ಅಹಮದಾಬಾದ್: ಗುಜರಾತ್‌ನ ಕಛ್ ಜಿಲ್ಲೆಯ ಜಖೌ ಬಂದರು ಪ್ರದೇಶದ ಬಳಿ ಬಿಪೊರ್‌ಜಾಯ್ ಚಂಡಮಾರುತ ಗುರುವಾರ ಸಂಜೆಯ ವೇಳೆಗೆ ಅಪ್ಪಳಿಸುವ ಸಾಧ್ಯೆತೆಯಿರುವ ಹಿನ್ನೆಲೆಯಲ್ಲಿ ಕರಾವಳಿ ಜಿಲ್ಲೆಗಳ 30,000 ಮಂದಿಗೆ ತಾತ್ಕಾಲಿಕ ಕೇಂದ್ರದಲ್ಲಿ ಆಶ್ರಯ ಕಲ್ಪಿಸಲಾಗಿದೆ ಎಂದು ಅಧಿಕಾರಿಯೊಬ್ಬರು ಮಂಗಳವಾರ ತಿಳಿಸಿದ್ದಾರೆ.
ಚಂಡಮಾರುತ ಅಪ್ಪಳಿಸಲು ಸಾಧ್ಯತೆಯಿರುವ ಕರಾವಳಿ ಭಾಗದಲ್ಲಿ 10 ಕಿ.ಮೀ. ವ್ಯಾಪಿಯಲ್ಲಿ ಜನರನ್ನು ಸುರಕ್ಷಿತ ಕೇಂದ್ರಗಳಿಗೆ ಸ್ಥಳಾಂತರಿಸುವ ಗುರಿಯನ್ನು ಸರ್ಕಾರ ಹೊಂದಿದೆ.
ವಿವಿಧ ಇಲಾಖೆಯ ಅಧಿಕಾರಿಗಳಿಂದ ಜನರನ್ನು ಸುರಕ್ಷಿತ ಕೇಂದ್ರಗಳಿಗೆ ಸ್ಥಳಾಂತರಿಸುವ ಪ್ರಕ್ರಿಯೆ ಈಗಲೂ ಮುಂದುವರಿದಿದ್ದು, ಬುಧವಾರ ಸಂಜೆಯ ವೇಳೆಗೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಗಂಟೆಗೆ 150 ಕಿ.ಮೀ. ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆ...
ಚಂಡಮಾರುತದ ಪ್ರಭಾವದಿಂದ ಭಾರಿ ಮಳೆ, ಭೂಕುಸಿತವಾಗಲಿದ್ದು, ಗಂಟೆಗೆ 150 ಕಿ.ಮೀ. ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಮುನ್ಸೂಚನೆ ನೀಡಿದೆ.
ಚಂಡಮಾರತವು ಗುಜರಾತ್‌ನ ಕಛ್, ದೇವ್‌ಭೂಮಿ ದ್ವಾರಕಾ ಮತ್ತು ಜಾಮ್‌ನಗರ ಜಿಲ್ಲೆಗಳಲ್ಲಿ ಅತಿ ಹೆಚ್ಚು ಪರಿಣಾಮ ಬೀರುವ ಭೀತಿಯಿದೆ.
ಎಲ್ಲೆಲ್ಲಿ ಎಷ್ಟೆಷ್ಟು ಜನರ ಸ್ಥಳಾಂತರ?
ಕಛ್: 6,500
ದೇವ್‌ಭೂಮಿ ದ್ವಾರಕಾ: 5,000,
ರಾಜ್‌ಕೋಟ್: 4,000
ಮೊರ್ಬಿ: 2,000
ಜಾಮ್‌ನಗರ: 1,500
ಪೋರಬಂದರ್: 550,
ಜುನಾಗಢ್: 500
ಓರ್ವ ಸಾವು...
