ಮುಂಬೈ: ‘ತೌತೆ’ ಚಂಡಮಾರುತದ ಹಿನ್ನೆಲೆಯಲ್ಲಿ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರು ಸೋಮವಾರ ಮುಂಬೈ, ಠಾಣೆ ಮತ್ತು ಇತರೆ ಕರಾವಳಿ ಜಿಲ್ಲೆಗಳಲ್ಲಿ ಸಿದ್ಧತಾ ಕಾರ್ಯವನ್ನು ಪರಿಶೀಲಿಸಿದರು.
‘ರತ್ನಗಿರಿ, ಸಿಂಧುದುರ್ಗ ಮತ್ತು ರಾಯಗಡ ಜಿಲ್ಲೆಗಳ ಕರಾವಳಿ ಪ್ರದೇಶಗಳಲ್ಲಿ ವಾಸಿಸುವ 12,420 ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ’ ಎಂದು ಅಧಿಕೃತ ಹೇಳಿಕೆ ಬಿಡುಗಡೆ ಮಾಡಲಾಗಿದೆ.
‘ಚಂಡಮಾರುತದಿಂದಾಗಿ ಕೋವಿಡ್ ರೋಗಿಗಳ ಚಿಕಿತ್ಸೆಯಲ್ಲಿ ಯಾವುದೇ ತೊಂದರೆ ಉಂಟಾಗದಂತೆ ಕ್ರಮ ಕೈಗೊಳ್ಳಿ’ ಎಂದು ಮುಂಬೈ, ಠಾಣೆ ಸೇರಿದಂತೆ ಇತರೆ ಜಿಲ್ಲೆಗಳ ಅಧಿಕಾರಿಗಳಿಗೆಉದ್ಧವ್ ಠಾಕ್ರೆ ಅವರು ಸೂಚಿಸಿದ್ದಾರೆ.
ರಾಯಗಡ ಜಿಲ್ಲೆಯಲ್ಲಿ ರೆಡ್ ಅಲರ್ಟ್ ಮತ್ತು ಮುಂಬೈ, ಠಾಣೆ, ಪಾಲ್ಘಾರ್‌ನಲ್ಲಿ ಆರೆಂಜ್ ಅಲರ್ಟ್ ಅನ್ನು ಘೋಷಿಸಲಾಗಿದೆ.
ಇನ್ನೊಂದೆಡೆ ರಾಜ್ಯ ಸಚಿವಾಲಯದ ವಿಪತ್ತು ನಿರ್ವಹಣಾ ಘಟಕಕ್ಕೆ ಭೇಟಿ ನೀಡಿದ ಉಪಮುಖ್ಯಮಂತ್ರಿ ಅಜಿತ್ ಪವಾರ್ ಅವರು ಪರಿಹಾರ ಕಾರ್ಯಗಳನ್ನು ಪರಿಶೀಲಿಸಿದರು. ಜತೆಗೆ ಎಲ್ಲಾ ಕರಾವಳಿ ಜಿಲ್ಲೆಗಳ ಆಡಳಿತ ಅಧಿಕಾರಿಗಳಿಗೆ ಜಾಗರೂಕರಾಗಿರುವಂತೆ ಸೂಚಿಸಿದರು.
ರತ್ನಗಿರಿ, ಸಿಂಧುದುರ್ಗ್ ಮತ್ತು ರಾಯಗಡ, ಠಾಣೆ, ಪಾಲ್ಘಾರ್ , ಮುಂಬೈ ನಗರಮತ್ತು ಉಪನಗರದ ಜಿಲ್ಲಾಧಿಕಾರಿಗಳು ಹಾಗೂ ಬೃಹತ್ ಮುಂಬೈ ನಗರ ಪಾಲಿಕೆಯ ಆಯುಕ್ತ ಇಕ್ಬಾಲ್ ಸಿಂಗ್ ಅವರೊಂದಿಗೆ ದೂರವಾಣಿ ಕರೆಯ ಮೂಲಕ ಪರಿಹಾರ ಕಾರ್ಯ ಮತ್ತು ಸಿದ್ಧತೆ ಬಗ್ಗೆ ಅಜಿತ್ ಪವಾರ್ ಮಾಹಿತಿ ಪಡೆದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.