ADVERTISEMENT

Dana Cyclone | ತಗ್ಗಿದ ‘ಡಾನಾ’ ಪ್ರಭಾವ: ಚುರುಕು ಪಡೆದ ಪರಿಹಾರ ಕಾರ್ಯ

ಪಿಟಿಐ
Published 26 ಅಕ್ಟೋಬರ್ 2024, 14:20 IST
Last Updated 26 ಅಕ್ಟೋಬರ್ 2024, 14:20 IST
<div class="paragraphs"><p>‘ಡಾನಾ’ ಆರ್ಭಟಕ್ಕೆ ಪಶ್ಚಿಮ ಬಂಗಾಳದ ಬೀರ್‌ಭೂಮ್‌ ಜಿಲ್ಲೆಯಲ್ಲಿ ಜಲಾವೃತವಾದ ಭತ್ತದ ಗದ್ದೆಯಲ್ಲಿ ಬೆಳೆ ರಕ್ಷಣೆಗೆ ರೈತರೊಬ್ಬರು ಯತ್ನಿಸಿದರು </p></div>

‘ಡಾನಾ’ ಆರ್ಭಟಕ್ಕೆ ಪಶ್ಚಿಮ ಬಂಗಾಳದ ಬೀರ್‌ಭೂಮ್‌ ಜಿಲ್ಲೆಯಲ್ಲಿ ಜಲಾವೃತವಾದ ಭತ್ತದ ಗದ್ದೆಯಲ್ಲಿ ಬೆಳೆ ರಕ್ಷಣೆಗೆ ರೈತರೊಬ್ಬರು ಯತ್ನಿಸಿದರು

   

–ಪಿಟಿಐ ಚಿತ್ರ

ಭುವನೇಶ್ವರ/ ಕೋಲ್ಕತ್ತ: ‘ಡಾನಾ’ ಚಂಡಮಾರುತದಿಂದಾಗಿ ಪಶ್ಚಿಮ ಬಂಗಾಳದಲ್ಲಿ ಶನಿವಾರ ಇನ್ನೂ ಇಬ್ಬರು ಮೃತಪಟ್ಟಿದ್ದಾರೆ. ಒಡಿಶಾ ಹಾಗೂ ಪಶ್ಚಿಮ ಬಂಗಾಳದಲ್ಲಿ ದೊಡ್ಡ ಪ್ರಮಾಣದಲ್ಲಿ ಬೆಳೆಗಳು ನಾಶವಾಗಿವೆ. ಒಡಿಶಾದ ಬಾಲೇಶ್ವರ ಜಿಲ್ಲೆಯಲ್ಲಿ ಅತಿ ಹೆಚ್ಚು ಹಾನಿಯಾಗಿದೆ. ಇಲ್ಲಿನ ಕೆಲವು ನದಿಗಳು ಅಪಾಯಮಟ್ಟ ಮೀರಿ ಹರಿಯುತ್ತಿವೆ. ನೂರಾರು ಮನೆಗಳ ವಿದ್ಯುತ್‌ ಸಂಪರ್ಕ ಕಡಿತಗೊಂಡಿದೆ. ಎರಡು ರಾಜ್ಯಗಳಲ್ಲಿ ಮಳೆ ಸುರಿಯುತ್ತಿದ್ದರೂ ‘ಡಾನಾ’ದ ಪ್ರಭಾವ ತಗ್ಗಿದೆ. ಪರಿಹಾರ ಕಾರ್ಯಗಳು ಚುರುಕು ಪಡೆದಿವೆ

ADVERTISEMENT

ಪಶ್ಚಿಮ ಬಂಗಾಳ: ಇಬ್ಬರ ಸಾವು ಪಶ್ಚಿಮ ಬಂಗಾಳದಲ್ಲಿ ಚಂಡಮಾರುತದಿಂದಾಗಿ ಮೃತಪಟ್ಟವರ ಒಟ್ಟು ಸಂಖ್ಯೆ ನಾಲ್ಕಕ್ಕೆ ಏರಿದೆ. ಶುಕ್ರವಾರ ಇಬ್ಬರು ಮೃತಪಟ್ಟಿದ್ದರು. ಪೂರ್ವ ಬರ್ದಮಾನ್‌ ಜಿಲ್ಲೆಯಲ್ಲಿ ಪೊಲೀಸರ ತಂಡದೊಂದಿಗೆ ಪರಿಹಾರ ಕಾರ್ಯಕ್ಕೆ ತೆರಳಿದ್ದ ಸ್ವಯಂಸೇವಕ ಚಂದನ್‌ ದಾಸ್‌ (31) ಎಂಬುವರು ವಿದ್ಯುತ್‌ ತಂತಿ ತಗುಲಿದ್ದರಿಂದ ಶನಿವಾರ ಮೃತಪಟ್ಟರು.