ಚಂಡುಮಾರುತಕ್ಕೆ ಸಂಬಂಧಿಸಿದ ಘಟನೆಯಲ್ಲಿ ಒಬ್ಬ ಮೃತಪಟ್ಟಿದ್ದಾನೆ ಎಂದು ಅಧಿಕಾರಿ ತಿಳಿಸಿದ್ದಾರೆ. ರಾಜ್‌ಕೋಟ್ ಜಿಲ್ಲೆಯಲ್ಲಿ ಜೋರಾದ ಗಾಳಿಯಿಂದಾಗಿ ಬೈಕ್ ಮೇಲೆ ಮರ ಬಿದ್ದ ಪರಿಣಾಮ ವರ್ಷಾ ಬವಲಿಯಾ ಎಂಬಾಕೆ ಸಾವಿಗೀಡಾಗಿದ್ದಾರೆ. ಘಟನೆಯಲ್ಲಿ ಅವರ ಪತಿ ಗಾಯಗೊಂಡಿದ್ದಾರೆ.
50 ರೈಲುಗಳ ಸಂಚಾರ ರದ್ದು
ಚಂಡಮಾರುತದ ಹಿನ್ನೆಲೆಯಲ್ಲಿ ಗುಜರಾತ್‌ನ ಕರಾವಳಿ ಜಿಲ್ಲೆಗಳಿಗೆ ತೆರಳಬೇಕಿದ್ದ 50ಕ್ಕೂ ಹೆಚ್ಚು ರೈಲುಗಳ ಸಂಚಾರವನ್ನು ಪಶ್ಚಿಮ ರೈಲ್ವೆ ರದ್ದುಪಡಿಸಿದ್ದು ಇನ್ನಷ್ಟು ರೈಲುಗಳ ಸಂಚಾರ ರದ್ದುಪಡಿಸಲು ಚಿಂತನೆ ನಡೆಸಿದೆ. ಮೂರು ದಿನ ರೈಲು ಸಂಚಾರ ರದ್ದುಪಡಿಸುವ ಚಿಂತನೆ ಇದೆ. ಪ್ರಕೃತಿ ವಿಕೋಪ ನಿರ್ವಹಣಾ ಕೇಂದ್ರ ಸಹಾಯವಾಣಿ ಸ್ಥಾಪನೆ ಸಂಚಾರಕ್ಕಾಗಿ ಪರಿಹಾರ ಕಾರ್ಯ ಉದ್ದೇಶದ ರೈಲು ಸಜ್ಜಾಗಿರಿಸಲಾಗಿದೆ ಎಂದು ಹೇಳಿಕೆ ತಿಳಿಸಿದೆ. ಭಾವ್‌ನಗರ್ ವಿಭಾಗದ ರಾಜ್‌ಕೋಟ್‌ನಲ್ಲಿ ಐದು ಕಡೆ ಅಹಮದಾಬಾದ್ ವಿಭಾಗದಲ್ಲಿ ಮೂರು ಕಡೆ ಗಂಟೆಗೊಮ್ಮೆ ಗಾಳಿಯ ವೇಗ ಗಮನಿಸುತ್ತಿದ್ದು ಗಾಳಿಯ ತೀವ್ರತೆ ಆಧರಿಸಿ ರೈಲು ಸಂಚಾರ ನಿಯಂತ್ರಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ.
