ಭುವನೇಶ್ವರ/ಕೋಲ್ಕತ್ತ: ಬಂಗಾಳ ಕೊಲ್ಲಿಯಲ್ಲಿ ಚಂಡಮಾರುತ ರೂಪುಗೊಂಡಿದೆ. ಈ ಚಂಡಮಾರುತಕ್ಕೆ ‘ಡಾನಾ’ ಎಂದು ಹೆಸರಿಡಲಾಗಿದೆ. ಬುಧವಾರದಿಂದಲೇ ಚಂಡಮಾರುತದ ಪ್ರಭಾವ ಆರಂಭವಾಗಿದ್ದು, ಒಡಿಶಾದ ಕರಾವಳಿ ಪ್ರದೇಶಗಳಲ್ಲಿ ಮಳೆಯಾಗುತ್ತಿದೆ. ಒಡಿಶಾ ಹಾಗೂ ಪಶ್ಚಿಮ ಬಂಗಾಳದ ಮೇಲೆ ಶುಕ್ರವಾರ ಬೆಳಿಗ್ಗೆ ‘ಡಾನಾ’ ಅಪ್ಪಳಿಸಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಒಡಿಶಾದ ಕರಾವಳಿ ಪ್ರದೇಶದಲ್ಲಿರುವ ‘ಭಿತರ್‌ಕನಿಕಾ ರಾಷ್ಟ್ರೀಯ ಉದ್ಯಾನ’ ಹಾಗೂ ‘ಧಮರಾ ಬಂದರು’ ಮೇಲೆ ‘ಡಾನಾ‘ ಅಪ್ಪಳಿಸಲಿದೆ. ‘ಈ ಹೊತ್ತಿನಲ್ಲಿ ಸಮುದ್ರದ ಅಲೆಗಳು 2 ಮೀಟರ್‌ನಷ್ಟು ಎತ್ತರಕ್ಕೆ ಏಳಲಿವೆ. ಈ ವೇಳೆ ಗಾಳಿಯ ವೇಗವು ತಾಸಿಗೆ 120 ಕಿ.ಮೀನಷ್ಟಿರಲಿದೆ’ ಎಂದು ಭುವನೇಶ್ವರದ ಪ್ರಾದೇಶಿಕ ಹವಾಮಾನ ಇಲಾಖೆಯ ವಿಜ್ಞಾನಿ ಉಮಾಶಂಕರ್ ದಾಸ್ ಅಂದಾಜಿಸಿದ್ದಾರೆ.
‘ಚಂಡಮಾರುತಕ್ಕೆ ‘ಡಾನಾ’ ಹೆಸರನ್ನು ಕತಾರ್ ನೀಡಿದೆ ಎಂಬುದಾಗಿ ಅಂತರರಾಷ್ಟ್ರೀಯ ಹವಾಮಾನ ಸಂಸ್ಥೆ ಹೇಳಿದೆ’ ಎಂದು ಎನ್‌ಡಿಟಿವಿ ವರದಿ ಮಾಡಿದೆ. ಡಾನಾ ಎನ್ನುವುದು ಅರೇಬಿಕ್ ಪದವಾಗಿದ್ದು, ಇದರ ಅರ್ಥ ‘ಔದಾರ್ಯ’ ಎಂದಾಗಿದೆ.
ಒಡಿಶಾ: ಮುನ್ನೆಚ್ಚರಿಕಾ ಕ್ರಮಗಳು
‘ಗುರುವಾರ ಹಾಗೂ ಶುಕ್ರವಾರ (ಅ.24 ಮತ್ತು 25) ಒಡಿಶಾದ ಕೆಲವು ಜಿಲ್ಲೆಗಳಲ್ಲಿ ಸುಮಾರು 21 ಸೆಂ.ಮೀನಷ್ಟು ಮಳೆ ಸುರಿಯಬಹುದು’ ಎಂದು ಇಲಾಖೆ ಮುನ್ಸೂಚನೆ ನೀಡಿದೆ. ರಾಜ್ಯದ ಸುಮಾರು ಅರ್ಧದಷ್ಟು ಜನರು ‘ಡಾನಾ’ದ ಪರಿಣಾಮವನ್ನು ಎದುರಿಸಲಿದ್ದಾರೆ. ಈ ನಿಟ್ಟಿನಲ್ಲಿ ಒಡಿಶಾ ಸರ್ಕಾರವು ಹಲವು ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದ್ದು, ಜನರ ಸ್ಥಳಾಂತರ ಕಾರ್ಯವನ್ನು ಆರಂಭಿಸಿದೆ.