ಹೌರಾ ಮಹಾನಗರ ಪಾಲಿಕೆಯ ಸಿಬ್ಬಂದಿಯೊಬ್ಬರು ನೀರಿನಲ್ಲಿ ಮುಳುಗಿ ಮೃತಪಟ್ಟರು. ರಾಜ್ಯದಲ್ಲಿ ‘ಡಾನಾ’ ಪ್ರಭಾವ ತಗ್ಗಿದೆ. ಶುಕ್ರವಾರದಿಂದ ಶನಿವಾರ ಬೆಳಿಗ್ಗೆವರೆಗಿನ ಅವಧಿಯಲ್ಲಿ ಕೋಲ್ಕತ್ತದಲ್ಲಿ 15.28 ಸೆಂ.ಮೀನಷ್ಟು ಮಳೆಯಾಗಿದೆ. ಆದರೆ ಹೂಗ್ಲಿ ಪುರ್ಬಾ ಹಾಗೂ ಮೇಧಿನಿಪುರ ಝರ್‌ಗ್ರಾಮ್‌ ಜಿಲ್ಲೆಗಳಲ್ಲಿ ಪ್ರವಾಹ ಸ್ಥಿತಿ ಮುಂದುವರಿದಿದೆ. ಈ ಜಿಲ್ಲೆಗಳಲ್ಲಿ ಮಳೆ ಮುಂದುವರಿಯಲಿದ್ದು ಭಾನುವಾರದ ಹೊತ್ತಿಗೆ ಪರಿಸ್ಥಿತಿ ಸುಧಾರಿಸಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಒಡಿಶಾ: 4 ಪ್ರದೇಶಗಳಲ್ಲಿ 20 ಸೆಂ.ಮೀಗೂ ಅಧಿಕ ಮಳೆ ‘ಡಾನಾ’ ಚಂಡಮಾರುತದ ತೀವ್ರತೆಯು ಕಡಿಮೆಯಾಗಿದ್ದು ಒಡಿಶಾದ ಉತ್ತರ ಭಾಗದಿಂದ ಪಶ್ಚಿಮ ದಿಕ್ಕಿಗೆ ಚಂಡಮಾರುತ ಸಾಗುತ್ತಿದೆ. ಹೀಗೆ ಸಾಗುತ್ತ ಮುಂದಿನ 12 ಗಂಟೆಗಳಲ್ಲಿ ಚಂಡಮಾರುತದ ತೀವ್ರತೆಯು ಇನ್ನಷ್ಟು ತಗ್ಗಲಿದೆ’ ಎಂದು ಭಾರತೀಯ ಹವಾಮಾನ ಇಲಾಖೆ ಶನಿವಾರ ಮಾಹಿತಿ ನೀಡಿದೆ.

  • ಚಂಡಮಾರುತದ ಕಾರಣದಿಂದ ಶುಕ್ರವಾರ ಒಡಿಶಾದ ಬಾಲೇಶ್ವರ ಜಿಲ್ಲೆಯ ಔಪದಾ ಪ್ರದೇಶದಲ್ಲಿ 24 ಸೆಂ.ಮೀನಷ್ಟು ಮಳೆ ಸುರಿದಿದೆ. ಭದ್ರಕ್‌ ಜಿಲ್ಲೆ ಧಮ್‌ನಗರದಲ್ಲಿ 21.5 ಸೆಂ.ಮೀ ಬಾಲೇಶ್ವರದ ಖೈರಾದಲ್ಲಿ 20.9 ಸೆಂ.ಮೀ ಭದ್ರಕ್‌ನ ಬೋಂಟ್‌ನಲ್ಲಿ 18.7 ಸೆಂ.ಮೀನಷ್ಟು ಮಳೆಯಾಗಿದೆ. ಹವಾಮಾನ ಇಲಾಖೆಯ ಪ್ರಕಾರ ರಾಜ್ಯದ ಸುಮಾರು 16 ಸ್ಥಳಗಳಲ್ಲಿ 10 ಸೆಂ.ಮೀಗಿಂತ ಅಧಿಕ ಮಳೆಯಾಗಿದ್ದರೆ ನಾಲ್ಕು ಪ್ರದೇಶಗಳಲ್ಲಿ 20 ಸೆಂ.ಮೀಗಿಂತ ಅಧಿಕ ಮಳೆ ಸುರಿದಿದೆ.