ಸದ್ಯ ಗಾಂಧಿಧಾಮ ವೆರವಲ್ ಒಖಾ ಪೋರಬಂದರ್‌ನತ್ತ ತೆರಳಬೇಕಿದ್ದ 56 ರೈಲುಗಳ ಸಂಚಾರ ರದ್ದುಗೊಂಡಿದೆ. ಜೂನ್ 13–15ರ ಅವಧಿಯಲ್ಲಿ ಇನ್ನೂ 95 ರೈಲುಗಳ ಸಂಚಾರ ರದ್ದುಪಡಿಸಲು ಚಿಂತನೆ ನಡೆದಿದೆ. ‘ಬಾಧಿತ ಜಿಲ್ಲೆಗಳತ್ತ ತೆರಳಬೇಕಿದ್ದ ಪ್ಯಾಸೆಂಜರ್ ರೈಲುಗಳ ಸಂಚಾರ ಕುರಿತು ಪರಿಶೀಲನೆ ನಡೆದಿದ್ದು ಪರಿಸ್ಥಿತಿ ಅಧರಿಸಿ ನಿರ್ಧರಿಸಲಾಗುವುದು’ ಎಂದು ಪಶ್ಚಿಮ ರೈಲ್ವೆಯ ಸಾರ್ವಜನಿಕ ಸಂಪರ್ಕಾಧಿಕಾರಿ ಸುಮಿತ್ ಠಾಕೂರ್ ತಿಳಿಸಿದ್ದಾರೆ. ‘ವೆರವಲ್–ಜುನಾಗಢ್ ಪೋರಬಂದರ್–ಕನಲುಸ್ ರಾಜಕೋಟ್–ಒಖಾ ವಿರಂಗಂ–ಗಾಂಧಿಧಾಮ್ –ಭುಜ್ ರೈಲ್ವೆ ವಲಯ ಹೆಚ್ಚು ಬಾಧಿತವಾಗಬಹುದು ಎಂದು ಇಲಾಖೆ ಅಂದಾಜಿಸಿದೆ’ ಎಂದು ತಿಳಿಸಿದ್ದಾರೆ. ಮರ ಕಡಿಯುವ ಯಂತ್ರ ಜನರೇಟರ್ ಸೆಟ್ ಡೀಸೆಲ್ ಚಾಲಿತ ಪಂಪ್‌ಗಳು ಜೆಸಿಬಿಗಳು ಸೇವಾವಾಹನ ಸಜ್ಜಾಗಿಡಲಾಗಿದೆ. ಅಗತ್ಯ ಪ್ರಮಾಣದ ಇಂಧನ ಹಾಗೂ ಔಷಧವನ್ನು ದಾಸ್ತಾನಿಡಲಾಗಿದೆ ಎಂದು ತಿಳಿಸಿದ್ದಾರೆ.
50 ಜನರ ಸ್ಥಳಾಂತರ, 8 ಸಾವು
ಚಂಡಮಾರುತ ಪರಿಣಾಮ ರಾಜಕೋಟ್‌ನಲ್ಲಿ ಬೀಸಿದ ಬಿರುಗಾಳಿಗೆ ಮರ ಉರುಳಿದ್ದು ಪತಿಯೊಂದಿಗೆ ಬೈಕ್‌ನಲ್ಲಿ ತೆರಳುತ್ತಿದ್ದ ವರ್ಷಾ ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮುಂಬೈನ ಜುಹೂ ಕಡಲತೀರದಲ್ಲಿ ಸಮುದ್ರಕ್ಕಿಳಿದಿದ್ದ ನಾಲ್ವರು ಬಾಲಕರು ಮೃತಪಟ್ಟಿದ್ದಾರೆ. ‘12–16 ವರ್ಷದ ಐವರು ಜುಹೂ ಕೋಳಿವಾಡಾ ಪ್ರದೇಶದಲ್ಲಿ ಸಮುದ್ರಕ್ಕಿಳಿದಿದ್ದರು. ಒಬ್ಬನನ್ನು ರಕ್ಷಿಸಲಾಗಿದೆ‘ ಎಂದು ಪೊಲೀಸರು ತಿಳಿಸಿದ್ದಾರೆ. ಗುಜರಾತ್‌ನ ಕರಾವಳಿ ಜಿಲ್ಲೆಗಳಲ್ಲಿ ಮಳೆ ಗಾಳಿ ಶುರುವಾಗಿದೆ. ಅಲ್ಲಲ್ಲಿ ಮರಗಳು ಉರುಳಿವೆ. ಕಛ್ ರಾಜಕೋಟ್ ಜಿಲ್ಲೆಯಲ್ಲಿ ಗೋಡೆ ಕುಸಿದು ಮೂವರು ಸತ್ತಿದ್ದಾರೆ ಎಂದು ರಾಯಿಟರ್ಸ್ ವರದಿ ಮಾಡಿದೆ. ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ.
