ಕೋಲ್ಕತ್ತ: ಅಂಪನ್ ಚಂಡಮಾರುತದ ಅಬ್ಬರ ಸಂಪೂರ್ಣವಾಗಿ ಕಡಿಮೆಯಾಗಿದ್ದು ಪಶ್ಚಿಮ ಬಂಗಾಳದಲ್ಲಿ ಅಂಪನ್‌ಗೆ 85 ಜನರು ಬಲಿಯಾಗಿದ್ದಾರೆ.
ಚಂಡಮಾರುತ ಪೀಡಿತ ಉತ್ತರ ಮತ್ತು ದಕ್ಷಿಣ 24 ಪರಗಣ ಜಿಲ್ಲೆಗಳು, ಪೂರ್ವ ಮತ್ತು ಪಶ್ಚಿಮ ಮಿಡ್ನಾಪುರ ಜಿಲ್ಲೆ, ಹೌರಾ, ಕೋಲ್ಕತ್ತ ಮತ್ತು ಹೂಗ್ಲಿ ಜಿಲ್ಲೆಗಳಲ್ಲಿ ಜನಜೀವನ ಅಸ್ತವ್ಯಸ್ತಗೊಂಡಿದೆ. ಕಳೆದು 3 ದಿನಗಳಿಂದ ವಿದ್ಯುತ್ ಇಲ್ಲ ಹಾಗೂ ರಸ್ತೆ ಸಂಪರ್ಕ ಇಲ್ಲದೇ ಜನರು ಮನೆಗಳಲ್ಲಿ ಉಳಿದಿದ್ದಾರೆ. ಮಳೆ ತಗಿದ್ದು ಇಂದು ಸಂಜೆ ಅಥವಾ ನಾಳೆ ಅಗತ್ಯ ಮೂಲ ಸೌಕರ್ಯ ಕಲ್ಪಿಸುವುದಾಗಿ ಪಶ್ಚಿಮ ಬಂಗಾಳ ಸರ್ಕಾರದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ನಿನ್ನೆ ಪ್ರಧಾನಿ ವೈಮಾನಿಕ ಸಮೀಕ್ಷೆ ನಡೆಸಿದ ಬಳಿಕ ಒಂದು ಸಾವಿರ ಕೋಟಿ ನೆರವಿನ ಘೋಷಣೆ ಮಾಡಿದ್ದಾರೆ. ಮನೆಗಳು, ಕೃಷಿ ಜಮೀನು, ವಿದ್ಯುತ್ ಮತ್ತು ಇತರ ವಲಯಗಳಲ್ಲಿ ಆಗಿರುವ ಹಾನಿಯ ಬಗ್ಗೆ ವಿವರಣಾತ್ಮಕ ಸಮೀಕ್ಷೆ ನಡೆಸಲಾಗುತ್ತದೆ. ಇದಕ್ಕಾಗಿ ಕೇಂದ್ರವು ರಾಜ್ಯ ಸರ್ಕಾರಕ್ಕೆ ನೆರವು ನೀಡುತ್ತದೆ ಎಂದು ಮೋದಿ ಭರವಸೆ ನೀಡಿದ್ದಾರೆ.
ಬಂಗಾಳ ಮತ್ತು ಒಡಿಶಾದಲ್ಲಿ ಸುಮಾರು 6 ಲಕ್ಷ ಜನರನ್ನು ಪುನರ್ವಸತಿ ಕೇಂದ್ರಿಗಳಿಗೆ ಸ್ಥಳಾಂತರ ಮಾಡಲಾಗಿದೆ. ಅಲ್ಲಿ ಅವರಿಗೆ ಆಹಾರ ಸೇರಿದಂತೆ ಅಗತ್ಯ ಸೌಕರ್ಯಗಳನ್ನು ಕಲ್ಪಿಸಲಾಗಿದೆ. ಒಟ್ಟು ಒಂದು ಲಕ್ಷ ಮನೆಗಳು ಸಂಪೂರ್ಣವಾಗಿ ನಾಶವಾಗಿವೆ. ಒಂದು ಕೋಟಿ ಜನರಿಗೆ ತೊಂದರೆಯಾಗಿದೆ ಎಂದು ಬಂಗಾಳ ಸರ್ಕಾರ ಹೇಳಿದೆ.
ನಿನ್ನೆ ಪಶ್ಚಿಮ ಬಂಗಾಳದ ನಂತರ ಒಡಿಶಾಗೆ ಭೇಟಿ ನೀಡಿದ ಪ್ರಧಾನಿ ಮೋದಿ, ಚಂಡಮಾರುತ ಪೀಡಿತ ಜಿಲ್ಲೆಗಳಲ್ಲಿ ವೈಮಾನಿಕ ಸಮೀಕ್ಷೆ ನಡೆಸಿದರು. ಬಳಿಕ ₹ 500 ಕೋಟಿ ಪರಿಹಾರವನ್ನು ಘೋಷಣೆ ಮಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.