು ನೀಡಿದ್ದ. ರಾಕೇಶ್‌ ಸಹ ಮಹಿಳೆಯಿಂದ ಎಲ್ಲ ವಿವರಗಳನ್ನು ಪಡೆದುಕೊಂಡಿದ್ದ. ಮತ್ತೊಮ್ಮೆ, ಮಹಿಳೆಯ ಖಾತೆಯಿಂದ ಹಣ ಕಡಿತಗೊಂಡಿತ್ತು.

ಮತ್ತೆ ಮತ್ತೆ ಇದೇ ರೀತಿ ಮೋಸ ಹೋದ ಮಹಿಳೆ, ಸೆಪ್ಟೆಂಬರ್‌ 26ರಿಂದ 30ರ ನಡುವೆ ₹ 6 ಲಕ್ಷ ಕಳೆದುಕೊಂಡಿದ್ದಾರೆ. ಇಷ್ಟೆಲ್ಲಾ ಆದ ಮೇಲೆ ತಾವು ಸೈಬರ್‌ ಅಪರಾಧ ಜಾಲದಲ್ಲಿ ಸಿಲುಕಿರುವುದು ಅವರಿಗೆ ಮನವರಿಕೆಯಾಗಿದೆ. ನಂತರ ಪೊಲೀಸರಿಗೆ ಬುಧವಾರ ದೂರು ನೀಡಿದ್ದಾರೆ.

ಸೈಬರ್‌ ವಂಚನೆ ಸಂಬಂಧ ಅಪರಿಚಿತ ವ್ಯಕ್ತಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ತನಿಖೆ ಪ್ರಗತಿಯಲ್ಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.