ಕೋಲ್ಕತ್ತ:ಒಡಿಶಾದಲ್ಲಿ ಭಾರಿ ಹಾನಿ ಉಂಟುಮಾಡಿರುವ ಫೋನಿ ಚಂಡಮಾರುತವು ಶುಕ್ರವಾರ ಮಧ್ಯರಾತ್ರಿ ಪಶ್ಚಿಮ ಬಂಗಾಳವನ್ನು ಪ್ರವೇಶಿಸಿದ್ದು ಬೀರುಗಾಳಿ ಸಹಿತ ಭಾರಿ ಮಳೆಯಾಗುತ್ತಿದೆ.
ಶುಕ್ರವಾರ ಒಡಿಶಾ ಕರಾವಳಿಗೆ ಅಪ್ಪಳಿಸಿದ್ದ ಫೋನಿ ಚಂಡಮಾರುತ ಅಪಾರ ಪ್ರಮಾಣದಲ್ಲಿ ಹಾನಿಯನ್ನು ಉಂಟು ಮಾಡಿತ್ತು. ತಾಸಿಗೆ 175 ಕಿ.ಮೀ.ಗೂ ಹೆಚ್ಚು ವೇಗದ ಗಾಳಿ ಜನ ಜೀವನವನ್ನು ತಲ್ಲಣಗೊಳಿಸಿತ್ತು. ಹುಲ್ಲು ಚಾವಣಿಯ ಮನೆಗಳು ಗಾಳಿಗೆ ಹಾರಿ ಹೋಗಿವೆ. ಸುಮಾರು 15 ಪಟ್ಟಣಗಳು ಮತ್ತು ನೂರಾರು ಗ್ರಾಮಗಳು ನೀರಿನಿಂದ ಆವೃತವಾಗಿವೆ.
ಸಂಜೆಯ ವೇಳೆಗೆ ಫೋನಿಯ ತೀವ್ರತೆ ಸ್ವಲ್ಪ ಕಡಿಮೆಯಾಗಿ ಪಶ್ಚಿಮ ಬಂಗಾಳದತ್ತ ಹೊರಟಿತು. ಶುಕ್ರವಾರ ಮಧ್ಯರಾತ್ರಿ ಗಂಟೆಗೆ ಸುಮಾರು 70 ರಿಂದ 100 ಕಿ.ಮೀ. ವೇಗದಲ್ಲಿ ಬಂಗಾಳದ ಕರಾವಳಿ ತೀರವನ್ನು ಅಪ್ಪಳಿಸಿತು ಎಂದು ಹವಾಮಾನ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.
ಕೋಲ್ಕತ್ತ , ಮಿಡ್ನಾಪುರ ಸೇರಿದಂತೆ ಬಂಗಾಳದಲ್ಲಿ ಕರಾವಳಿ ಜಿಲ್ಲೆಗಳಲ್ಲಿ ವ್ಯಾಪಕವಾಘಿ ಮಳೆ ಸುರಿಯುತ್ತಿದೆ. ಗಾಳಿಯ ಪರಿಣಾಮ ಸಾವಿರಾರು ವಿದ್ಯುತ್ ಕಂಬಗಳು ಮತ್ತು ಮರಗಳು ನೆಲಕ್ಕೆ ಉರುಳಿವೆ. ಇಲ್ಲಿಯವರೆಗೂ ಯಾವುದೇ ಪ್ರಾಣಹಾನಿ ಆದ ಬಗ್ಗೆ ವರದಿಗಳು ಬಂದಿಲ್ಲ.
ಫೋನಿಯನ್ನು ಎದುರಿಸಲು ಪಶ್ಚಿಮ ಬಂಗಾಳ ಸರ್ಕಾರವು ಸಾಕಷ್ಟು ಸಿದ್ಧತೆಗಳನ್ನು ಮಾಡಿಕೊಂಡಿದ್ದು ಕರಾವಳಿ ಜಿಲ್ಲೆಗಳಲ್ಲಿ ಕಟ್ಟೆಚ್ಚರ ಘೋಷಿಸಲಾಗಿದೆ. ಕೋಲ್ಕತ್ತದಲ್ಲಿ ಎರಡು ದೊಡ್ಡ ಮಾಲ್‌ಗಳನ್ನು ಶುಕ್ರವಾರ ಸಂಜೆಯಿಂದಲೇ ಮುಚ್ಚಿಸಲಾಗಿದೆ. ಎಲ್ಲ ಸರ್ಕಾರಿ ಮತ್ತು ಅನುದಾನಿತ ಶಾಲೆಗಳಿಗೆ ರಜೆ ಘೋಷಿಸಲಾಗಿದೆ. ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಮುಂದಿನ 48 ಗಂಟೆಗಳ ಕಾಲ ತಮ್ಮ ಎಲ್ಲಾ ರಾಜಕೀಯ ಸಭೆ– ಸಮಾರಂಭಗಳನ್ನು ರದ್ದುಪಡಿಸಿದ್ದು, ಖರಗ್‌ಪುರ ಪಟ್ಟಣದಲ್ಲಿದ್ದುಕೊಂಡು ಪರಿಸ್ಥಿತಿಯನ್ನು ಅವಲೋಕನ ಮಾಡುತ್ತಿದ್ದಾರೆ.
ಪಶ್ಚಿಮ ಮಿಡ್ನಾಪುರ, ಪೂರ್ವ ಮಿಡ್ನಾಪುರ ಮತ್ತು ಹೂಗ್ಲಿ ಜಿಲ್ಲೆಗಳಲ್ಲಿ ಧಾರಾಕಾರ ಮಳೆ ಸುರಿಯುತ್ತಿದ್ದು ಸುಮಾರು 2 ಲಕ್ಷಕ್ಕೂ ಹೆಚ್ಚು ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ.
ಫೋನಿಯ ವೇಗ ಕಡಿಮೆಯಾಗಿದ್ದು ಪೂರ್ವ ಮಿಡ್ನಾಪುರ ಕರಾವಳಿ ತೀರದ ಮೂಲಕ ಈಶಾನ್ಯ ರಾಜ್ಯಗಳತ್ತ ಹಾದುಹೋಗಲಿದೆ. ಮುಂದೆ ಬಾಂಗ್ಲಾದೇಶ ಪ್ರವೇಶಿಸುವ ವೇಳೆಗೆ ಫೋನಿ ದುರ್ಬಲವಾಗುವ ಸಾಧ್ಯತೆಗಳಿವೆ ಎಂದು ಹವಾಮಾನ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.