50 ಮಂದಿ ಸ್ಥಳಾಂತರ: ಇನ್ನೊಂದೆಡೆ ಕರಾವಳಿ ಕಾವಲು ಪಡೆಯ ಸಿಬ್ಬಂದಿ ಗುಜರಾತ್‌ನ ದ್ವಾರ್ಕಾ ಜಿಲ್ಲೆಯಲ್ಲಿ ತೈಲ ನಿಕ್ಷೇಪದಲ್ಲಿದ್ದ 50 ಸಿಬ್ಬಂದಿಯನ್ನು ಪ್ರತಿಕೂಲ ಹವಾಮಾನದ ಹಿನ್ನೆಲೆಯಲ್ಲಿ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಿದರು. ಬಿರುಗಾಳಿ ಪ್ರತಿಕೂಲ ವಾತಾವರಣದ ನಡುವೆಯೂ ಆಧುನಿಕ ಹಗುರ ಹೆಲಿಕಾಪ್ಟರ್ (ಎಎಲ್‌ಎಚ್) ಮತ್ತು ಹಡಗು ಸೇವೆಯನ್ನು ಬಳಸಿ ಈ ರಕ್ಷಣಾ ಕಾರ್ಯಾಚರಣೆ ನಡೆಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ತುರ್ತು ಸ್ಪಂದನೆಗೆ ವೈದ್ಯರ ಆರು ತಂಡ ಸಿದ್ಧವಿರಲು ನಿಮ್ಹಾನ್ಸ್ ತಂಡಕ್ಕೂ ಸೂಚನೆ
ಚಂಡಮಾರುತ ಹಿನ್ನೆಲೆಯಲ್ಲಿ ಗುಜರಾತ್‌ನಲ್ಲಿ ಕೇಂದ್ರ ರಾಜ್ಯ ಸರ್ಕಾರಗಳಿಂದ ಕೈಗೊಂಡಿರುವ ಮುಂಜಾಗ್ರತಾ ಕ್ರಮಗಳನ್ನು ಕೇಂದ್ರ ಆರೋಗ್ಯ ಸಚಿವ ಮನ್‌ಸುಖ್ ಮಾಂಡವೀಯ ಮಂಗಳವಾರ ಪರಿಶೀಲಿಸಿದರು. ದೆಹಲಿಯ ಏಮ್ಸ್ ಸೇರಿದಂತೆ ಆರು ಪ್ರಮುಖ ಆಸ್ಪತ್ರೆಗಳ ವೈದ್ಯರು ಮತ್ತು ಸಿಬ್ಬಂದಿ ಒಳಗೊಂಡ ತಂಡಗಳನ್ನು ರಚಿಸಲಾಗಿದೆ. ತುರ್ತು ಸಂದರ್ಭಗಳಲ್ಲಿ ಸ್ಪಂದಿಸಲು ಸಿದ್ಧವಾಗಿರುವಂತೆ ಈ ತಂಡಗಳಿಗೆ ಸಚಿವಾಲಯವು ಸೂಚಿಸಿದೆ. ಅಲ್ಲದೆ ಬಾಧಿತ ಪ್ರದೇಶಗಳಲ್ಲಿ ಅಗತ್ಯವಿದ್ದರೆ ಜನರಿಗೆ ಮಾನಸಿಕ ಆರೋಗ್ಯ ಚಿಕಿತ್ಸೆ ಆಪ್ತ ಸಮಾಲೋಚನೆ ನಡೆಸಲು ಸಿದ್ಧವಿರುವಂತೆ ಬೆಂಗಳೂರಿನ ನಿಮ್ಹಾನ್ಸ್‌ನ ವೈದ್ಯಕೀಯ ತಂಡಕ್ಕೂ ಸೂಚಿಸಲಾಗಿದೆ ಎಂದು ಹೇಳಿಕೆ ತಿಳಿಸಿದೆ. ಗುಜರಾತ್ ಸೇರಿದಂತೆ ಪಶ್ಚಿಮ ಕರಾವಳಿಯ ಎಲ್ಲ ರಾಜ್ಯಗಳ ಪ್ರಾದೇಶಿಕ ಕಚೇರಿಗಳಿಗೆ ಆರೋಗ್ಯ ಸಚಿವಾಲಯವು ಪತ್ರ ಬರೆದಿದ್ದು ರಕ್ಷಣಾ ಕಾರ್ಯಗಳ ಸಿದ್ಧತೆಗೆ ಬೇಕಾಗಿರುವ ನೆರವಿನ ಕುರಿತು ಮಾಹಿತಿ ನೀಡುವಂತೆ ಸೂಚಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.