ಕೋಲ್ಕತ್ತ: ಅಂಪನ್ ಚಂಡಮಾರುತದಿಂದಾಗಿ ಪಶ್ಚಿಮ ಬಂಗಾಳ ತತ್ತರಿಸಿದ್ದರೂ, ಸಹಜಸ್ಥಿತಿಗೆ ತರುವತ್ತ ಸರ್ಕಾರ ನಿರ್ಲಕ್ಷ್ಯ ವಹಿಸಿದೆ ಎಂದು ದೂರಿ ಬಂಗಾಳದ ಜನತೆ ರಸ್ತೆ ತಡೆ ನಡೆಸಿ ಪ್ರತಿಭಟನೆ ಮಾಡಿದರು.
ಕೋಲ್ಕತ್ತದ ಕೆಲವು ಭಾಗಗಳಲ್ಲಿ ಮಾತ್ರ ವಿದ್ಯುತ್ ಹಾಗೂ ಮೊಬೈಲ್ ಸಂಪರ್ಕವಿದೆ. ಹಲವು ಪ್ರದೇಶಗಳು ಕತ್ತಲಿನಲ್ಲಿಯೇ ಉಳಿದಿವೆ. ಹೌರಾ, ಉತ್ತರ ಮತ್ತು ದಕ್ಷಿಣ ಭಾಗದ 24 ಪರಗಣ ಜಿಲ್ಲೆಗಳ ರಸ್ತೆಗಳು ಜಲಾವೃತಗೊಂಡಿವೆ. ಅದನ್ನು ಸರಿ ಮಾಡುವತ್ತ ಗಮನ ಹರಿಸದ ಸರ್ಕಾರದ ವಿರುದ್ಧ ನಾಗರಿಕರು ಘೋಷಣೆ ಕೂಗಿದ್ದಾರೆ.
ಕೂಡಲೇ ವಿದ್ಯುತ್ ಹಾಗೂ ನೀರು ಪೂರೈಕೆ ಸಮರ್ಪಕವಾಗಿರುವಂತೆ ಕ್ರಮ ಕೈಗೊಳ್ಳಲು ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.
ಕೋಲ್ಕತ್ತ ನಗರ ಆಡಳಿತ ಮಂಡಳಿಯ ಅಧ್ಯಕ್ಷ ಫಿರ್ಹಾದ್ ಹಕೀಂ, ‘ವಾರದೊಳಗೆ ಜನಜೀವನ ಸಹಜ ಸ್ಥಿತಿಯತ್ತ ತರಲು ಎಲ್ಲ ಸರ್ಕಾರಿ ಅಧಿಕಾರಿಗಳು ಶ್ರಮ ವಹಿಸಲಿದ್ದಾರೆ’ ಎಂದು ಭರವಸೆ ನೀಡಿದ್ದಾರೆ.
ಸತ್ತವರ ಸಂಖ್ಯೆ 85ಕ್ಕೆ ಏರಿಕೆಯಾಗಿದ್ದು, 1.5 ಕೋಟಿ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಸಾಮಾನ್ಯ ಜನ ಜೀವನವು ಅಸ್ತವ್ಯಸ್ತಗೊಂಡಿದ್ದು, 10 ಲಕ್ಷಕ್ಕೂ ಹೆಚ್ಚು ಮನೆಗಳು ನಾಶಗೊಂಡಿವೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.