*ರಾಜ್ಯದ 14 ಜಿಲ್ಲೆಗಳಲ್ಲಿ ಸುಮಾರು 288 ರಕ್ಷಣಾ ತಂಡಗಳ ನಿಯೋಜನೆ
*ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯ (ಎನ್‌ಡಿಆರ್‌ಎಫ್) 19, ರಾಜ್ಯ ವಿಪತ್ತು ನಿರ್ವಹಣಾ ಪಡೆಯ 51, ಅಗ್ನಿ ಶಾಮಕ ಸೇವಾ ಸಿಬ್ಬಂದಿಯ 178 ಸೇರಿ ವಿವಿಧ 40 ತಂಡಗಳ ನಿಯೋಜನೆ
*ವಾಯುಸೇನೆಯ ವಿಮಾನಗಳ ಮೂಲಕ ಭುವನೇಶ್ವರ ತಲುಪಿದ ಪರಿಹಾರ ಸಾಮಗ್ರಿ
*ಮಂಗಳವಾರ ಸಂಜೆಯ ವೇಳೆಗೆ ದಡಕ್ಕೆ ಮರಳಿದ ಎಲ್ಲ ಮೀನುಗಾರರು. 23ರಿಂದ 25ರವರೆಗೆ ಸಮುದ್ರಕ್ಕೆ ಇಳಿಯದಂತೆ ಮೀನುಗಾರರಿಗೆ ಸೂಚನೆ
*ನಿರಾಶ್ರಿತ ಶಿಬಿರಗಳಲ್ಲಿ ಆಹಾರ, ಕುಡಿಯುವ ನೀರು, ಶಿಶು ಆಹಾರದ ವ್ಯವಸ್ಥೆ. ಜೊತೆಗೆ, ಮಹಿಳಾ ಪೊಲೀಸ್ ನಿಯೋಜನೆ
‘ಆಡಳಿತಕ್ಕೆ ಸಂಪೂರ್ಣ ಸಹಕಾರ ನೀಡಿ’
‘ಡಾನಾ’ ಕುರಿತು ಭಯಭೀತರಾಗಬೇಡಿ. ಒಡಿಶಾವು ಇಂಥ ಹಲವು ಚಂಡಮಾರುತನವೀನ್ ಪಟ್ನಾಯಕ್, ಒಡಿಶಾ ವಿಧಾನಸಭೆ ವಿರೋಧ ಪಕ್ಷದ ನಾಯಕ
ಗಳನ್ನು ಈ ಹಿಂದೆ ಎದುರಿಸಿದೆ. ಈ ಚಂಡ ಮಾರುತಗಳನ್ನು ಜನರು ಧೈರ್ಯದಿಂದ ಎದುರಿಸಿದ್ದಾರೆ. ಈ ಬಾರಿಯೂ ನಾವೆಲ್ಲರೂ ಎಲ್ಲ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳೋಣ. ನಮ್ಮನ್ನು ನಾವು ಸುರಕ್ಷಿತವಾಗಿ ಇರಿಸಿಕೊಳ್ಳುವುದರ ಜೊತೆಯಲ್ಲಿ ನಮ್ಮ ಪ್ರೀತಿಪಾತ್ರರ ರಕ್ಷಣೆಯನ್ನೂ ಮಾಡೋಣ. ಪರಿಹಾರ ಕಾರ್ಯಗಳಲ್ಲಿ ನಿರತವಾಗಿರುವ ಆಡಳಿತಕ್ಕೆ ಸಂಪೂರ್ಣ ಸಹಕಾರ ನೀಡಿ. ಹೆಚ್ಚಿನ ಅವಘಡಗಳಾಗದಂತೆ, ಹಾನಿಯಾಗದಂತೆ ನಾವೆಲ್ಲರೂ ಒಟ್ಟುಗೂಡಿ ‘ಡಾನಾ’ವನ್ನು ಎದುರಿಸೋಣ. ನಾವೆಲ್ಲರೂ ಹೀಗೆ ಒಗ್ಗೂಡಿ ಕೆಲಸ ಮಾಡಿದರೆ, ಇದು ಸಾಧ್ಯವಾಗಲಿದೆ ಎಂಬ ನಂಬಿಕೆ ನನಗಿದೆ.
