ಭುವನೇಶ್ವರ: ಒಡಿಶಾದಲ್ಲಿ ‘ಡಾನಾ’ ಚಂಡಮಾರುತದ ಪರಿಣಾಮದಿಂದಾಗಿ ಸುಮಾರು 14 ಜಿಲ್ಲೆಗಳ ಒಟ್ಟು 35.95 ಲಕ್ಷ ಜನರು ತೊಂದರೆಗೀಡಾಗಿದ್ದಾರೆ ಎಂದು ರಾಜ್ಯದ ಕಂದಾಯ ಮತ್ತು ವಿಪತ್ತು ನಿರ್ವಹಣೆ ಸಚಿವ ಸುರೇಶ್ ಪೂಜಾರಿ ಭಾನುವಾರ ತಿಳಿಸಿದ್ದಾರೆ.
8,10,896 ಜನರನ್ನು 6,210 ಪರಿಹಾರ ಕೇಂದ್ರಗಳಿಗೆ ಸ್ಥಳಾಂತರಿಸಲಾಗಿದ್ದು, ಕೇಂದ್ರಪಾರ, ಬಾಲೇಶ್ವರ ಮತ್ತು ಭದ್ರಕ್ ಜಿಲ್ಲೆಗಳು ಪ್ರವಾಹದಿಂದ ಹೆಚ್ಚು ಹಾನಿಗೊಳಗಾಗಿವೆ. ಆದರೆ, ಯಾವುದೇ ಸಾವು–ನೋವುಗಳು ಆಗಿಲ್ಲ ಎಂದು ಪೂಜಾರಿ ತಿಳಿಸಿದರು.
ಪ್ರಾಥಮಿಕ ವರದಿಗಳ ಪ್ರಕಾರ, ಚಂಡಮಾರುತ ಮತ್ತು ನಂತರದ ಪ್ರವಾಹದಿಂದಾಗಿ ಸುಮಾರು 5,840 ಮನೆಗಳು ಹಾನಿಯಾಗಿದ್ದು, ದುರಂತದಲ್ಲಿ ಮನೆ ಕಳೆದುಕೊಂಡವರಿಗೆ ಪಾಲಿಥಿನ್ ಶೀಟ್ ನೀಡಲಾಗುತ್ತಿದೆ ಎಂದು ಅವರು ಹೇಳಿದರು.
ಕೇಂದ್ರ ತಂಡವು ಒಡಿಶಾಕ್ಕೆ ಭೇಟಿ ನೀಡಿ ಹಾನಿಯನ್ನು ಅಂದಾಜಿಸುವ ಸಾಧ್ಯತೆ ಇದೆ. ವಿಶೇಷ ಪರಿಹಾರ ಆಯುಕ್ತರು ಹಾನಿಯ ಮೌಲ್ಯಮಾಪನ ವರದಿಗಳನ್ನು ಸಲ್ಲಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸಿದ್ದು, ಇದರಿಂದ ರಾಜ್ಯ ಸರ್ಕಾರವು ಕೇಂದ್ರದಿಂದ ನೆರವು ಪಡೆಯಬಹುದು ಎಂದು ಹೇಳಿದರು.
ಚಂಡಮಾರುತದಿಂದಾಗಿ ನಾಲ್ವರು ಮೃತಪಟ್ಟಿದ್ದಾರೆ ಎಂಬ ಪ್ರತಿಪಕ್ಷ ಬಿಜೆಡಿ ಹೇಳಿಕೆಯನ್ನು ಉಲ್ಲೇಖಿಸಿದ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ‘ಸಾವುಗಳಿಗೂ ವಿಪತ್ತಿಗೂ ಯಾವುದೇ ಸಂಬಂಧವಿಲ್ಲ’ ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.