ಚೆನ್ನೈ: ವಾಯುಭಾರ ಕುಸಿತದಿಂದಾಗಿ ಬಂಗಾಲಕೊಲ್ಲಿ ಸಮುದ್ರದ ಕಡಿಮೆ ಒತ್ತಡ ವಲಯದಲ್ಲಿ ಶನಿವಾರದ (ಡಿ.3) ವೇಳೆಗೆ ಚಂಡಮಾರುತ ಮೂಡುವ ಸಾಧ್ಯತೆಗಳಿವೆ ಎಂದು ಭಾರತೀಯ ಹವಾಮಾನ ಇಲಾಖೆಯು ಅಂದಾಜು ಮಾಡಿದೆ.
ಇದರ ಪರಿಣಾಮ, ತಮಿಳುನಾಡಿನ ವಿವಿಧೆಡೆ ಮುಂದಿನ ಐದು ದಿನ ಧಾರಾಕಾರ ಮಳೆಯಾಗಬಹುದು ಎಂದು ಮುನ್ಸೂಚನೆ ನೀಡಿದೆ. ಬುಧವಾರವಷ್ಟೇ ಭಾರಿ ಮಳೆ ಸುರಿದಿದ್ದು, ಚೆನ್ನೈ ಮತ್ತು ನೆರೆಯ ತಿರುವಲ್ಲೂರು, ಕಾಂಚೀಪುರ, ಚೆಂಗಾಲಪಟ್ಟು ಜಿಲ್ಲೆಗಳಲ್ಲಿ ಪರಿಸ್ಥಿತಿ ಸಹಜ ಸ್ಥಿತಿಗೆ ಮರಳುತ್ತಿತ್ತು.
ಚೆನ್ನೈ ನಗರದಲ್ಲಿ ಮಳೆಯ ಸರಾಸರಿ ಪ್ರಮಾಣ 9.8 ಸೆಂ.ಮೀ ಆಗಿದೆ. ‘ಚೆನ್ನೈ ಮತ್ತು ತಮಿಳುನಾಡಿನ ಉತ್ತರ ಭಾಗದ ಜಿಲ್ಲೆಗಳಲ್ಲಿ ನವೆಂಬರ್ 30ರಿಂದ ಡಿಸೆಂಬರ್ 4ರ ಅವಧಿಯಲ್ಲಿ ಧಾರಾಕಾರ ಮಳೆಯಾಗುವ ಸೂಚನೆಗಳಿವೆ’ ಎಂದು ಹವಾಮಾನ ಇಲಾಖೆಯು ಮುನ್ಸೂಚನೆ ನೀಡಿದೆ.
ಚಂಡಮಾರುತವು ಮೊದಲು ಪಶ್ಚಿಮಾಭಿಮುಖವಾಗಿ, ಡಿ. 3ರ ನಂತರ ಉತ್ತರಾಭಿಮುಖವಾಗಿ ಸಾಗಲಿದೆ. ಇದರಿಂದಾಗಿ, ತಮಿಳುನಾಡಿನ ಉತ್ತರದ ಪ್ರದೇಶಗಳು, ಆಂಧ್ರಪ್ರದೇಶದ ದಕ್ಷಿಣ ಭಾಗದ ಜಿಲ್ಲೆಗಳಲ್ಲಿ ಮಳೆಯಾಗಬಹುದು ಎಂದು ತಿಳಿಸಿದೆ.
ಬುಧವಾರ ಸುರಿದ ಮಳೆಯಿಂದಾಗಿ ಚೆನ್ನೈನಲ್ಲಿ ತಗ್ಗು ಭಾಗದ ಹಲವು ಪ್ರದೇಶಗಳಲ್ಲಿ ಇನ್ನೂ ನೀರು ನಿಂತಿದೆ. ಒಳವಲಯದ ಹಲವು ರಸ್ತೆಗಳು ಜಲಾವೃತಗೊಂಡಿವೆ ಎಂದು ನಾಗರಿಕರು ದೂರಿದ್ದಾರೆ.
ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಅವರು ಗ್ರೇಟರ್ ಚೆನ್ನೈ ಕಾರ್ಪೊರೇಷನ್ (ಜಿಸಿಸಿ) ಸ್ಥಾಪಿಸಿರುವ ನಿಯಂತ್ರಣ ಕೊಠಡಿಗಗೆ ಭೇಟಿ ನೀಡಿದ್ದು, ವಸ್ತುಸ್ಥಿತಿಯ ಮಾಹಿತಿ ಪಡೆದರು. ಪರಿಸ್ಥಿತಿಯನ್ನು ಎದುರಿಸಲು ಎಲ್ಲ ಇಲಾಖೆಗಳು ಒಟ್ಟಾಗಿ ಕಾರ್ಯನಿರ್ವಹಿಸಬೇಕು ಎಂದು ನಿರ್ದೇಶನ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.