ಪಶ್ಚಿಮ ಬಂಗಾಳ 150 ರೈಲುಗಳು ರದ್ದು
ಚಂಡಮಾರುತವು ಪಶ್ಚಿಮ ಬಂಗಾಳಕ್ಕೂ ಅಪ್ಪಳಿಸಲಿದ್ದು, ರಾಜ್ಯದ ದಕ್ಷಿಣ ಭಾಗದ ಜಿಲ್ಲೆಗಳಲ್ಲಿ ಭಾರಿ ಮಳೆಯಾಗಲಿದೆ. ‘ಡಾನಾ’ ಕಾರಣದಿಂದಾಗಿ ಆಗ್ನೇಯ ರೈಲ್ವೆ ವ್ಯಾಪ್ತಿಯಲ್ಲಿ ಸಂಚರಿಸುವ ಸುಮಾರು 150 ಎಕ್ಸ್‌ಪ್ರೆಸ್ ಹಾಗೂ ಪ್ರಯಾಣಿಕ ರೈಲುಗಳನ್ನು ರದ್ದು ಮಾಡಲಾಗಿದೆ.
‘ಅ.23ರಿಂದ ಅ.25ರವರೆಗೆ ಹೊರಡಬೇಕಿದ್ದ ಎಲ್ಲ ರೈಲುಗಳನ್ನು ರದ್ದು ಮಾಡಲಾಗಿದೆ. ಪರಿಸ್ಥಿತಿ ಹದಗೆಟ್ಟರೆ, ಇನ್ನಷ್ಟು ರೈಲುಗಳ ಸಂಚಾರವನ್ನು ರದ್ದು ಮಾಡಲಾಗುವುದು’ ಎಂದು ಆಗ್ನೇಯ ರೈಲ್ವೆ ಬುಧವಾರ ತಿಳಿಸಿದೆ. ಈ ರೈಲ್ವೆ ವ್ಯಾಪ್ತಿಯು ಪಶ್ಚಿಮ ಬಂಗಾಳ, ಒಡಿಶಾ ಹಾಗೂ ಜಾರ್ಖಂಡ್‌ಗೆ ವಿಸ್ತರಿಸಿದೆ. ಈ ರೈಲ್ವೆಯ ಕೇಂದ್ರ ಕಚೇರಿಯು ಕೋಲ್ಕತ್ತದಲ್ಲಿದೆ.
ರಾಜ್ಯದಲ್ಲಿರುವ ಪೂರ್ವ ರೈಲ್ವೆಯ ಸಿಯಲ್‌ದಹ್ ವಿಭಾಗದಿಂದ ಹೊರಡುವ ಎಲ್ಲ ರೈಲುಗಳನ್ನೂ ಇಲಾಖೆ ರದ್ದು ಮಾಡಿದೆ. ಅ.24 ಹಾಗೂ 25ರಂದು ಯಾವುದೇ ರೈಲು ಸಂಚರಿಸುವುದಿಲ್ಲ. ಈ ವಿಭಾಗದ ಅಡಿಯಲ್ಲಿ ರಾಜ್ಯದ ಒಟ್ಟು 6 ಜಿಲ್ಲೆಗಳು ಬರಲಿವೆ. ಈ ಜಿಲ್ಲೆಗಳು ‘ಡಾನಾ’ದಿಂದ ತೀವ್ರ ಪರಿಣಾಮ ಎದುರಿಸಲಿವೆ. ‘ಗುರುವಾರ ಮತ್ತು ಶುಕ್ರವಾರ ಕೋಲ್ಕತ್ತದಿಂದ ಹೊರಡುವ ಎಲ್ಲ ವಿಮಾನಗಳ ಸಂಚಾರವನ್ನು ರದ್ದು ಮಾಡಲಾಗಿದೆ’ ಎಂದು ಭಾರತೀಯ ವಿಮಾನಯಾನ ಪ್ರಾಧಿಕಾರವು ತಿಳಿಸಿದೆ.
