ಭುವನೇಶ್ವರ/ಕೋಲ್ಕತ್ತ: ಬಂಗಾಳ ಕೊಲ್ಲಿಯಲ್ಲಿ ‘ಡಾನಾ’ ಚಂಡಮಾರುತ ರೂಪುಗೊಂಡಿದೆ. ಈ ಚಂಡಮಾರುತವು ಇಂದು ಬೆಳಿಗ್ಗೆ ಒಡಿಶಾ, ಪಶ್ಚಿಮ ಬಂಗಾಳಕ್ಕೆ ಅಪ್ಪಳಿಸುತ್ತಿದ್ದು, ಒಡಿಶಾ ಮತ್ತು ಪಶ್ಚಿಮ ಬಂಗಾಳದಲ್ಲಿ ಭಾರಿ ಮಳೆಯಾಗುತ್ತಿದೆ.
ಒಡಿಶಾದ ಕರಾವಳಿ ಪ್ರದೇಶದಲ್ಲಿರುವ ‘ಭಿತರ್‌ಕನಿಕಾ ರಾಷ್ಟ್ರೀಯ ಉದ್ಯಾನ’ ಹಾಗೂ ‘ಧಮರಾ ಬಂದರು’ ಮೇಲೆ ‘ಡಾನಾ’ ಅಪ್ಪಳಿಸಿದೆ. ಸಮುದ್ರದ ಅಲೆಗಳು 2 ಮೀಟರ್‌ನಷ್ಟು ಎತ್ತರಕ್ಕೆ ಏರಿದ್ದು, ಗಾಳಿಯ ವೇಗವು ತಾಸಿಗೆ 120 ಕಿ.ಮೀನಷ್ಟಿದೆ ಎಂದು ಭುವನೇಶ್ವರದ ಪ್ರಾದೇಶಿಕ ಹವಾಮಾನ ಇಲಾಖೆಯ ವಿಜ್ಞಾನಿ ಉಮಾಶಂಕರ್ ದಾಸ್ ತಿಳಿಸಿದ್ದಾರೆ.
‘ಒಡಿಶಾದ ಕೆಲವು ಜಿಲ್ಲೆಗಳಲ್ಲಿ ಸುಮಾರು 21 ಸೆಂ.ಮೀನಷ್ಟು ಮಳೆ ಸುರಿಯಬಹುದು’ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ರಾಜ್ಯದ ಸುಮಾರು ಅರ್ಧದಷ್ಟು ಜನರು ‘ಡಾನಾ’ದ ಪರಿಣಾಮವನ್ನು ಎದುರಿಸುತ್ತಿದ್ದಾರೆ. ಈ ನಿಟ್ಟಿನಲ್ಲಿ ಒಡಿಶಾ ಸರ್ಕಾರವು ಹಲವು ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದ್ದು, ಜನರ ಸ್ಥಳಾಂತರ ಕಾರ್ಯವನ್ನು ಆರಂಭಿಸಿದೆ.
ಒಡಿಶಾದ 14 ಜಿಲ್ಲೆಗಳಲ್ಲಿ ಸುಮಾರು 288 ರಕ್ಷಣಾ ತಂಡಗಳ ನಿಯೋಜನೆ ಮಾಡಲಾಗಿದೆ. ನಿರಾಶ್ರಿತ ಶಿಬಿರಗಳಲ್ಲಿ ಆಹಾರ, ಕುಡಿಯುವ ನೀರು, ಶಿಶು ಆಹಾರದ ವ್ಯವಸ್ಥೆ. ಜೊತೆಗೆ, ಮಹಿಳಾ ಪೊಲೀಸ್ ನಿಯೋಜಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಒಡಿಶಾದಲ್ಲಿ ಇದುವರೆಗೆ ಸುಮಾರು 6 ಲಕ್ಷ ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ ಎಂದು ಮುಖ್ಯಮಂತ್ರಿ ಮೋಹನ್ ಚರಣ್ ಮಾಝಿ ತಿಳಿಸಿದ್ದಾರೆ.
ಭಾರಿ ಮಳೆಯಾಗುತ್ತಿರುವುದರಿಂದ ಕೋಲ್ಕತ್ತ, ಭುವನೇಶ್ವರದ ವಿಮಾನ ನಿಲ್ದಾಣಗಳಲ್ಲಿ ವಿಮಾನಗಳ ಹಾರಾಟ ರದ್ದು ಮಾಡಲಾಗಿದೆ. ಜತೆಗೆ ಹಲವೆಡೆ ಭೂಕುಸಿತ ಸಂಭವಿಸಿದೆ ಎಂದು ವರದಿಯಾಗಿದೆ.
‘ಚಂಡಮಾರುತಕ್ಕೆ ‘ಡಾನಾ’ ಹೆಸರನ್ನು ಕತಾರ್ ನೀಡಿದೆ ಎಂಬುದಾಗಿ ಅಂತರರಾಷ್ಟ್ರೀಯ ಹವಾಮಾನ ಸಂಸ್ಥೆ ಹೇಳಿದೆ’ ಎಂದು ಎನ್‌ಡಿಟಿವಿ ವರದಿ ಮಾಡಿದೆ. ಡಾನಾ ಎನ್ನುವುದು ಅರೇಬಿಕ್ ಪದವಾಗಿದ್ದು, ಇದರ ಅರ್ಥ ‘ಔದಾರ್ಯ’ ಎಂದಾಗಿದೆ.
ರೈಲು ಸಂಚಾರ ರದ್ದು
ಡಾನಾ ಚಂಡಮಾರುತದಿಂದಾಗಿ ಪಶ್ಚಿಮ ಬಂಗಾಳದ ದಕ್ಷಿಣ ಭಾಗದ ಜಿಲ್ಲೆಗಳಲ್ಲಿ ಭಾರಿ ಮಳೆಯಾಗುತ್ತಿದೆ. ಇದರಿಂದಾಗಿ ಆಗ್ನೇಯ ರೈಲ್ವೆ ವ್ಯಾಪ್ತಿಯಲ್ಲಿ ಸಂಚರಿಸುವ ಸುಮಾರು 150 ಎಕ್ಸ್‌ಪ್ರೆಸ್ ಹಾಗೂ ಪ್ರಯಾಣಿಕ ರೈಲುಗಳನ್ನು ರದ್ದು ಮಾಡಲಾಗಿದೆ.
‘ಪರಿಸ್ಥಿತಿ ಹದಗೆಟ್ಟರೆ, ಇನ್ನಷ್ಟು ರೈಲುಗಳ ಸಂಚಾರವನ್ನು ರದ್ದು ಮಾಡಲಾಗುವುದು’ ಎಂದು ಆಗ್ನೇಯ ರೈಲ್ವೆ ಬುಧವಾರ ತಿಳಿಸಿದೆ. ಈ ರೈಲ್ವೆ ವ್ಯಾಪ್ತಿಯು ಪಶ್ಚಿಮ ಬಂಗಾಳ, ಒಡಿಶಾ ಹಾಗೂ ಜಾರ್ಖಂಡ್‌ಗೆ ವಿಸ್ತರಿಸಿದೆ. ಈ ರೈಲ್ವೆಯ ಕೇಂದ್ರ ಕಚೇರಿಯು ಕೋಲ್ಕತ್ತದಲ್ಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.