ಹೈದರಾಬಾದ್: ಸರ್ಕಾರದ ಸಂಸ್ಥೆಗಳು, 16.8 ಕೋಟಿ ವೈಯಕ್ತಿಕ ಮಾಹಿತಿಗಳನ್ನೊಳಗೊಂಡ ಸೂಕ್ಷ್ಮ ದತ್ತಾಂಶವನ್ನು ಕದ್ದು, ಮಾರಾಟ ಮಾಡುತ್ತಿದ್ದ ಜಾಲವನ್ನು ತೆಲಂಗಾಣದ ಹೈದರಾಬಾದ್‌ನ ಸೈಬರಾಬಾದ್ ಪೊಲೀಸರು ಭೇದಿಸಿದ್ದಾರೆ.
ಪ್ರಕರಣ ಸಂಬಂಧ ಕೆಲ ಆರೋಪಿಗಳನ್ನು ಬಂಧಿಸಲಾಗಿದೆ.
ರಕ್ಷಣಾ ಇಲಾಖೆಯ ಅಧಿಕಾರಿಗಳ ಮಾಹಿತಿ, ನಾಗರಿಕರ ಮೊಬೈಲ್ ಸಂಖ್ಯೆ ಹಾಗೂ ನೀಟ್ ವಿದ್ಯಾರ್ಥಿಗಳ ಮಾಹಿತಿ ಸೇರಿದಂತೆ 140 ವಿಭಾಗಗಳ ಮಾಹಿತಿಗಳನ್ನು ಈ ಗುಂಪು ಮಾರಾಟ ಮಾಡುತ್ತಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಪ್ಯಾನ್ ಕಾರ್ಡ್ ಡೇಟಾ, ಶಕ್ತಿ ಮತ್ತು ಇಂಧನ ವಲಯ, ಅನಿಲ ಮತ್ತು ಪೆಟ್ರೋಲಿಯಂ ಫ್ರಾಂಚೈಸಿಗಳು, ಡಿಮ್ಯಾಟ್ ಖಾತೆಗಳು, ಬೆಂಗಳೂರಿನ ಗ್ರಾಹಕರು ಸೇರಿದಂತೆ ಮಹಿಳೆಯರ ಡೇಟಾ ಬೇಸ್, ಸಾಲಕ್ಕೆ ಅರ್ಜಿ ಹಾಕಿರುವವರ ಡೇಟಾ, ವಿಮೆ, ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್ ಹೊಂದಿರುವವರು, ಐಟಿ ನೌಕರರು, ವಾಟ್ಸ್‌ಆ್ಯಪ್ಪ್ ಮತ್ತು ಫೇಸ್‌ಬುಕ್ ಬಳಕೆದಾರರು ಹಾಗೂ ನಿಯಮಿತವಾಗಿ ವಿಮಾನದಲ್ಲಿ ಪ್ರಯಾಣಿಸುವವರ ಮಾಹಿತಿಗಳೂ ಇದರಲ್ಲಿವೆ ಎಂದು ಪೊಲೀಸರು ಹೇಳಿದ್ದಾರೆ.
ಆರೋಪಿಗಳು ಜಸ್ಟ್ ಡಯಲ್ ಮತ್ತು ಇತರ ವೇದಿಕೆಗಳ ಮೂಲಕ ದತ್ತಾಂಶಗಳನ್ನು ಮಾರಾಟ ಮಾಡುತ್ತಿದ್ದರು ಎಂದು ಸೈಬರಾಬಾದ್ ಪೊಲೀಸ್ ಕಮೀಷನರ್ ಸ್ಟೀಫನ್ ರವೀಂದ್ರ ಹೇಳಿದ್ದಾರೆ.
‘ಇವುಗಳು ಅತ್ಯಂತ ಸೂಕ್ಷ್ಮ ಡೇಟಾ ಆಗಿದ್ದು, ಪ್ರಮುಖ ಸಂಸ್ಥೆಗಳು ಹಾಗೂ ಕಂಪನಿಗಳಿಗೆ ಅನಧಿಕೃತ ಪ್ರವೇಶಕ್ಕೆ ಅನುವುಮಾಡಿಕೊಡುತ್ತವೆ. ರಕ್ಷಣಾ ಮತ್ತು ಸರ್ಕಾರಿ ನೌಕರರ ಡೇಟಾವನ್ನು ಬೇಹುಗಾರಿಕೆಗೆ ಬಳಸಬಹುದಾಗಿದೆ. ಅಲ್ಲದೆ, ರಾಷ್ಟ್ರೀಯ ಭದ್ರತೆಗೆ ಧಕ್ಕೆ ತರಬಹುದಾಗಿದೆ. ಆರ್ಥಿಕ ಅಪರಾಧಗಳಿಗೆ ಪ್ಯಾನ್ ಕಾರ್ಡ್ ಮಾಹಿತಿ ಬಳಸುವ ಸಾಧ್ಯತೆ ಇದೆ’ಎಂದೂ ಅವರು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.