  • ಜನರೊಂದಿಗೆ ಕೆಟ್ಟದಾಗಿ ವರ್ತಿಸಿದ ಮೂವರು ಪಂಚಾಯಿತಿ ವಿಸ್ತೀರ್ಣಾಧಿಕಾರಿಗಳು ಹಾಗೂ ಒಬ್ಬ ಕಂದಾಯ ನಿರೀಕ್ಷಕನನ್ನು ಸರ್ಕಾರ ಅಮಾನತು ಮಾಡಿದೆ. ಈ ಅಧಿಕಾರಿಗಳು ಚಂಡಮಾರುತ ಭಾದಿತ ಪ್ರದೇಶಗಳಲ್ಲಿ ಜನರ ಸ್ಥಳಾಂತರ ಕಾರ್ಯದಲ್ಲಿ ತೊಡಗಿದ್ದರು. ‘ಈ ನಾಲ್ವರ ವಿರುದ್ಧ ಸಾಕ್ಷ್ಯ ದೊರೆತಿದ್ದರಿಂದ ಅಮಾನತು ಮಾಡಲಾಗಿದೆ. ಇನ್ನಷ್ಟು ಅಧಿಕಾರಿಗಳ ವಿರುದ್ಧವೂ ದೂರು ಬಂದಿದ್ದು ಸಾಕ್ಷ್ಯ ದೊರೆತ ಕೂಡಲೇ ಅವರ ಮೇಲೂ ಕ್ರಮ ಕೈಗೊಳ್ಳಲಾಗುವುದು’ ಎಂದು ವಿಪತ್ತು ನಿರ್ವಹಣಾ ಸಚಿವ ಸುರೇಶ್‌ ಪೂಜಾರಿ ಮಾಹಿತಿ ನೀಡಿದರು

  • ಪಾರ್ಶ್ವವಾಯು ಬಾಧಿತ ಮಹಿಳೆಯೊಬ್ಬರನ್ನು ಒಂದೂವರೆ ಕೀ.ಮೀ ದೂರದ ನಿರಾಶ್ರಿತ ಶಿಬಿರಕ್ಕೆ ತನ್ನ ಬೆನ್ನ ಮೇಲೆ ಹೊತ್ತೊಯ್ದ ಆರೋಗ್ಯ ಕಾರ್ಯಕರ್ತೆ ಸಿಬಾನಿ ಮಂಡಲ್‌ ಅವರ ಕಾರ್ಯಕ್ಕೆ ಮುಖ್ಯಮಂತ್ರಿ ಮೋಹನ್‌ ಚರಣ್‌ ಮಾಝಿ ಮೆಚ್ಚುಗೆ ಸೂಚಿಸಿದ್ದಾರೆ. ಸಿಬಾನಿ ಅವರಿಗೆ ಮನೆಯೊಂದನ್ನು ಕಟ್ಟಿಸಿಕೊಡುವ ಬಗ್ಗೆ ಸ್ಥಳೀಯ ಅಧಿಕಾರಿಗಳಿಗೆ ಮುಖ್ಯಮಂತ್ರಿ ನಿರ್ದೇಶನ ನೀಡಿದ್ದಾರೆ

2201 ಗರ್ಭಿಣಿಯರಿಗೆ ಹೆರಿಗೆ

‘ಡಾನಾ’ ಚಂಡಮಾರುತ ಅಪ್ಪಳಿಸುವ ಮುನ್ಸೂಚನೆ ಸಿಕ್ಕ ಬಳಿಕ ಒಡಿಶಾ ಸರ್ಕಾರವು 4859 ತುಂಬು ಗರ್ಭಿಣಿಯರನ್ನು ಸುರಕ್ಷಿತ ಸ್ಥಳಗಳಲ್ಲಿನ ಆಸ್ಪತ್ರೆಗೆ ದಾಖಲು ಮಾಡಿತ್ತು. ಈ ವಿಪತ್ತಿನ ಅವಧಿಯಲ್ಲಿ 4859 ಮಂದಿಯ ಪೈಕಿ 2201 ಗರ್ಭಿಣಿಯರಿಗೆ ಹೆರಿಗೆಯಾಗಿದೆ. ಒಟ್ಟು 18 ಅವಳಿ ಮಕ್ಕಳು ಜನಿಸಿವೆ. 1858 ಗರ್ಭಿಣಿಯರಿಗೆ ಸಹಜ ಹೆರಿಗೆಯಾಗಿದ್ದರೆ 343 ಮಹಿಳೆಯರಿಗೆ ಸಿಸೇರಿಯನ್‌ ಮಾಡಲಾಗಿದೆ.

ಎಲ್ಲ ತಾಯಂದಿರು ಹಾಗೂ ಶಿಶುಗಳು ಆರೋಗ್ಯವಾಗಿದ್ದಾರೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಚಂಡಮಾರುತ ಅಪ್ಪಳಿಸಿದ ದಿನ ಊರ್ವಶಿ ಎಂಬುವವರು ಅವಳಿ ಮಕ್ಕಳಿಗೆ ಜನ್ಮ ನೀಡಿದ್ದಾರೆ. ಇದರಿಂದಾಗಿ ಅವರು ತಮ್ಮ ಅವಳಿ ಮಕ್ಕಳಲ್ಲಿ ಒಂದು ಶಿಶುವಿಗೆ ‘ಡಾನಾ’ ಎಂದು ಇನ್ನೊಂದು ಮಗುವಿಗೆ ‘ಡಾನಾಬತಿ’ ಎಂದು ನಾಮಕರಣ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.