ಅಹಮದಾಬಾದ್: ಬಿಪೊರ್‌ಜಾಯ್ ಚಂಡಮಾರುತವು ಗುಜರಾತ್ ಕರಾವಳಿಗೆ ಗುರುವಾರ ರಾತ್ರಿ ಪ್ರವೇಶಿಸಿದ್ದು, ಸೌರಾಷ್ಟ್ರ ಮತ್ತು ಕಛ್ ತೀರ ಪ್ರದೇಶಗಳಲ್ಲಿ ಭೂಕುಸಿತ ಸಂಭವಿಸಿದೆ. ಇಬ್ಬರು ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.
ತೀರ ಪ್ರದೇಶಗಳಲ್ಲಿ ಭಾರಿ ಮಳೆ ಮುಂದುವರಿಯಲಿದೆ. ಮನೆಗಳು, ಬೆಳೆ, ರಸ್ತೆ, ವಿದ್ಯುತ್ ಸರಬರಾಜು ಮತ್ತು ತಗ್ಗು ಪ್ರದೇಶಗಳಲ್ಲಿ ಅಪಾರ ಹಾನಿಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ.
700ಕ್ಕೂ ಹೆಚ್ಚು ವಿದ್ಯುತ್ ಕಂಬಗಳು ಧರೆಗುರುಳಿವೆ ಎಂದು ಗೃಹ ಸಚಿವಾಲಯದ ರಾಜ್ಯ ಖಾತೆ ಸಚಿವ ಹರ್ಷ್ ಸಂಘ್ವಿ ಹೇಳಿದ್ದಾರೆ.
ಎಷ್ಟು ಹಾನಿಯಾಗಿದೆ ಹಾಗೂ ಸಾವು–ನೋವು ಸಂಭವಿಸಿದೆ ಎಂದು ಸರ್ಕಾರ ಸದ್ಯಕ್ಕೆ ಖಚಿತ ಮಾಹಿತಿ ನೀಡಿಲ್ಲ.
ಮೂಲಗಳ ಪ್ರಕಾರ ಚಂಡಮಾರುತದ ಪರಿಣಾಮ ಎದುರಿಸುತ್ತಿರುವ ಎಂಟು ಜಿಲ್ಲೆಗಳಲ್ಲಿ ಸಾವಿರಕ್ಕೂ ಅಧಿಕ ಮರಗಳು, ವಿದ್ಯುತ್ ಕಂಬಗಳು ನೆಲಕ್ಕುರುಳಿವೆ. ಭಾವನಗರ್‌ನಲ್ಲಿ ನೀರಿನಲ್ಲಿ ಕೊಚ್ಚಿಕೊಂಡು ಹೋಗುತ್ತಿದ್ದ ಜಾನುವಾರುಗಳನ್ನು ರಕ್ಷಿಸಿಕೊಳ್ಳಲು ಪ್ರಯತ್ನಿಸಿದ ತಂದೆ ಹಾಗೂ ಮಗ ಇಬ್ಬರೂ ಮೃತಪಟ್ಟಿದ್ದಾರೆ ಎನ್ನಲಾಗಿದೆ.
ಮುಂಜಾಗ್ರತೆಯಾಗಿ ಸಮುದ್ರ ತೀರದ ಜನವಸತಿ ಪ್ರದೇಶಗಳಿಂದ ಈವರೆಗೆ ಸುಮಾರು 94 ಸಾವಿರ ಜನರನ್ನು ಸ್ಥಳಾಂತರಿಸಲಾಗಿದೆ. ಅವರಿಗಾಗಿ 8 ಜಿಲ್ಲೆಗಳಲ್ಲಿ 1,521 ತಾತ್ಕಾಲಿಕ ಶಿಬಿರ ಸ್ಥಾಪಿಸಲಾಗಿದೆ. ಸ್ಥಳಾಂತರಗೊಂಡವರಲ್ಲಿ 8,900 ಮಕ್ಕಳು, 1,100 ಗರ್ಭಿಣಿಯರು ಇದ್ದಾರೆ ಎಂದು ರಾಜ್ಯ ಸರ್ಕಾರ ತಿಳಿಸಿದೆ.
ಸುರಕ್ಷಿತ ಸ್ಥಳಗಳಿಗೆ ಕಳುಹಿಸಲಾಗಿರುವ ಒಟ್ಟು ಸಂತ್ರಸ್ತರ ಪೈಕಿ 46,823 ಮಂದಿ ಕಛ್ ಜಿಲ್ಲೆಯವರಾಗಿದ್ದು, ಉಳಿದವರು ಪೋರಬಂದರ್, ಜುನಾಗಢ, ಗಿರ್–ಸೋಮನಾಥ್, ಜಮ್‌ನಗರ್, ದೇವಭೂಮಿ ದ್ವಾರ್ಕಾ, ಮೊರ್ಬಿ ಮತ್ತು ಸೌರಾಷ್ಟ್ರ ಭಾಗದ ರಾಜ್‌ಕೋಟ್‌ನವರಾಗಿದ್ದಾರೆ ಎಂದು ಅಧಿಕೃತ ಮಾಹಿತಿಯಿಂದ ತಿಳಿದುಬಂದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.