ಕೋಲ್ಕತ್ತ: ಅಂಪನ್ ಚಂಡಮಾರುತದಿಂದ ₹1 ಲಕ್ಷ ಕೋಟಿಗೂ ಹೆಚ್ಚು ನಷ್ಟವಾಗಿದೆ ಎಂದು ಕೇಂದ್ರ ಸರ್ಕಾರದ ಅಂತರ ಸಚಿವಾಲಯ ಸಮಿತಿಗೆ ಪಶ್ಚಿಮ ಬಂಗಾಳ ಸರ್ಕಾರ ತಿಳಿಸಿದೆ.
ಚಂಡಮಾರುತದಿಂದಾಗಿ ಸಂಭವಿಸಿರುವ ಹಾನಿಯ ಬಗ್ಗೆ ಕೇಂದ್ರ ಸರ್ಕಾರದ ಅಂತರ ಸಚಿವಾಲಯ ಸಮಿತಿಯು ಪಶ್ಚಿಮ ಬಂಗಾಳದಲ್ಲಿ ಎರಡು ದಿನಗಳ ಸಮೀಕ್ಷೆ ಕೈಗೊಂಡಿದೆ.
ಚಂಡಮಾರುತದಿಂದಾಗಿ ₹1,02,442 ಕೋಟಿ ನಷ್ಟವಾಗಿದೆ. ಈ ಪೈಕಿ ಮನೆಗಳಿಗೆ ಆದ ಹಾನಿಯಿಂದಲೇ ಗರಿಷ್ಠ, ಅಂದರೆ ₹ 28.56 ಕೋಟಿ ನಷ್ಟ ಸಂಭವಿಸಿದೆ. ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳೂ ಸೇರಿದಂತೆ ಕೈಗಾರಿಕಾ ವಲಯಕ್ಕೆ ₹26,790 ಕೋಟಿ ನಷ್ಟವಾಗಿದೆ. ಕೃಷಿ ಕ್ಷೇತ್ರಕ್ಕೆ ₹15,860 ಕೋಟಿ ನಷ್ಟ ಉಂಟಾಗಿದೆ ಎಂದು ರಾಜ್ಯ ಸರ್ಕಾರವು ಕೇಂದ್ರದಸಮಿತಿಗೆ ಸಲ್ಲಿಸಿದ ವರದಿಯಲ್ಲಿ ಉಲ್ಲೇಖಿಸಿದೆ
ಮೀನುಗಾರಿಕೆಗೆ ₹2,000 ಕೋಟಿ, ತೋಟಗಾರಿಕೆಗೆ ₹6,581 ಕೋಟಿ, ಪ್ರಾಣಿ ಸಂಪನ್ಮೂಲ ಅಭಿವೃದ್ಧಿ ಇಲಾಖೆಗೆ ₹452 ಕೋಟಿ, ನಗರ ಮೂಲಸೌಕರ್ಯ ಕ್ಷೇತ್ರಕ್ಕೆ ₹6,750 ಕೋಟಿ ನಷ್ಟವಾಗಿದೆ.
‘ನಷ್ಟದ ಮೌಲ್ಯಮಾಪನದ ಪಟ್ಟಿಯನ್ನು ಕೇಂದ್ರದ ತಂಡಕ್ಕೆ ನೀಡಲಾಗಿದೆ. ನಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳಲಾಗಿದ್ದು, ತುರ್ತು ನೆರವು ನೀಡುವಂತೆ ಮನವಿ ಮಾಡಲಾಗಿದೆ ಎಂದು ಪಶ್ಚಿಮ ಬಂಗಾಳ ಸರ್ಕಾರದ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.