‘ಅ.23ರಿಂದ 26ರವರೆಗೆ ಶಾಲಾ–ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಚಂಡಮಾರುತದ ಪರಿಣಾಮ ಎದುರಿಸುವ ಜಿಲ್ಲೆಗಳಲ್ಲಿ ವಾಸಿಸುವ ತಗ್ಗು ಪ್ರದೇಶಗಳ ಜನರನ್ನು ಸ್ಥಳಾಂತರಿಸುವ ಕಾರ್ಯ ನಡೆಯುತ್ತಿದೆ. ಈ ಪ್ರದೇಶಗಳಲ್ಲಿ ಎನ್‌ಡಿಆರ್‌ಎಫ್ ಹಾಗೂ ಎಸ್‌ಡಿಆರ್‌ಎಫ್ ತಂಡಗಳನ್ನು ನಿಯೋಜಿಸಲಾಗಿದೆ. ಜಿಲ್ಲೆಗಳಲ್ಲಿ ನಿಯಂತ್ರಣ ಕೊಠಡಿಗಳನ್ನು ತೆರೆಯಲಾಗಿದ್ದು, 24/7 ಕಾರ್ಯನಿರ್ವಹಿಸಲಿವೆ’ ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮಾಹಿತಿ ನೀಡಿದರು.
‘ಕಾಂಡ್ಲಾ ಕಾಡು: ತಗ್ಗಲಿದೆ ಪರಿಣಾಮ’
‘ಡಾನಾ’ವು ಒಡಿಶಾದ ‘ಭಿತರ್‌ಕನಿಕಾ ರಾಷ್ಟ್ರೀಯ ಉದ್ಯಾನ’ಕ್ಕೆ ಅಪ್ಪಳಿಸಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ಆದರೆ, ಈ ಉದ್ಯಾನದಲ್ಲಿ ಇರುವ ಕಾಂಡ್ಲಾ ಕಾಡುಗಳು ರಾಜ್ಯದ ಮೇಲಾಗುವ ಚಂಡಮಾರುತದ ಪರಿಣಾಮವನ್ನು ತಗ್ಗಿಸಲಿವೆ’ ಎಂದು ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಸುಸಂತಾ ನಂದ ಹೇಳಿದರು.
‘ಉದ್ಯಾನದ 200 ಚದರ ಕಿ.ಮೀ ವ್ಯಾಪ್ತಿಯಲ್ಲಿ ಈ ಕಾಡು ಇದೆ. ಇವು ಸಮುದ್ರದ ಉಬ್ಬರವಿಳಿತ ಹಾಗೂ ಗಾಳಿಯ ವೇಗವನ್ನು ತಗ್ಗಿಸಲಿವೆ’ ಎಂದರು. ‘ಈ ಉದ್ಯಾನದಲ್ಲಿ ರುವ ಪ್ರಾಣಿಗಳು ಚಂಡಮಾರುತಗಳಿಗೆ ಒಗ್ಗಿಕೊಂಡಿವೆ. ಜಿಂಕೆಗಳು ಕಾಡಿನ ಒಳಗೆ ಸುರಕ್ಷಿತ ಪ್ರದೇಶಗಳಿಗೆ ತೆರಳಲಿವೆ ಹಾಗೂ ಹಕ್ಕಿಗಳು ಬೇರೆಡೆ ಹೋಗಲಿವೆ. ಇಲ್ಲಿರುವ ಮೊಸಳೆಗಳು ತುಸು ಪರಿಣಾಮಗಳನ್ನು ಎದುರಿಸಲಿವೆ. ಸಮುದ್ರದ ಉಬ್ಬರವು ಏರಿಕೆಯಾದರೆ, ಇವುಗಳನ್ನು ಬೇರೆ ವಾಸಸ್ಥಾನಗಳಿಗೆ ಸ್ಥಳಾಂತರಿಸಲಾಗುವುದು’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.